
ಮೈಸೂರು: ‘ಕನ್ನಡ ಮಾಧ್ಯಮದ ಶಾಲೆಗಳಲ್ಲಿ, ಅದರಲ್ಲೂ ಕಾಸರಗೋಡಿನಂತಹ ಗಡಿ ಜಿಲ್ಲೆಗಳಲ್ಲಿ ಮೊದಲ ಭಾಷೆಯನ್ನಾಗಿ ಮಲಯಾಳ ಭಾಷೆ ಕಲಿಕೆ ಕಡ್ಡಾಯಗೊಳಿಸಲು ಕೇರಳ ಸರ್ಕಾರ ಮುಂದಾಗಿರುವುದು ಖಂಡನೀಯ’ ಎಂದು ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ವಕ್ತಾರ ಎಸ್.ರಾಜೇಶ್ ಹೇಳಿದರು.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಲಯಾಳ ಏರಿಕೆ ಮಾಡುವುದು ಸರಿಯಲ್ಲ. ಕಾಸರಗೋಡಿನಲ್ಲಿರುವ ಕನ್ನಡಿಗರ ಹಿತ ಕಾಯುವ ಕೆಲಸವನ್ನು ರಾಷ್ಟ್ರಪತಿಗಳು ಮಾಡಬೇಕು’ ಎಂದು ಕೋರಿದರು.
‘ಕೇರಳದ ಗಡಿಯಲ್ಲಿರುವ ಭಾಷಾ ಅಲ್ಪಸಂಖ್ಯಾತರ ರಕ್ಷಣೆಗೆ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು. ಮಾತೃಭಾಷೆ ಕಲಿಕೆ ಪ್ರತಿಯೊಬ್ಬರ ಹಕ್ಕು ಎನ್ನುವುದನ್ನು ಕೇರಳ ಸರ್ಕಾರ ಮರೆಯಬಾರದು. ಕನ್ನಡದವರ ಮೇಲೆ ದಬ್ಬಾಳಿಕೆ ಸಲ್ಲದು’ ಎಂದರು.
‘ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಇದ್ದ ನಿವಾಸಿಗಳನ್ನು ತೆರವುಗೊಳಿಸಲು ನಮ್ಮ ಸರ್ಕಾರ ಕ್ರಮ ಕೈಗೊಂಡಿದ್ದಕ್ಕೆ ಪ್ರತಿಯಾಗಿ ಕೇರಳ ಸರ್ಕಾರ ಮಲಯಾಳ ಏರಿಕೆ ಮಾಡುತ್ತಿದೆ’ ಎಂದು ದೂರಿದರು.
‘ದಲಿತರು, ಮಹಿಳೆಯರು ಹಾಗೂ ರೈತರಿಗೆ ಉದ್ಯೋಗದ ಅವಕಾಶ ನೀಡುತ್ತಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಮರುಸ್ಥಾಪಿಸಬೇಕು. ಹೆಸರು ಬದಲಾವಣೆ ಹೆಸರಿನಲ್ಲಿ ಕಾಯ್ದೆಯ ಮೂಲ ಆಶಯವನ್ನೇ ಬುಡಮೇಲು ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯವಾದುದು. ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಅಳಿಸಿ ಹಾಕುವುದು ಸರಿಯಲ್ಲ’ ಎಂದರು.
ಮುಖಂಡರಾದ ಸೈಯದ್ ಫಾರೂಕ್, ರವಿ, ನಂಜುಂಡಸ್ವಾಮಿ ಹಾಗೂ ಬಸವಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.