ADVERTISEMENT

ಭೂ ಪರಿವರ್ತನೆಗೆ ಕೊಡವರ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಮೇ 2022, 10:13 IST
Last Updated 11 ಮೇ 2022, 10:13 IST
ಮುತ್ತಣ್ಣ
ಮುತ್ತಣ್ಣ   

ಮೈಸೂರು: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಮೂರೇ ದಿನದಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಲಾಗುವುದು ಎಂಬ ಕಂದಾಯ ಸಚಿವ ಆರ್‌.ಅಶೋಕ ಹೇಳಿಕೆಯನ್ನು ಕೊಡಗು ಸಂರಕ್ಷಣಾ ವೇದಿಕೆ ಖಂಡಿಸಿದೆ.

‘ಕೊಡಗು ಜಿಲ್ಲೆಯಲ್ಲೂ ಭೂ ಪರಿವರ್ತನೆ ಮೇಲಿನ ನಿರ್ಬಂಧಗಳನ್ನು ತೆರವು ಮಾಡಿದರೆ ಜಿಲ್ಲೆಯಾದ್ಯಂತ ಬಡಾವಣೆ, ರೆಸಾರ್ಟ್‌ಗಳು ತಲೆ ಎತ್ತಲಿವೆ. ಇಲ್ಲಿನ ಜೀವವೈವಿಧ್ಯ ಹಾಗೂ ಕಾವೇರಿ ನದಿ ಹರಿವಿಗೆ ಧಕ್ಕೆಯಾಗಲಿದೆ’ ಎಂದು ವೇದಿಕೆಯ ಅಧ್ಯಕ್ಷ ಚೊಟ್ಟೀರ್‌ಮಾಡ ರಾಜೀವ್‌ ಬೋಪಯ್ಯ ಅವರು ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

‘ಮಿತಿಮೀರಿದ ಮಾನವ ಹಸ್ತಕ್ಷೇಪದಿಂದಲೇ ಕಳೆದ ಐದು ವರ್ಷಗಳಲ್ಲಿ ಭೂ ಕುಸಿತದಂತ ಘಟನೆಗಳು ಮುಂದುವರಿದಿವೆ. ಬೆಂಗಳೂರಿನಲ್ಲಿ ಕೂತು ಆದೇಶಗಳನ್ನು ಹೊರಡಿಸುವುದರಿಂದ ಸ್ಥಳೀಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕಾವೇರಿ ನದಿ ಹರಿವಿಗೆ ಧಕ್ಕೆಯಾದರೆ ಕರ್ನಾಟಕ, ತಮಿಳುನಾಡಿನ 8 ಕೋಟಿ ಜನ ನೀರಿಗಾಗಿ ಯುದ್ಧಕ್ಕಿಳಿಯುವ ಸನ್ನಿವೇಶ ಸೃಷ್ಟಿಯಾಗುತ್ತದೆ’ ಎಂದರು.

ADVERTISEMENT

‘ಕೊಡವ ಕುಟುಂಬಗಳಲ್ಲಿ 50ಕ್ಕೂ ಹೆಚ್ಚು ಮಂದಿ ಸದಸ್ಯರು ಇರುತ್ತಾರೆ. ಅವರಿಗೆ ಪಟ್ಟೆದಾರ ಮುಖ್ಯಸ್ಥ. ಇದೀಗ ರಾಜ್ಯದಾದ್ಯಂತ ಒಂದೇ ಕಾನೂನು ಹೊರಡಿಸಿದ್ದರಿಂದ ಪೌತಿ ಖಾತೆ ವರ್ಗಾವಣೆಯಾಗುತ್ತಿಲ್ಲ. ನೇರ ವಾರಸುದಾರರಿಗೆ ಆಸ್ತಿ ಸೇರುತ್ತಿದೆ. ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ಕಡತಗಳು ವಿಲೇವಾರಿಯಾಗದೇ ಉಳಿದಿವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಮಸ್ಯೆ ಕುರಿತು ಪ್ರಧಾನಿಗೆ ಪತ್ರ: ‘ಸ್ಥಳೀಯ ಜನಪ್ರತಿನಿಧಿಗಳು ಕೊಡವರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕೊಡವ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು. ಅವರು ಪ್ರತಿಕ್ರಿಯಿಸಿ ಕ್ರಮವಹಿಸುವರೆಂಬ ಭರವಸೆ ಇದೆ’ ಎಂದು ರಾಜೀವ್‌ ಬೋಪಯ್ಯ ಹೇಳಿದರು.

ನಿವೃತ್ತ ಕರ್ನಲ್‌ ಚೆಪ್ಪುಡಿರ ಪಿ.ಮುತ್ತಣ್ಣ ಮಾತನಾಡಿ, ‘ಗೋಣಿಕೊಪ್ಪಲು, ಪೊನ್ನಂಪೇಟೆ ಒಂದೇ ಆಗಿವೆ. ಕೊಡಗಿನ ಪಟ್ಟಣಗಳು ನಗರಗಳಾದರೆ ಜಿಲ್ಲೆಯ ನೈಸರ್ಗಿಕ ಸಂಪತ್ತು ನಾಶವಾಗಲಿದೆ’ ಎಂಬ ಆತಂಕ ವ್ಯಕ್ತಪಡಿಸಿದರು.

ವೇದಿಕೆಯ ಜಮ್ಮಡ ಗಣೇಶ್ ಅಯ್ಯಣ್ನ, ಅಣ್ಣೀರ ಹರೀಶ್‌ ಮಾದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.