
ಮೈಸೂರು: ಕೇರಳದ ಕೊಚ್ಚಿನ್‌ನ ಬಿನಾಲೆ ಅಂತರರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ನಗರದ ಕಲಾವಿದ ಪಿ.ಎಸ್.ಕೃಷ್ಣಮೂರ್ತಿ ಅವರ ‘ಡೆತ್ ಸರ್ಕಲ್’ ಕಲಾಕೃತಿಯೂ ಜನರನ್ನು ಆಕರ್ಷಿಸುತ್ತಿದ್ದು, ಮೆಚ್ಚುಗೆಗೂ ಪಾತ್ರವಾಗಿದೆ.
ಹುಣಸೂರು ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮ ಪಂಚವಳ್ಳಿಯ ಕಲಾವಿದ ಕೃಷ್ಣಮೂರ್ತಿ ಈ ಕಲಾಕೃತಿಯನ್ನು ಸೃಷ್ಟಿಸಲು ವರ್ಷಾನುಗಟ್ಟಲೇ ತೆಗೆದುಕೊಂಡಿದ್ದಾರೆ. ಅದಕ್ಕೆ ಬಳಕೆಯಾಗಿರುವುದು 6 ಸಾವಿರ ಬೀಜಗಳು, 12 ಸಾವಿರ ಮುಳ್ಳುಗಳು!
ಕಾಡಂಚಿನಲ್ಲಿ ಸಿಗುವ ಬೀಜ ಹಾಗೂ ಮುಳ್ಳುಗಳನ್ನು ಹೆಕ್ಕಿ ತಂದು ಅದರಲ್ಲಿ ಕಲೆಯನ್ನು ಹುಡುಕಿದ್ದಾರೆ. 2,200ಕ್ಕೂ ಹೆಚ್ಚು ಇರುವೆಗಳನ್ನು ಸೃಷ್ಟಿಸಿದ ಅವರು, ಅವುಗಳನ್ನು ಗೋಡೆಗಳ ಮೇಲೆ ಅಂಟಿಸಿದ್ದಾರೆ. ಇದಕ್ಕೆ ಒಂದು ತಿಂಗಳು ಸಮಯ ಕೊಟ್ಟಿದ್ದಾರೆ.
ಫೋರ್ಟ್ ಕೊಚ್ಚಿನ್‌ನಲ್ಲಿ ‘ಕೊಚ್ಚಿ ಮುಝಿರಿಸ್ ಬಿನಾಲೆ ಪ‍್ರತಿಷ್ಠಾನ’ದವರು ಪ‍್ರತಿ ವರ್ಷವೂ ಆಯೋಜಿಸುವ ಕಲಾ ಪ್ರದರ್ಶನ ಅಂತರರಾಷ್ಟ್ರೀಯ ಖ್ಯಾತಿ ಪಡೆದಿದ್ದು, ದೇಶವಷ್ಟೇ ಅಲ್ಲದೇ ವಿದೇಶದ ಕಲಾವಿದರೂ ಇಲ್ಲಿ ಪ್ರದರ್ಶನಕ್ಕಿಡುತ್ತಾರೆ. ಕಲಾಕೃತಿಗಳ ಮಾರಾಟವೂ ನಡೆಯುತ್ತದೆ.
ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಪದವಿ ಪಡೆದಿರುವ ಕೃಷ್ಣಮೂರ್ತಿ ಪ್ರಕೃತಿಯಲ್ಲಿ ಸಿಗುವ ವಸ್ತುಗಳಿಂದಲೇ ಆಕೃತಿಗಳನ್ನು ಸೃಷ್ಟಿಸುತ್ತಾರೆ.
‘ಒಣಗಿದ ಎಲೆ, ಮರ, ಸೇರಿದಂತೆ ಯಾವುದೇ ವಸ್ತುವಿಗೂ ಒಂದು ವೈಜ್ಞಾನಿಕ, ತರ್ಕಬದ್ಧ ರಚನೆಯು ಇರುತ್ತದೆ. ಆ ಮಾದರಿಯನ್ನು ಅನುಸಿರಸಿ ಕಲಾಕೃತಿ ರಚಿಸುವೆ. ಪ್ರಕೃತಿಯೇ ಪ್ರೇರಣೆ’ ಎಂದು ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘10x19 ಅಡಿಯ ಒಂದು ಕೋಣೆಯನ್ನೇ ಕಲಾಕೃತಿ ಅಳವಡಿಕೆಗಳನ್ನು ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳು, ವಿದೇಶದ ಕಲಾವಿದರಿಂದ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದರು.
ಬಿನಾಲೆ ಕಲಾಪ್ರದರ್ಶನವು ಕಳೆದ ಡಿ.12ರಿಂದ ಆರಂಭಗೊಂಡಿದ್ದು, ಮಾರ್ಚ್ 31ರವರೆಗೆ ನಡೆಯಲಿದೆ. ಕೊಚ್ಚಿನ್ ಬಂದರಿನ ಪಾರಂಪರಿಕ ಕೋಣೆಗಳು, ಸಾಂಬಾರ ಪದಾರ್ಥದ ದಾಸ್ತಾನು ಕೊಠಡಿಗಳು ಈಗ ಕಲಾ ದೇಗುಲಗಳಾಗಿದ್ದು, ಪ್ರವಾಸಿಗರು, ಕಲಾವಿದರು ಸೇರಿದಂತೆ ಸಾವಿರಾರು ಜನರು ನಿತ್ಯ ಇಲ್ಲಿಗೆ ಬರುತ್ತಾರೆ.
6 ಸಾವಿರ ಬೀಜ, 12 ಸಾವಿರ ಮುಳ್ಳು ಬಳಕೆ ತಯಾರಿಗೆ ವರ್ಷಗಟ್ಟಲೆ ಶ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.