ADVERTISEMENT

ಮೈಸೂರು: ಅಧ್ಯಯನ ಸಾಮಗ್ರಿ ನೀಡದಿರಲು ನಿರ್ಣಯ, ವಿದ್ಯಾರ್ಥಿಗಳಲ್ಲಿ ನಿರಾಶೆ

ತಾಂತ್ರಿಕ ಕಾರಣ ನೀಡಿ ಕೆಎಸ್‌ಒಯು ಸುತ್ತೋಲೆ

ಮೋಹನ್ ಕುಮಾರ ಸಿ.
Published 30 ಜೂನ್ 2022, 5:37 IST
Last Updated 30 ಜೂನ್ 2022, 5:37 IST
ಕೆಎಸ್‌ಒಯು ಲೋಗೊ
ಕೆಎಸ್‌ಒಯು ಲೋಗೊ   

ಮೈಸೂರು: ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ನೀಡುತ್ತಿರುವ ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿನಲ್ಲಿ ಅಧ್ಯಯನ ಸಾಮಗ್ರಿಯನ್ನು (ಸಿದ್ಧ ಪಾಠ) ವಿತರಿಸದಿರುವ ತೀರ್ಮಾನಕ್ಕೆ ಬಂದಿದ್ದು, ಸಾಫ್ಟ್‌ಕಾಪಿಯನ್ನು ಅವಲಂಬಿಸುವಂತೆ ಸುತ್ತೋಲೆಯನ್ನು ಹೊರಡಿಸಿದೆ.

ವಿಶ್ವವಿದ್ಯಾಲಯದ ಈ ನಿರ್ಧಾರ, ಈಗಾಗಲೇ ಶುಲ್ಕ ಭರಿಸಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಲ್ಲಿ ನಿರಾಶೆ, ಅಸಮಾಧಾನ ಮೂಡಿಸಿದೆ.

ಅಧ್ಯಯನ ಸಾಮಗ್ರಿಗಳನ್ನು ನೀಡದಿರುವುದಕ್ಕೆ ತಾಂತ್ರಿಕ ಕಾರಣಗಳನ್ನು ನೀಡಿರುವ ವಿಶ್ವವಿದ್ಯಾಲಯವು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಬೋಧನಾ ಶುಲ್ಕದಲ್ಲಿ ಶೇ 15ರಷ್ಟು ರಿಯಾಯಿತಿ ನೀಡಿ, ಶುಲ್ಕಹೊಂದಾಣಿಕೆ ಮಾಡಿಕೊಳ್ಳುವುದಾಗಿ ತಿಳಿಸಿದೆ.

ADVERTISEMENT

‘2021–22ನೇ ಸಾಲಿನಲ್ಲಿ ವಿವಿಧ ಪದವಿಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ‘ಕೆಎಸ್‌ಒಯು ಸ್ಟೂಡೆಂಟ್‌ ಆ್ಯಪ್‌’ ಮೂಲಕ ಸಾಫ್ಟ್‌ ಕಾಪಿಗಳನ್ನು ಅಪ್‌ಲೋಡ್‌ ಮಾಡಲಾಗಿದ್ದು, ಅವುಗಳ ಮೂಲಕವೇ ಪ್ರಿಂಟ್‌ ತೆಗೆದುಕೊಂಡು ಅಧ್ಯಯನ ನಡೆಸಬೇಕು’ ಎಂದು ವಿಶ್ವವಿದ್ಯಾಲಯವು ಸಲಹೆ ನೀಡಿದೆ.

‘ಪ್ರವೇಶ ಪಡೆಯುವ ವೇಳೆ ಅಧ್ಯಯನ ಸಾಮಗ್ರಿಗೂ ಸೇರಿ ₹ 9 ಸಾವಿರದಷ್ಟು ಶುಲ್ಕ ಪಾವತಿಸಿದ್ದೇನೆ. ಪ್ರತಿ ವಿಷಯದಲ್ಲಿ ಐದಾರು ಇ– ಪುಸ್ತಕಗಳಿವೆ. ಇದೀಗ ಸಾವಿರ ಪುಟಗಳಷ್ಟು ಜೆರಾಕ್ಸ್‌ ಪ್ರತಿ ತೆಗೆದುಕೊಂಡು ಓದಲು ಇನ್ನೊಂದೆರಡು ಸಾವಿರ ರೂಪಾಯಿ ಭರಿಸಬೇಕಿದೆ. ಕಡಿಮೆ ಸಂಬಳದಲ್ಲಿ ಕುಟುಂಬ ನಡೆಸುತ್ತಲೇ ದೂರ ಶಿಕ್ಷಣದ ಮೂಲಕ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಪಾಡೇನು’ ಎಂದು ಶಿವಮೊಗ್ಗದ ವಿದ್ಯಾರ್ಥಿಯೊಬ್ಬರು‌ ಹೇಳಿದರು.

‘ಕೋವಿಡ್‌ ಸಂದರ್ಭದಲ್ಲಿ ಅನಿವಾರ್ಯವಾಗಿ ಇ–ಪುಸ್ತಕವನ್ನು ಅವಲಂಬಿಸಬೇಕಾಗಿತ್ತು. ಈಗ ಆ ಭಯವಿಲ್ಲ. ಅಧ್ಯಯನ ಸಾಮಗ್ರಿ ನೀಡದಿದ್ದರೆ, ವಿದ್ಯಾರ್ಥಿಗಳ ಫಲಿತಾಂಶದಲ್ಲಿ ವ್ಯತ್ಯಾಸವಾಗುವುದಿಲ್ಲವೇ? ವಿಶ್ವವಿದ್ಯಾಲಯದ ಮೇಲೆ ಪರಿಣಾಮ ಬೀರುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ವಿಶ್ವವಿದ್ಯಾಲಯದ ಪ್ರವೇಶ ಶುಲ್ಕ ವರ್ಷದಿಂದ ವರ್ಷಕ್ಕೆ ಹೆಚ್ಚಿದೆ. ಪಠ್ಯ ಸಾಮಗ್ರಿಯು ದೊರೆಯದಿದ್ದರೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಿಮುಖರಾಗುವ ಅಪಾಯವೂ ಇದೆ’ ಎಂದು ವಿಶ್ವವಿದ್ಯಾಲಯದಿಂದ ಮೂರು ಪದವಿ ಪಡೆದಿರುವ ಟೆಕಿ ಸಂದೀಪ್‌ ಹೇಳಿದರು.

‘ಶೇ 15 ರಿಯಾಯಿತಿ’
‘ಸಿಬಿಸಿಎಸ್‌ ಪದ್ಧತಿಯಂತೆ ಅಧ್ಯಯನ ಸಾಮಗ್ರಿಗಳನ್ನು ಸಿದ್ಧಪಡಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಹೊಸ ಪಠ್ಯವನ್ನು ಸಿದ್ಧಗೊಳಿಸಬೇಕಿದೆ. ಬಿ.ಎ, ಬಿ.ಕಾಂ ಪದವಿಗಳ ಸಾಮಗ್ರಿಗಳೇ ಖರ್ಚಾಗಿಲ್ಲ. ಪಠ್ಯಪುಸ್ತಕದಲ್ಲಿ ಕೆಲವು ದೋಷಗಳಿದ್ದು, ಫಿಟ್‌ ಫಾರ್ ಪ್ರಿಂಟ್‌ ಆಗದೇ ಇದ್ದರಿಂದ ಮುದ್ರಿಸಿಲ್ಲ. ಮುದ್ರಣ ವೆಚ್ಚವು ಹೆಚ್ಚಿರುವುದರಿಂದ ತಿದ್ದುಪಡಿಗೊಂಡ ಸಾಫ್ಟ್‌ಕಾಪಿಗಳನ್ನು ಆ್ಯಪ್‌ಗೆ ಅಪ್‌ಲೋಡ್‌ ಮಾಡಲಾಗಿದೆ’ ಎಂದು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶೇ 75ರಷ್ಟು ವಿದ್ಯಾರ್ಥಿಗಳು ಸಾಫ್ಟ್‌ಕಾಪಿಯನ್ನು ಸ್ವಾಗತಿಸಿದ್ದಾರೆ. ಪ್ರವೇಶ ಶುಲ್ಕದಲ್ಲಿ ಶೇ 15ರಷ್ಟು ರಿಯಾಯಿತಿ ನೀಡಲಾಗಿದ್ದು, ಅದನ್ನು ಮತ್ತಷ್ಟು ಹೆಚ್ಚಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.