ADVERTISEMENT

Terror Attack | ಪಾಕಿಸ್ತಾನಿ ಪ್ರಜೆಗಳ ವಾಪಸ್‌ಗೆ ಕ್ರಮ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 8:59 IST
Last Updated 26 ಏಪ್ರಿಲ್ 2025, 8:59 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಮೈಸೂರು: ‘ಕೇಂದ್ರ ಸರ್ಕಾರದ ಸೂಚನೆಯಂತೆ, ಕರ್ನಾಟಕ ರಾಜ್ಯದಲ್ಲಿರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್‌ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ರಾಜ್ಯದ ವಿವಿಧ ನಗರಗಳಲ್ಲಿ ಪಾಕಿಸ್ತಾನಿಗಳ ಸಂಖ್ಯೆ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಪಾಕಿಸ್ತಾನಿಗಳ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಗ್ಗೆ ಮಾಹಿತಿ ಪಡೆಯಲಾಗವುದು’ ಎಂದರು.

ADVERTISEMENT

ಕಾಶ್ಮೀರದ ಉಗ್ರರ ದಾಳಿ ಘಟನೆಯಲ್ಲಿ ಭದ್ರತಾ ವೈಫಲ್ಯವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ ‘ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕಿತ್ತು. ಹಿಂದೆ ಪುಲ್ವಾಮಾದಲ್ಲಿಯೂ 40 ಯೋಧರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯಲ್ಲಿ ಭದ್ರತಾ ವೈಫಲ್ಯವಾಗಿದೆ. ಕೇಂದ್ರ ಸರ್ಕಾರದವರನ್ನು ನಂಬಿ ಪ್ರವಾಸಿಗರು ಹೋಗಿದ್ದರು. ಈಗ ಯಾವುದೇ ಕ್ರಮಗಳನ್ನು ಕೇಂದ್ರ ಕೈಗೊಂಡರೂ, ಪ್ರಾಣ ಕಳೆದುಕೊಂಡ 26 ಜನ ಮತ್ತೆ ಬದುಕಿ ಬರಲು ಸಾಧ್ಯವೇ ?’ ಎಂದು ಪ್ರಶ್ನಿಸಿದರು.

‘ಕಾಶ್ಮೀರದಲ್ಲಿ ಸಿಲುಕಿದ್ದ ಕನ್ನಡಿಗರ ರಕ್ಷಣೆಗೆ ಸಚಿವ ಸಂತೋಷ್ ಲಾಡ್ ಅವರನ್ನು ನಿಯೋಜಿಸಿದ್ದು, ಅವರು ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತಂದಿದ್ದಾರೆ’ ಎಂದರು.

ಯುದ್ಧದ ಪರ ಇಲ್ಲ:

ಪಾಕಿಸ್ತಾನದ ಮೇಲೆ ಯುದ್ಧ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿ ‘ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ. ಕಾಶ್ಮೀರದ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು. ನಾವು ಯುದ್ಧದ ಪರ ಇಲ್ಲ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಬೇಕು’ ಎಂದರು.

ಕಾಶ್ಮೀರದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರು ಕುರಿತು ಪ್ರತಿಕ್ರಿಯಿಸಿ ‘ಅವರಿಗೆ ಈ ಸಭೆಗಿಂತ ಬಿಹಾರದ ಚುನಾವಣಾ ಪ್ರಚಾರವೇ ಮುಖ್ಯವೆಂದು ಕಾಣುತ್ತದೆ. ಪ್ರಧಾನಿಯವರು ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.