ADVERTISEMENT

‘ಫ್ರೀ ಕಾಶ್ಮೀರ’ ಫಲಕ ಹಿಡಿದವರು ಯಾರು?– ಬಗೆಹರಿಯದ ಗೊಂದಲ

ವಿಚಾರಣೆಗೆ ಹಾಜರಾಗುವಂತೆ ಪ್ರತಿಭಟನೆಯ ಆಯೋಜಕರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 19:13 IST
Last Updated 10 ಜನವರಿ 2020, 19:13 IST
ವಿದ್ಯಾರ್ಥಿಗಳ ಪ್ರತಿಭಟನೆ
ವಿದ್ಯಾರ್ಥಿಗಳ ಪ್ರತಿಭಟನೆ   

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರದ ನಡೆದ ಪ್ರತಿಭಟನೆ ವೇಳೆ, ‘ಫ್ರೀ ಕಾಶ್ಮೀರ’ ಫಲಕ ಹಿಡಿದವರು ಯಾರು ಎಂಬುದು ಇದೀಗ ಯಕ್ಷ ಪ್ರಶ್ನೆಯಾಗಿದೆ. ಈ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

‘ನಮಗೂ ಫಲಕ ಹಿಡಿದವರಿಗೂ ಸಂಬಂಧ ಇಲ್ಲ. ಫಲಕ ಹಿಡಿದವರು ಹೊರಗಡೆಯಿಂದ ಬಂದ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಂಘಟನೆಯೊಂದರ ಮುಖಂಡರೊಬ್ಬರು ಹೇಳಿದರು. ಆದರೆ, ಈ ವಿಚಾರವನ್ನು ಪೊಲೀಸ್ ಮೂಲಗಳು ಅಲ್ಲಗಳೆಯುತ್ತವೆ.

ಫಲಕ ಹಿಡಿದಿದ್ದಾರೆ ಎಂದು ಹೇಳಲಾಗುತ್ತಿರುವ ವಿದ್ಯಾರ್ಥಿನಿಗೂ, ಫಲಕ ಹಿಡಿದು ನಡೆದ ವಿದ್ಯಾರ್ಥಿನಿಯ ಮುಖಚರ್ಯೆಗೂ ಸಾಮ್ಯತೆ ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಇನ್ನಷ್ಟು ಪರಿಶೀಲನೆಯ ಅಗತ್ಯವಿದೆ ಎಂದು ಪೊಲೀಸರು ಹೇಳುತ್ತಾರೆ.

ADVERTISEMENT

‘ಪ‍್ರತಿಭಟನೆ ಆಯೋಜಿಸಿದ 6 ಮಂದಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಫಲಕ ಹಿಡಿದಿದ್ದಾರೆ ಎನ್ನಲಾದ ವಿದ್ಯಾರ್ಥಿನಿಯನ್ನು ವಿಚಾರಣೆಗೆ ಕರೆದಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ದಿಕ್ಕು ತಪ್ಪಿಸುವ ಕೆಲಸ?

‘ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಸಂಘಟನೆಗಳಿಗೂ ಫಲಕ ಹಿಡಿದವರಿಗೂ ಸಂಬಂಧ ಇಲ್ಲ ಎಂದು ಬಿಂಬಿಸಲು, ಸಂಘಟನೆಗೆ ಸೇರದ ಹಳೆಯ ವಿದ್ಯಾರ್ಥಿನಿಯ ಹೆಸರನ್ನು ಕೆಲವರು ಎಳೆದು ತರುತ್ತಿದ್ದಾರೆ’ ಎಂಬ ಆರೋಪವೂ ಕೇಳಿ ಬಂದಿದೆ.

ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಮೌನ ನೆಲೆಸಿತ್ತು. ಘಟನೆ ಕುರಿತು ಯಾರೊಬ್ಬರೂ ಮಾತನಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಪ್ರತಿಭಟನೆ ಆಯೋಜಿಸಿದ್ದ ಸಂಘಟನೆಗಳ ಪ್ರಮುಖರೂ ತಮ್ಮ ಮೊಬೈಲ್‌ಗಳನ್ನು ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು.

‘ಅನುಮತಿ ಇಲ್ಲದೇಪ್ರತಿಭಟಿಸಿದರೆ ಕ್ರಮ’

ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ ಪ್ರದೇಶದಲ್ಲಿ, ಇನ್ನು ಮುಂದೆ ವಿದ್ಯಾರ್ಥಿಗಳು ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದರೆ, ಅದರಲ್ಲಿ ಭಾಗಿಯಾದ ಎಲ್ಲರ ವಿರುದ್ಧವೂ ಶಿಸ್ತುಕ್ರಮ ಜರುಗಿಸಲಾಗುವುದು. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಕುಲಸಚಿವ ಆರ್.ಶಿವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಬುಧವಾರ ಪ್ರತಿಭಟನೆ ಆಯೋಜಿಸಿದ್ದ ಸಂಘಟಕರಿಗೆ, ಗುರುವಾರ ಸಂಜೆಯೊಳಗಾಳಗಾಗಿ ಉತ್ತರಿಸುವಂತೆ ನೋಟಿಸ್‌ ನೀಡಲಾಗಿತ್ತು. ಶುಕ್ರವಾರ ಸಂಜೆವರೆಗೂ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.