ಮೈಸೂರಿನ ಗಾಂಧಿ ವೃತ್ತದಲ್ಲಿ ರಾಜ್ಯ ನಾಯಕರ ಯುವಸೇನೆ ಸದಸ್ಯರು ಸಮುದಾಯದ ನಾಯಕ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದು ಖಂಡಿಸಿ ಸೋಮವಾರ ಪ್ರತಿಭಟಿಸಿದರು
ಪ್ರಜಾವಾಣಿ ಚಿತ್ರ
ಮೈಸೂರು: ಶಾಸಕ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದನ್ನು ಖಂಡಿಸಿ ರಾಜ್ಯ ನಾಯಕರ ಯುವಸೇನೆ ಸದಸ್ಯರು ಸೋಮವಾರ ಪ್ರತಿಭಟಿಸಿದರು.
ಸಂಘಟನೆ ರಾಜ್ಯಾಧ್ಯಕ್ಷ ದೇವರಾಜು ಟಿ. ಕಾಟೂರ್ ಮಾತನಾಡಿ, ‘ವಾಲ್ಮೀಕಿ ನಾಯಕ ಸಮಾಜದ ಪ್ರಭಾವಿ ನಾಯಕರಾದ ರಾಜಣ್ಣ ಸಹಕಾರ ಸಚಿವರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದರು. ಯಾವುದೇ ನೋಟೀಸ್ ನೀಡದೆ ಕಾಂಗ್ರೆಸ್ ಹೈಕಮಾಂಡ್ ವಜಾ ಮಾಡಿರುವುದನ್ನು ಸಮಾಜ ಖಂಡಿಸುತ್ತದೆ’ ಎಂದರು.
‘ಮುಖ್ಯಮಂತ್ರಿಗಳ ಬೆನ್ನೆಲುಬಾಗಿದ್ದರು ಎಂಬ ಕಾರಣದಿಂದ ಅವರನ್ನು ವಜಾ ಮಾಡಲಾಗಿದೆ. ನಾಯಕ ಸಮಾಜದಿಂದ ಯಾರೂ ಮುಖ್ಯಮಂತ್ರಿಯಾಗಿಲ್ಲ . ರಾಜಣ್ಣ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬೇಡಿಕೆಯ ಹೇಳಿಕೆ ನೀಡುತ್ತಿದ್ದರು. ಇದರೊಂದಿಗೆ ಮುಖ್ಯಮಂತ್ರಿ ಸ್ಥಾನವನ್ನೂ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ಸಿಗರೇ ಕುತಂತ್ರ ಮಾಡಿದ್ದಾರೆ’ ಎಂದು ಆರೋಪಿಸಿದರು.
‘2023ರ ಚುನಾವಣೆಯಲ್ಲಿ ಕಾಂಗ್ರೆಸ್ 136 ಕ್ಷೇತ್ರದಲ್ಲಿ ಗೆಲ್ಲಲು ನಾಯಕ ಸಮಾಜ ಪ್ರಭಾವ ಬೀರಿದೆ. ತಕ್ಷಣವೇ ಹೈಕಮಾಂಡ್ ಅವರನ್ನು ಸಚಿವ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಸ್ಥಳೀಯ ಚುನಾವಣೆಯಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಶಿವಕುಮಾರಸ್ವಾಮಿ, ಉದ್ಬೂರು ಎಂ. ಸೊಮ್ಮಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.