ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2009–10ನೇ ಸಾಲಿನಿಂದ 2015–16ರವರೆಗೆ ನಡೆದಿದೆ ಎನ್ನಲಾದ ಹಣ ದುರ್ಬಳಕೆ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಸದ್ಯದಲ್ಲಿಯೇ ಅಧಿಕಾರಿಗಳ ತಂಡವು ತನಿಖೆಗೆಂದು ಮೈಸೂರಿಗೆ ಬರುವ ನಿರೀಕ್ಷೆ ಇದೆ.
ಅಧ್ಯಯನ ಕೇಂದ್ರಗಳ ಸ್ಥಾಪನೆ, ಪರೀಕ್ಷೆ, ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಈ ಅವಧಿಯಲ್ಲಿ ₹250 ಕೋಟಿಯಷ್ಟು ಹಣ ದುರ್ಬಳಕೆ ಆಗಿರುವುದು ಕಂಡುಬಂದಿತ್ತು. ಈ ಕುರಿತು 2022ರ ಫೆಬ್ರುವರಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವರ ಪತ್ರ ಹಾಗೂ ವಿ.ವಿ.ಯ ಆಡಳಿತ ಮಂಡಳಿಯ ಸಭೆಯ ನಿರ್ಣಯ ಆಧರಿಸಿ ರಾಜ್ಯಪಾಲರು ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ಅದರಂತೆ ರಾಜ್ಯ ಸರ್ಕಾರವು ಈ ವರ್ಷ ಮಾರ್ಚ್ 13ರಂದು ಸಿಬಿಐ ತನಿಖೆಗೆ ಆದೇಶಿಸಿತ್ತು. ಸಂಬಂಧಿಸಿದ ಅಧಿಕಾರಿಗಳು, ಲೆಕ್ಕ ಪರಿಶೋಧಕರು, ಬ್ಯಾಂಕುಗಳು ಸಿಬಿಐಗೆ ಅಗತ್ಯ ಮಾಹಿತಿ ಒದಗಿಸುವಂತೆ ಸೂಚಿಸಿತ್ತು. ಸಿಬಿಐ ಅಧಿಕಾರಿಗಳು ಸದ್ಯ ಪ್ರಕರಣದ ತನಿಖೆ ಯನ್ನು ಆರಂಭಿಸಿದ್ದು, ಸಂಬಂಧಿಸಿದ ಎಲ್ಲರಿಗೆ ನೋಟಿಸ್ ನೀಡಿದ್ದಾರೆ ಎಂದು
ತಿಳಿದುಬಂದಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಎಸ್ಒಯು ಕುಲಸಚಿವ ಕೆಎನ್‌ಎನ್ ಮೂರ್ತಿ ‘ಸಿಬಿಐ ತನಿಖೆ ಸಂಬಂಧ ಈವರೆಗೆ ನೋಟಿಸ್ ಬಂದಿಲ್ಲ. ಬಂದರೆ ಅಗತ್ಯ ಮಾಹಿತಿ ಒದಗಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.