ADVERTISEMENT

ದಲಿತ ಮುಖ್ಯಮಂತ್ರಿ ಯಾಕಾಗಬಾರದು: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 8:43 IST
Last Updated 19 ಜುಲೈ 2022, 8:43 IST
ಮೈಸೂರಿನಲ್ಲಿ ಮಂಗಳವಾರ ನಡೆದ ಸಂವಾದದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದರು‌. ಸುಬ್ರಹ್ಮಣ್ಯ, ರವಿಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಬಸವಣ್ಣ ಇದ್ದರು
ಮೈಸೂರಿನಲ್ಲಿ ಮಂಗಳವಾರ ನಡೆದ ಸಂವಾದದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದರು‌. ಸುಬ್ರಹ್ಮಣ್ಯ, ರವಿಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಬಸವಣ್ಣ ಇದ್ದರು   

ಮೈಸೂರು: ‘ಕಾಂಗ್ರೆಸ್‌ ಬಹುತೇಕ ಎಲ್ಲ ಸಮುದಾಯಗಳ ನಾಯಕರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದೆ. ದಲಿತ ಸಮುದಾಯದವರು ಮುಖ್ಯಮಂತ್ರಿ ಯಾಕಾಗಬಾರದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

‘ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಿ 136ಕ್ಕಿಂತಲೂ ಹೆಚ್ಚು ಸೀಟುಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ. ಆಂತರಿಕ ಸಮೀಕ್ಷೆಯೂ ನಮಗೆ ಬಹುಮತ ಬರಲಿದೆಯೆಂಬುದನ್ನು ಹೇಳಿದೆ. ಅರಸು, ವೀರಪ್ಪ ಮೊಯ್ಲಿ, ಗುಂಡೂರಾವ್‌, ಬಂಗಾರಪ್ಪ, ಸಿದ್ದರಾಮಯ್ಯ ಸಿ.ಎಂ ಆಗಿದ್ದಾರೆ. ದಲಿತ ಸಿ.ಎಂ ಯಾಕಾಗಬಾರದು?’ ಎಂದು ಮಂಗಳವಾರ ಇಲ್ಲಿನ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜ್ಯ ಬಿಜೆಪಿ ಸರ್ಕಾರವು ದಪ್ಪ ಚರ್ಮದ ಅತಿ ಭ್ರಷ್ಟ ಸರ್ಕಾರ. ನಿತ್ಯ ನಡೆಯುತ್ತಿರುವ ಹಗರಣಗಳು, ಭ್ರಷ್ಟಾಚಾರಕ್ಕೆ ಜನರು ಬೇಸತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್‌ ಸರ್ಕಾರವು ಚುನಾವಣಾ ಪ್ರಣಾಳಿಕೆಯ ಬಹುತೇಕ ಎಲ್ಲ ಅಂಶಗಳನ್ನು ಈಡೇರಿಸಿತ್ತು. ಬಿಜೆಪಿಯು ತನ್ನ ಪ್ರಣಾಳಿಕೆಯ ಶೇ 40ರಷ್ಟು ನೆರವೇರಿಸಿದೆಯೇ? ಕಾಂಗ್ರೆಸ್‌ ಅಧಿಕಾರಕ್ಕೆ ಬಂದೊಡನೆ ಬಿಜೆಪಿಯ ಎಲ್ಲ ಹಗರಣಗಳ ತನಿಖೆ ನಡೆಸಲಿದೆ’ ಎಂದು ತಿಳಿಸಿದರು.

ADVERTISEMENT

ಮೆಲುಕು ಹಾಕಬಾರದೇ: ‘ಮನುಷ್ಯನ ಬದುಕಿನಲ್ಲಿ ಹಲವು ಮೈಲುಗಲ್ಲುಗಳಿರುತ್ತವೆ. ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಸಿದ್ದರಾಮೋತ್ಸವ ಆಚರಿಸುತ್ತಿದ್ದಾರೆ. ಪುಸ್ತಕ ಬಿಡುಗಡೆ ಮಾಡುತ್ತಿದ್ದಾರೆ. ಜನ್ಮದಿನದ ಸಂದರ್ಭದಲ್ಲಿ ನಡೆದು ಬಂದ ದಾರಿಯನ್ನು ಮೆಲುಕು ಹಾಕಬಾರದು ಎಂದರೆ ಹೇಗೆ?. ನಾನು ಮತ್ತು ರಾಹುಲ್‌ ಗಾಂಧಿ ಇಬ್ಬರೂ ಉತ್ಸವದಲ್ಲಿ ಭಾಗವಹಿಸುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಬಣಗಳಿಲ್ಲ. ನಮ್ಮದು ಕಾಂಗ್ರೆಸ್ ಬಣ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಕೈ ಬಲಪಡಿಸಿ: ‘ರಾಜಕೀಯ ಜೀವನದಲ್ಲಿ ಮಹತ್ವದ ಹಂತಕ್ಕೆ ಬಂದು ತಲುಪಿದ್ದೇನೆ. ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತಂದು ನನ್ನ ಕೈ ಬಲಪಡಿಸಬೇಕೆಂದು ಒಕ್ಕಲಿಗ ಸಮುದಾಯವನ್ನು ಕೇಳಿದ್ದೇನೆ. ಸಮುದಾಯ ನನ್ನ ಜೊತೆಗೆ ನಿಲ್ಲಲಿದೆ. ಜಾತ್ಯತೀತ ತತ್ವದಲ್ಲಿ ನಂಬಿಕೆಯಿಟ್ಟವನು ಎಲ್ಲ ಸಮುದಾಯಗಳೂ ಬೆಂಬಲಿಸುವ ವಿಶ್ವಾಸವಿದೆ’ ಎಂದರು.

ಹಿಜಾಬ್‌, ಹಲಾಲ್ ವಿವಾದದಲ್ಲಿ ನಿಲುವು ಸ್ಪಷ್ಟಪಡಿಸದ್ದರಿಂದ ಅಲ್ಪಸಂಖ್ಯಾತ ಸಮುದಾಯ ದೂರವಾಗಿದೆಯಲ್ಲ ಎಂಬ ‍ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಭ್ರಷ್ಟಾಚಾರದಲ್ಲಿ ನಿರತವಾಗಿದ್ದ ಬಿಜೆಪಿ ಸರ್ಕಾರ ಹುಟ್ಟುಹಾಕಿದ ವಿವಾದಗಳು ಶಾಂತಿ ಕದಡುತ್ತಿದ್ದವು. ಹೈಕಮಾಂಡ್‌ ಸೂಚಿಸಿದಂತೆ ನಾನು ಮಾತನಾಡಿಲ್ಲ. ಅವುಗಳ ಕುರಿತು ನಮ್ಮ ಹಲವು ನಾಯಕರು ಮಾತನಾಡಿದ್ದಾರೆ’ ಎಂದರು.

‘ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟವನ್ನು ಬಿಜೆಪಿ ಹಾಳು ಮಾಡುತ್ತಿದೆ. ಜನರಿಗೆ ಬಸವಣ್ಣ, ಶಿಶುನಾಳ ಷರೀಫ, ಕನಕದಾಸರ ಕರ್ನಾಟಕ ಬೇಕು. ಆದರೆ, ಬಿಜೆಪಿ ಕೋಮು ದ್ವೇಷ ಹರಡಿ ಶಾಂತಿ ಕದಡುತ್ತಿದೆ. ಜನರು ತಕ್ಕ ಪಾಠವನ್ನು ಕಲಿಸಲಿದ್ದಾರೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.