
ಕಿಸಾನ್ ಸ್ವರಾಜ್ ಸಮ್ಮೇಳನ
ಮೈಸೂರು: ‘ಬಂಡವಾಳಶಾಹಿಗಳು ಆಹಾರ ಮತ್ತು ಕೃಷಿ ವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ರೈತರು ತಮ್ಮ ಹಕ್ಕುಗಳ ರಕ್ಷಣೆಗೆ ಹೋರಾಟಕ್ಕೆ ಇಳಿಯಬೇಕು’ ಎಂದು ‘ಆಶಾ ಕಿಸಾನ್ ಸ್ವರಾಜ್’ ಸಂಸ್ಥೆಯ ಸದಸ್ಯ ಶ್ರೀಧರ್ ರಾಧಾಕೃಷ್ಣನ್ ಆಗ್ರಹಿಸಿದರು.
ಮುಕ್ತ ಗಂಗೋತ್ರಿಯಲ್ಲಿ ಭಾನುವಾರ ‘ಕಿಸಾನ್ ಸ್ವರಾಜ್ ಸಮ್ಮೇಳನ’ದ ಸಮಾರೋಪದಲ್ಲಿ ಮಾತನಾಡಿ, ‘ಅಂತರರಾಷ್ಟ್ರೀಯ ವಾಣಿಜ್ಯ ಒಪ್ಪಂದಗಳು ರೈತರ ಕೃಷಿ ಜ್ಞಾನದ ದತ್ತಾಂಶ, ಬಿತ್ತನೆ ಬೀಜ ಹಾಗೂ ಮಾರುಕಟ್ಟೆಯನ್ನು ನಿಯಂತ್ರಿಸಲಿವೆ’ ಎಂದರು.
‘ಬಂಡವಾಳಶಾಹಿ ಪರ ಮಾರುಕಟ್ಟೆ ನೀತಿಗಳು ರೈತರನ್ನು ಶೋಷಿಸುತ್ತಿವೆ. ಅಗತ್ಯವಿಲ್ಲದ ಡ್ರೋನ್, ತಂತ್ರಜ್ಞಾನ, ವಂಶವಾಹಿ ಡಿಜಿಟಲೀಕರಣ, ಆಹಾರ ಸಾರವರ್ಧನೆಗಳು ಮತ್ತಷ್ಟು ಸಂಕಷ್ಟಕ್ಕೆ ದೂಡಲಿವೆ’ ಎಂದು ಎಚ್ಚರಿಸಿದರು.
‘ಕೇಂದ್ರ ಸರ್ಕಾರ ಯಾವುದೇ ರೈತ ವಿರೋಧಿ ನೀತಿ ತಂದರೂ, ಕೃಷಿಕರು ತಮ್ಮದೇ ಬೀಜ ಸಂಗ್ರಹ ವ್ಯವಸ್ಥೆ, ಸಾವಯವ ಕೃಷಿ ಪದ್ಧತಿ, ಸಹಕಾರ ತತ್ವದಡಿ ಸಮುದಾಯ ಕೃಷಿ, ತಳ ಹಂತದಲ್ಲಿ ರೈತ ಮಾರುಕಟ್ಟೆ ಸ್ಥಾಪನೆ ಮೂಲಕ ಪ್ರತಿರೋಧ ತೋರಬೇಕು. ಆಗ ಮಾತ್ರ ಸರ್ಕಾರವೂ ನಮ್ಮ ಮಾತು ಕೇಳುತ್ತದೆ’ ಎಂದು ಸಲಹೆ ನೀಡಿದರು.
ಕೃಷಿ ಲೇಖಕ ಪಾಮಯನ್, ‘ಸಮುದಾಯ ಕೃಷಿಯತ್ತ ರೈತರು ಮುಂದಾದರೆ ನಷ್ಟ ತಪ್ಪಿಸಿ, ಲಾಭದಾಯಕ ಆಗಿಸಬಹುದು. ಹಿಡುವಳಿ ಭೂಮಿಗಳು ಕಿರಿದಾಗಿವೆ. ಅವಿಭಕ್ತ ಕುಟುಂಬಗಳು ಇಲ್ಲವಾಗಿವೆ. ಕೃಷಿ ಕಾರ್ಮಿಕರ ಕೊರತೆಯೂ ಇದೆ. ಕೃಷಿ ಪರಿಸರ ವ್ಯವಸ್ಥೆಯೂ ಸಂಪೂರ್ಣ ಬದಲಾಗಿದೆ’ ಎಂದರು.
‘ಕೃಷಿ ಲಾಭದ ಅನುಮಾನಗಳನ್ನು ಬಗೆಹರಿಸಿಕೊಂಡು ರೈತರು ಒಟ್ಟಿಗೆ ಕೃಷಿ ಮಾಡಲಿ. ಮಾರುಕಟ್ಟೆಯೂ ರೈತರು ಹೇಳಿದಂತೆಯೇ ಕೇಳುತ್ತದೆ. ಏಕೆಂದರೆ ಉತ್ಪಾದನೆ ಒಂದೆಡೆ ಸಂಗ್ರಹವಾಗಿರುತ್ತದೆ. ದಲ್ಲಾಳಿಗಳ ಕಾಟ ಇರುವುದಿಲ್ಲ. ಕೊಳ್ಳುವವರು ನೇರವಾಗಿ ಸಂಪರ್ಕಿಸುತ್ತಾರೆ. ಹೊರ ರಾಜ್ಯಗಳಷ್ಟೇ ಅಲ್ಲ, ವಿದೇಶಗಳಿಗೂ ನೇರ ರಫ್ತು ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.
ಸಮಾನ ಕೂಲಿ ಸಿಗಲಿ: ‘ಸಮಾನ ಕೂಲಿ ಮಹಿಳಾ ಕೃಷಿ ಕಾರ್ಮಿಕರಿಗೆ ಸಿಗುತ್ತಿಲ್ಲ. ಸಾಮಾಜಿಕ, ಸಾಂಸ್ಕೃತಿಕ ತಾರತಮ್ಯ ಇದಕ್ಕೆ ಕಾರಣ. ಕೃಷಿ ಭೂಮಿಯಲ್ಲಿ ಹೆಚ್ಚು ಕೆಲಸ ಮಾಡುವುದು ಮಹಿಳೆಯರೇ ಆಗಿದ್ದಾರೆ. ಕೃಷಿ ಪರಿಸರ ರಕ್ಷಣೆಯಲ್ಲಿ ಮಹತ್ವಪೂರ್ಣ ಕೊಡುಗೆ ನೀಡಿರುವ ಮಹಿಳೆಯರಿಗೂ ಸಮಾನ ವೇತನ ಸಿಗಬೇಕು’ ಎಂದು ಸಾವಯವ ಕೃಷಿ ತಜ್ಞೆ ಜೂಲಿ ಕಾರಿಯಪ್ಪ ಹೇಳಿದರು.
‘ಸೂಪರ್ ಮಾರುಕಟ್ಟೆಗಳೂ ಎಂದಿಗೂ ರೈತರಿಗೆ ನೆರವಾಗವು. ಉತ್ತಮ ಬೆಲೆ ನೀಡಿ ಗೌರವಿಸುವ ಕೆಲಸವನ್ನು ಮಾರುಕಟ್ಟೆಗಳು ಮಾಡಬೇಕಿದೆ. ಸಾವಯವ ಕೃಷಿ ಬೆಳೆಗಳಿಗೆ ಅಗತ್ಯ ಮಾರುಕಟ್ಟೆ ರೈತರೇ ಸೃಷ್ಟಿಸಿಕೊಳ್ಳಬೇಕಿದೆ’ ಎಂದರು ಸಲಹೆ ನೀಡಿದರು.
ಸಾವಯವ ಕೃಷಿ ಜಿಲ್ಲೆಯಾದ ದಂತೇವಾಡ
ಐಎಎಸ್ ಅಧಿಕಾರಿ ದೈವಸೇನಾಪತಿ ಅವರು ನಕ್ಸಲ್ ಸಮಸ್ಯೆಯಿಂದ ನಲುಗಿದ್ದ ಛತ್ತೀಸಗಢದ ದಂತೇವಾಡ ಜಿಲ್ಲೆ ಸಾವಯವ ಕೃಷಿ ಜಿಲ್ಲೆಯಾಗಿ ಬದಲಾದ ಕಥನವನ್ನು ಎಲ್ಲರಿಗೂ ತೆರೆದಿಟ್ಟರು. ‘ರಾಸಾಯನಿಕ ಗೊಬ್ಬರ ಕೀಟನಾಶಕ ಬಳಕೆಯಿಂದ ವಿಮುಖರಾಗಿಸಲು ಹೆಚ್ಚು ಇಳುವರಿಯ ಜೊತೆಗೆ ಸುಸ್ಥಿರ ಕೃಷಿಯನ್ನು ರೈತರು ಮಾಡಲು ಸಾವಯವ ಕೃಷಿ ಅರಿವನ್ನು ಮೂಡಿಸಲಾಯಿತು’ ಎಂದರು.
‘2016–18ರ ಅವಧಿಯಲ್ಲಿ ಸ್ವಯಂ ಸೇವಕರ ನೆರವಿನೊಂದಿಗೆ 8 ಗ್ರಾಮಗಳಲ್ಲಿ ಪ್ರಯೋಗ ನಡೆಸಲಾಯಿತು. ಸರ್ಕಾರವು ಅಗತ್ಯ ಸಹಕಾರವನ್ನು ನೀಡಿತು. ಸಾವಯವ ರಾಜ್ಯವಾದ ಸಿಕ್ಕಿಂಗೆ ರೈತರ ನಿಯೋಗ ಕಳುಹಿಸಲಾಯಿತು. ಎಲ್ಲ ಗ್ರಾಮಗಳಿಗೂ ತೆರಳಿ 10 ಸಾವಿರ ರೈತರಲ್ಲಿ ಅರಿವು ಮೂಡಿಸಲಾಯಿತು. ಮಹಿಳಾ ಸ್ವಯಂಸೇವಾ ಸಂಘಗಳೂ ನೆರವಾದವು’ ಎಂದು ವಿವರಿಸಿದರು.
‘ಕೃಷಿಯಲ್ಲಿ ಪದ್ಧತಿ ಉಲ್ಲಂಘನೆಯಾಗದಂತೆ ಗ್ರಾಮ ಸಭೆಗಳು ನೋಡಿಕೊಳ್ಳುತ್ತಿದ್ದವು. ಬೆಳೆದ ಬೆಳೆಗಳ ಮಾರಾಟಕ್ಕೆ ಸ್ಥಳೀಯ ಮಾರುಕಟ್ಟೆಗಳನ್ನೂ ಸದೃಢಗೊಳಿಸಲಾಯಿತು. ಅದರಿಂದ ಯಾರಿಗೂ ನಷ್ಟವಾಗಲಿಲ್ಲ’ ಎಂದರು.
‘ರೈತ ಸ್ವರಾಜ್ಯ ಸ್ಥಾಪನೆಯಾಗಬೇಕು’
‘ರೈತ ಪರವಾದ ನೀತಿಗಳು ಸಂಸತ್ತು ವಿಧಾನಸಭೆಗಳಿಗೆ ಬರುತ್ತಿಲ್ಲ. ರೈತರು ಸ್ವಾವಲಂಬನೆ ಸಾಧಿಸಬೇಕು. ಗಾಂಧಿ ಅವರ ಗ್ರಾಮ ಅಥವಾ ರೈತ ಸ್ವರಾಜ್ಯ ಸ್ಥಾಪನೆ ಆಗಬೇಕಿದೆ’ ಎಂದು ಆಂಧ್ರಪ್ರದೇಶದ ರೈತ ಹಕ್ಕುಗಳ ಕಾರ್ಯಕರ್ತ ರವಿ ಕನ್ನೆಗಂಟಿ ಪ್ರತಿಪಾದಿಸಿದರು.
‘ಸುಸ್ಥಿರ ಕೃಷಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿರುವಾಗ ಯುದ್ಧ ಘೋಷಣೆಯಾಗಿದೆ. ಶಾಲೆಯ ಮೇಲೆ ಬಾಂಬ್ ಹಾಕಿ ಮಕ್ಕಳನ್ನು ಕೊಲ್ಲಲಾಗಿದೆ. ರೈತರು ಮತ್ತು ಜನಸಾಮಾನ್ಯರ ಬದುಕು ದೇಶಕ್ಕೆ ಮುಖ್ಯವಾಗಿಲ್ಲ. ಉದ್ಯಮಿಗಳಿಗೆ ಲಾಭ ಮಾಡಿಕೊಡುವ ವಾಣಿಜ್ಯ ಒಪ್ಪಂದಗಳು ನಡೆಯುತ್ತಿವೆ’ ಎಂದರು.
‘ಭೂಮಿ ನೀರು ಅರಣ್ಯ ಖನಿಜ ಸಂಪತ್ತುಗಳನ್ನು ಬಂಡವಾಳಶಾಹಿಗಳಿಗೆ ಧಾರೆ ಎರೆಯಲಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ಭೂಮಿಗಳನ್ನು ಕೈಗಾರಿಕಾ ಪ್ರದೇಶ ರಸ್ತೆ– ರೈಲು ನಿರ್ಮಾಣಕ್ಕೆ ನೀಡಲಾಗುತ್ತಿದೆ. ರೈತರನ್ನು ಸಾಲದ ಸುಳಿಯಲ್ಲಿ ಸಿಲುಕಿಸಲಾಗುತ್ತಿದೆ. ಬೆಳೆ ವಿಮೆ ಸಿಗುತ್ತಿಲ್ಲ. ಹೊಸ ಸವಾಲುಗಳು ನಿತ್ಯ ಎದುರು ನೋಡುತ್ತಿದ್ದಾರೆ. ಆಹಾರ ಭದ್ರತೆ ನೀಡುವ ರೈತರು ಮುಖ್ಯವಾಗುತ್ತಿಲ್ಲ’ ಎಂದು ಹೇಳಿದರು.
900 ಕೋಟಿ ಜನರಿಗೆ ಊಟ ಕೊಡುವುದು ಹೇಗೆ?
ಜಗತ್ತಿನ ಜನಸಂಖ್ಯೆ 900 ಕೋಟಿ ಸಮೀಪಿಸುತ್ತಿದ್ದು ಇಷ್ಟು ಜನರಿಗೆ ಊಟ ಕೊಡುವುದು ಹೇಗೆ? ಫಲವತ್ತಾದ ಭೂಮಿ ಕಡಿಮೆಯಾಗುತ್ತಿದೆ. ಕೃಷಿ ಇಳುವರಿ ಕಾಯ್ದುಕೊಳ್ಳುವುದು ಹೇಗೆ? ಇಂಥ ಕಾಡುವ ಪ್ರಶ್ನೆಗಳನ್ನು ‘ಫುಡ್ ರೇಸ್– ಪೆಸ್ಟಿಸೈಡ್ಸ್ ಜಿಎಂಒ ಆ್ಯಂಡ್ ಆರ್ಗ್ಯಾನಿಕ್ ಫಾರ್ಮಿಕ್ ಆನ್ ದ ಟೆಸ್ಟ್’ ಚಿತ್ರವು ಮುಂದಿಟ್ಟಿತು. ಯಾವ ಮಾದರಿಯಲ್ಲಿ ಕೃಷಿ ಮಾಡಿದರೆ ಅನುಕೂಲ ಎಂಬುದನ್ನು ಚಿತ್ರೋತ್ಸವ ತೆರೆದುಕೊಟ್ಟಿತು.
ಅಡಿಕೆ ಪತ್ರಿಕೆಯ ಚರಿತ್ರೆ ಹೇಳುವ ‘ವಾಯ್ಸ್ ಆಫ್ ಫಾರ್ಮರ್ಸ್’ ಸಾಕ್ಷ್ಯಚಿತ್ರ ನ್ಯಾಚುರಲ್ ಕನ್ಸರ್ವೇಶನ್ ಫೌಂಡೇಶನ್‌ನ ರಮಣ್ ಶಂಕರ್ ದಿವ್ಯಾ ಮುದ್ದಪ್ಪ ಅವರು ತಮಿಳುನಾಡಿನ ವಾಲ್‌ಪರೈನಲ್ಲಿ ಆನೆ ಕಾರಿಡಾರ್ ನಿರ್ಮಾಣಕ್ಕೆ ಮಳೆಕಾಡುಗಳನ್ನು ಬೆಳೆಸುವ ಮಾರ್ಗಗಳನ್ನು ತೋರುವ ಕಥನವಾದ ‘ಡ್ರೀಮ್ ಆಫ್ ಟ್ರೀಸ್’ ಗಮನ ಸೆಳೆಯಿತು.
‘ಮೂರು ದಿನದ ಚಿತ್ರೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆಧುನಿಕ ತಂತ್ರಜ್ಞಾನ ಪರಿಚಿತ ರೈತರೇ ಇದ್ದರು. ಕೃಷಿ ವಿಜ್ಞಾನಿಗಳು ರೈತರು ಎನ್‌ಜಿಒಗಳಲ್ಲಿ ಕೆಲಸ ಮಾಡುವವರು ಸಂವಾದಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು’ ಎಂದು ಚಿತ್ರೋತ್ಸವದ ಸಂಚಾಲಕ ಕೆ.ಮನು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.