ADVERTISEMENT

‘ಆಯಿಲ್‌ ಲೂಟಿ ಮೋದಿ ಸರ್ಕಾರ’: ಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 13:36 IST
Last Updated 17 ಮಾರ್ಚ್ 2020, 13:36 IST

ಮೈಸೂರು: ಕೇಂದ್ರ–ರಾಜ್ಯ ಸರ್ಕಾರಗಳು ಪೆಟ್ರೋಲ್‌–ಡೀಸೆಲ್‌ಗೆ ಮತ್ತಷ್ಟು ಸುಂಕ ವಿಧಿಸಿರುವುದಕ್ಕೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಅರ್ಧಕ್ಕರ್ಧ ಕುಸಿತಗೊಂಡರೂ, ದೇಶದಲ್ಲಿ ಬೆಲೆ ಇಳಿಕೆಯಾಗಿಲ್ಲ. ಸುಂಕ ಹೆಚ್ಚಿಸುವ ಮೂಲಕ ಸುಲಿಗೆ ಮಾಡಲಾಗುತ್ತಿದೆ ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಏಪ್ರಿಲ್‌ 1ರಿಂದ ಪೆಟ್ರೋಲ್–ಡೀಸೆಲ್ ದರ ₹ 5 ಹೆಚ್ಚಲಿದೆ. ಗ್ರಾಹಕರಿಗೆ ವರ್ಗವಾಗಬೇಕಿದ್ದ ದರ ಇಳಿತದ ಲಾಭವನ್ನು ಎರಡೂ ಸರ್ಕಾರಗಳು ಸುಂಕ ಹೆಚ್ಚಳದ ಮೂಲಕ ವಸೂಲಿಗೆ ಮುಂದಾಗಿವೆ. ಇದನ್ನು ಖಂಡಿಸಿ ಕಾಂಗ್ರೆಸ್‌ ರಾಷ್ಟ್ರದಾದ್ಯಂತ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದು ಹೇಳಿದರು.

ADVERTISEMENT

‘144 ಕಲಂ ಈ ಹಿಂದೆ ಯಾವಾಗಲೂ ಹೇರಿಲ್ಲ. ಬೆಲೆ ಏರಿಕೆ ವಿಷಯಾಂತರಗೊಳಿಸಲಿಕ್ಕಾಗಿಯೇ ಜಿಲ್ಲೆಯಲ್ಲಿ 144 ಜಾರಿಗೊಳಿಸಲಾಗಿದೆ. ಕೊರೊನಾ ವೈರಸ್‌ ಬಗ್ಗೆ ಆತಂಕದ ವಾತಾವರಣ ಸೃಷ್ಟಿಸಲಾಗಿದೆ’ ಎಂದು ಲಕ್ಷ್ಮಣ್ ಹರಿಹಾಯ್ದರು.

ವಕ್ತಾರ ಲಕ್ಷ್ಮಣ್‌ ನೀಡಿದ ಈ ಹೇಳಿಕೆಯನ್ನು ಪತ್ರಕರ್ತರು ಪ್ರಶ್ನಿಸುತ್ತಿದ್ದಂತೆ, ‘ಕೊರೊನಾ ವೈರಸ್‌ ಬಗ್ಗೆ ಇಲ್ಲಿ ಪ್ರಸ್ತಾಪ ಮಾಡುವುದು ಬೇಡ. ಸೋಂಕು ನಿಯಂತ್ರಣಕ್ಕೆ ಕಾಂಗ್ರೆಸ್‌ ಸಹ ಜಿಲ್ಲಾಡಳಿತ, ಸರ್ಕಾರಕ್ಕೆ ಸಹಕಾರ ನೀಡಲಿದೆ. ಮಾರ್ಚ್‌ 31ರವರೆಗೂ ಜಿಲ್ಲೆಯಲ್ಲಿ ಪಕ್ಷದ ವತಿಯಿಂದ ಯಾವೊಂದು ಚಟುವಟಿಕೆ ನಡೆಸಲ್ಲ’ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದರು.

‘ದೇಶದ ಎಲ್ಲೆಡೆ ಕೊರೊನಾ ವೈರಸ್ ಸೋಂಕು ಭೀತಿ ಸೃಷ್ಟಿಸಿದೆ. ಈ ಅವಕಾಶವನ್ನು ಸಮಯ ಸಾಧಕತನಕ್ಕಾಗಿ ಬಳಸಿಕೊಂಡ ಕೇಂದ್ರ–ರಾಜ್ಯ ಸರ್ಕಾರಗಳು ಲೀಟರ್‌ಗೆ ₹ 5 ಹೆಚ್ಚಳ ಮಾಡಿವೆ. ಈ ಹೊತ್ತಲ್ಲಿ ಇದರ ವಿರುದ್ಧ ಪ್ರತಿಭಟಿಸಲು ಸಾಧ್ಯವಾಗದಂತಹ ಸನ್ನಿವೇಶ ನಿರ್ಮಾಣಗೊಂಡಿದೆ’ ಎಂದು ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ, ಲಕ್ಷ್ಮಣ್‌ ಹೇಳಿಕೆ ಸಮರ್ಥಿಸಿಕೊಂಡರು.

ಮೈಸೂರು ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.