ADVERTISEMENT

ಮೈಸೂರು | ರಾಜ್ಯೋತ್ಸವ ಅದ್ದೂರಿ ಆಚರಣೆಗೆ ತೀರ್ಮಾನ: ‌ಎಡಿಸಿ ಪಿ.ಶಿವರಾಜು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 7:30 IST
Last Updated 13 ಅಕ್ಟೋಬರ್ 2025, 7:30 IST
   

ಮೈಸೂರು: ‘ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನಗರದ ಓವೆಲ್‌ ಮೈದಾನದಲ್ಲಿ ಆಚರಿಸಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ತಿಳಿಸಿದರು.

ಇಲ್ಲಿನ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಅಂದು ಬೆಳಿಗ್ಗೆ 9ಕ್ಕೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಧ್ವಜಾರೋಹಣ ನೆರವೇರಿಸುವರು. ಅದಕ್ಕೂ ಮುಂಚೆ ಬೆಳಿಗ್ಗೆ 8ಕ್ಕೆ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಸಚಿವರು ಚಾಲನೆ ನೀಡುವರು. ಓವೆಲ್‌ ಮೈದಾನದವರೆಗೆ ಮೆರವಣಿಗೆ ನಡೆಯಲಿದ್ದು, ವಿವಿಧ ಕಲಾತಂಡಗಳು, ಪೊಲೀಸ್ ಬ್ಯಾಂಡ್, ಸ್ತಬ್ಧಚಿತ್ರಗಳು ಇರುತ್ತವೆ’ ಎಂದು ಹೇಳಿದರು.

ADVERTISEMENT

‘ಮಹಾನಗರ ಪಾಲಿಕೆಯಿಂದ ವೇದಿಕೆ, ಶಾಮಿಯಾನ ಹಾಗೂ ಆಸನ ವ್ಯವಸ್ಥೆ, ಅಲಂಕಾರ ಮತ್ತು ಆಹ್ವಾನಪತ್ರಿಕೆಗಳ ಮುದ್ರಣ, ಶಿಷ್ಟಾಚಾರದ ಪ್ರಕಾರ ಗಣ್ಯರ ಆಹ್ವಾನ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮೆರವಣಿಗೆಗೆ ಕಲಾ ತಂಡಗಳನ್ನು ಒದಗಿಸಲಿದೆ’ ಎಂದರು.

‘ಸ್ತಬ್ಧಚಿತ್ರಗಳು ಕನ್ನಡ ಭಾಷೆಯ ಹಿರಿಮೆ– ಗರಿಮೆ ಸಾರುವಂತೆ ಇರಬೇಕು. ನಾಡಗೀತೆ ರಚಿಸಿ 100 ವರ್ಷ ತುಂಬಿರುವ ಬಗ್ಗೆ ಸ್ತಬ್ಧಚಿತ್ರ ಸಿದ್ಧಪಡಿಸಬಹುದು’ ಎಂದು ಸಲಹೆ ನೀಡಿದರು.

‘ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ರಾಜ್ಯೋತ್ಸವದಲ್ಲಿ ಭಾಗವಹಿಸಬೇಕು. ಸ್ಥಳದಲ್ಲೇ ಹಾಜರಾತಿ ಪಡೆಯಲಾಗುವುದು’ ಎಂದು ತಿಳಿಸಿದರು.

ಬಹುಮಾನ, ಸನ್ಮಾನ:

‘ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಗುವುದು. ಕವಾಯತಿನಲ್ಲಿ ಭಾಗವಹಿಸುವ ಶಾಲಾ ಕಾಲೇಜು ಮಕ್ಕಳಿಗೆ ಲಘು ಉಪಹಾರ ವ್ಯವಸ್ಥೆಯನ್ನು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.

‘ಸ್ಟಾರ್ ಹೋಟೆಲ್‌ಗಳು ಹಾಗೂ ಮಾಲ್‌ಗಳಲ್ಲಿ ಕನ್ನಡ ನಾಮಫಲಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಬೇಕು. ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಭಾಷೆಯ ಚಿತ್ರಗಳನ್ನು ಹೆಚ್ಚು ಪ್ರದರ್ಶಿಸಬೇಕು. ಎಲ್ಲಾ ಕಡೆಯೂ ಕನ್ನಡ ಭಾಷೆಯ ಬಳಕೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು’ ಎಂದು ಕನ್ನಡ ಪರ ಹೋರಾಟಗಾರರು ಒತ್ತಾಯಿಸಿದರು.

‘ಎಲ್ಲಾ ಅಂಗಡಿ, ಮಾಲ್‌ಗಳಲ್ಲಿ ನಾಮಫಲಕದ ಶೇ 60ರಷ್ಟು ಕನ್ನಡದಲ್ಲಿ ಇರಬೇಕು. ಪಾಲಿಕೆಯಿಂದ ಅನುಮತಿ ನೀಡುವಾಗ ಈ ಷರತ್ತು ವಿಧಿಸಬೇಕು’ ಎಂದು ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡಪರ ಹೋರಾಟಗಾರರಾದ ಮೋಹನ್‌ಕುಮಾರ್‌ ಗೌಡ, ಅರವಿಂದ ಶರ್ಮಾ ಮೊದಲಾದವರು ಪಾಲ್ಗೊಂಡಿದ್ದರು.

ವಿವಿಧ ಜಯಂತಿ ಆಚರಣೆ:

ಅ.23ರಂದು ಬೆಳಿಗ್ಗೆ 11.3ಕ್ಕೆ ಕಿತ್ತೂರು ರಾಣಿ ಚನ್ನಮ್ಮ, ನ.11ರಂದು ಬೆಳಿಗ್ಗೆ 11.30ಕ್ಕೆ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಿಸಲು ತೀರ್ಮಾನಿಸಲಾಯಿತು.

ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಎಡಿಸಿ ಪಿ.ಶಿವರಾಜು, ‘ಜಯಂತಿಗಳ ಆಚರಣೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲಾ ಸಮುದಾಯದವರು ಸೇರಿ ಆಚರಿಸಬೇಕು. ಮಹನೀಯರ ಆದರ್ಶಗಳನ್ನು ತಿಳಿಸುವುದು ಹಾಗೂ ಅದನ್ನು ಪಾಲನೆ ಮಾಡುವಂತೆ ತಿಳಿಸುವುದು ಆಚರಣೆಗಳ ಉದ್ದೇಶವಾಗಿದೆ’ ಎಂದು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.