ADVERTISEMENT

ಅಂದು ಕೆಂಪೇಗೌಡರು ಇಂದು ದೇವೇಗೌಡರು ಅಗತ್ಯ

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 12:11 IST
Last Updated 27 ಜೂನ್ 2018, 12:11 IST
ಮೈಸೂರಿನಲ್ಲಿ ಬುಧವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೀಡುವ ಮೂಲಕ ಚಾಲನೆ ನೀಡಿದರು. ಮೇಯರ್‌ ಭಾಗ್ಯವತಿ, ಸಂಸದ ಧ್ರುವ ನಾರಾಯಣ ಇದ್ದಾರೆ
ಮೈಸೂರಿನಲ್ಲಿ ಬುಧವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೀಡುವ ಮೂಲಕ ಚಾಲನೆ ನೀಡಿದರು. ಮೇಯರ್‌ ಭಾಗ್ಯವತಿ, ಸಂಸದ ಧ್ರುವ ನಾರಾಯಣ ಇದ್ದಾರೆ   

ಮೈಸೂರು: ನಾಡಪ್ರಭು ಕೆಂಪೇಗೌಡರು ಅಂದು ಬೆಂಗಳೂರು ಕಟ್ಟಿದರು. ಇಂದು ದೇವೇಗೌಡರು ನಾಡನ್ನು ಕಟ್ಟಿ ಎಲ್ಲರಿಗೂ ಅಗತ್ಯವಾಗಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಸಮಿತಿ ಬುಧವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡರು ಶ್ರಮಪಟ್ಟು ಬೆಂಗಳೂರನ್ನು ಕಟ್ಟಿದರು. ನಾಡಿನ ರಾಜಧಾನಿಗೆ ಅಂದೇ ಅಡಿಪಾಯ ಹಾಕಿದ್ದರು. ಈಗ ಈ ನಾಡಿಗೆ ಎಚ್‌.ಡಿ.ದೇವೇಗೌಡರು ಅಗತ್ಯವಾಗಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ನದಿ ನೀರಿನ ಸಮಸ್ಯೆಯನ್ನು ಸೂಕ್ಷ್ಮವಾಗಿ ಬಗೆಹರಿಸಲು ದೇವೇಗೌಡರೇ ಕಾರಣವಾಗಿದ್ದಾರೆ. ಅವರು ಕೆಂಪೇಗೌಡರ ಆದರ್ಶವನ್ನೇ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.‌

ADVERTISEMENT

ಜಯಂತಿಗಳಿಗೆ ರಜೆ ಬೇಡ:ಕೆಂಪೇಗೌಡ ಜಯಂತಿ ಸೇರಿದಂತೆ ಯಾವ ಜಯಂತಿಗೂ ರಜೆ ನೀಡಬಾರದು ಎಂದು ಅವರು ಹೇಳಿದರು.‌ ಕೆಂಪೇಗೌಡ ಜಯಂತಿಗೆ ಸರ್ಕಾರವು ರಜೆ ನೀಡಬೇಕು ಎಂದು ಪ್ರೇಕ್ಷಕರು ಮನವಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಜಾತಿ ಜನಾಂಗಗಳ ನಾಯಕರ ಹೆಸರಿನಲ್ಲಿ ಜಯಂತಿ ಮಾಡಿ, ರಜೆ ಆಚರಿಸಿದರೆ ಯಾವ ರೀತಿಯಲ್ಲೂ ಆದರ್ಶ ಪಾಲನೆ ಮಾಡಿದಂತೆ ಆಗುವುದಿಲ್ಲ. ಅದರ ಬದಲಿಗೆ, ಅಂದು ಹೆಚ್ಚು ಕೆಲಸ ಮಾಡಿ ಸಮಾಜಕ್ಕೆ ಒಳಿತು ಮಾಡಬೇಕು. ಎಲ್ಲ ಜಯಂತಿಗಳಿಗೂ ರಜೆ ರದ್ದು ಮಾಡುವಂತೆ ಸರ್ಕಾರವನ್ನು ಕೋರಲಾಗುವುದು ಎಂದು ತಿಳಿಸಿದರು.

‘ಎಲ್ಲ ಜಯಂತಿಗಳಿಗೂ ರಜೆ ನೀಡಲೇಬೇಕು ಎಂದು ಸರ್ಕಾರವು ವಾದ ಮಾಡಿದರೆ ಕೆಂಪೇಗೌಡರ ಜಯಂತಿಗೂ ನೀಡುವಂತೆ ಕೋರುವೆ’ ಎಂದರು. ‌ಸಂಸದ ಧ್ರುವ ನಾರಾಯಣ ಮಾತನಾಡಿ, ಕೆಂಪೇಗೌಡರ ದೂರದೃಷ್ಟಿಯಿಂದ ರಾಜ್ಯದ ಆದಾಯದ ಶೇ 60ರಷ್ಟು ಭಾಗ ಬೆಂಗಳೂರಿನಿಂದಲೇ ಬರುತ್ತಿದೆ. ಜಾತ್ಯತೀಯ ನಾಯಕನಾಗುವ ಮೂಲಕ ಎಲ್ಲರ ಏಳ್ಗೆಗೆ ಶ್ರಮಿಸಿದರು. ಇಂತಹ ನಾಯಕರು ನಮಗೆ ಬೇಕು’ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಿಸಿರುವ ‘ನಾಡಪ್ರಭುವಿಗೆ ನಾಡಿನ ನಮನ’ ಕಿರುಹೊತ್ತಿಗೆ ಬಿಡುಗಡೆಗೊಳಿಸಿದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಶಾಸಕ ಎಲ್.ನಾಗೇಂದ್ರ, ಮರಿತಿಬ್ಬೇಗೌಡ, ಮೇಯರ್ ಭಾಗ್ಯವತಿ, ಉಪಮೇಯರ್ ಎಂ.ಇಂದಿರಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ, ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಮಹಾದೇವು, ಜಿಲ್ಲಾಧ್ಯಕ್ಷ ಮಹಾಲಿಂಗಂ, ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್, ಪಾಲಿಕೆ ಸದಸ್ಯ ಪ್ರಶಾಂತ್ ಗೌಡ, ಬಾಲು, ಶಿವ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಉಪ ನಿರ್ದೇಶಕ ಕಾ.ರಾಮೇಶ್ವರಪ್ಪ, ನಗರಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಭಾಗವಹಿಸಿದ್ದರು.

ಮೆರುಗು ನೀಡಿದ ಮೆರವಣಿಗೆ:

ಸಭಾ ಕಾರ್ಯಕ್ರಮಕ್ಕೂ ಮುನ್ನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಿಂದ ನಾನಾ ಜನಪದ ಕಲಾ ತಂಡಗಳೊಂದಿಗೆ ತೆರೆದ ವಾಹನದಲ್ಲಿ ಕೆಂಪೇಗೌಡ ಪ್ರತಿಮೆಯ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯು ಕೆ.ಆರ್.ವೃತ್ತ, ಡಿ.ದೇವರಾಜ ಅರಸ್ ಮಾರ್ಗವಾಗಿ ಜೆಎಲ್‌ಬಿ ರಸ್ತೆ, ಮೆಟ್ರೊಪೋಲ್ ವೃತ್ತ, ಹುಣಸೂರು ರಸ್ತೆಯ ಮೂಲಕ ಕಲಾಮಂದಿರ ಸೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.