ಕೆ.ಆರ್.ನಗರ: ‘ಕ್ಷೇತ್ರದ ಅಭಿವೃದ್ಧಿಗಾಗಿ ಈವರೆಗೆ ₹600 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ’ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲ್ಲೂಕಿನ ಸೌತನಹಳ್ಳಿಯಲ್ಲಿ ಸಿಸಿ ರಸ್ತೆ, ಚರಂಡಿ, ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ತಾಲ್ಲೂಕಿನ ಹೊಸೂರು ಕಲ್ಲಹಳ್ಳಿ, ಸೌತನಹಳ್ಳಿ, ಸಾತಿಗ್ರಾಮ, ದೆಗ್ಗನಹಳ್ಳಿ, ಚಾಮಲಾಪುರ, ತಿಪ್ಪೂರು, ಕನುಗನಹಳ್ಳಿ, ಗೊರಗುಂಡಿ, ನಾರಾಯಣಪುರ, ಕಗ್ಗೆರೆ, ಕಾಮೇನಹಳ್ಳಿ, ಬೋರೆ ಕಲ್ಲಹಳ್ಳಿ ಪ್ರತಿವರ್ಷ ನೀರಿನ ಸಮಸ್ಯೆ ಎದುರಿಸುತ್ತಿವೆ. ಈ ಭಾಗದ ಗ್ರಾಮಗಳಿಗೆ ನೀರು ಒದಗಿಸಲು ನಾಲಾ ಆಧುನೀಕರಣಕ್ಕಾಗಿ ₹43 ಕೋಟಿ ಅನುದಾನ ಮಂಜೂರಾಗಿದ್ದು, ಈಗಾಗಲೇ ಟೆಂಡರ್ ಹಂತ ಮುಗಿದಿದೆ, ಡಿಸೆಂಬರ್ ವೇಳೆಗೆ ಕಾಮಗಾರಿ ಪ್ರಾರಂಭವಾಗಲಿದೆ’ ಎಂದು ಭರವಸೆ ನೀಡಿದರು.
‘ಕ್ಷೇತ್ರದಲ್ಲಿ ಶಾಸಕನಾಗಿ ಜನಪರ ಕೆಲಸಗಳು ಮಾಡಬೇಕಾಗಿರುವುದು ನನ್ನ ಜವಾಬ್ದಾರಿ, ಅದರಂತೆ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ, ವಿರೋಧಿಗಳು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಅಭಿವೃದ್ಧಿ ಹಿತದೃಷ್ಟಿಯಿಂದ ರಾಜಕಾರಣ ಮಾಡಬೇಕೇ ಹೊರತು, ವೈಯಕ್ತಿಕ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡಬಾರದು’ ಎಂದು ತಿರುಗೇಟು ನೀಡಿದರು.
ಮಹಿಳೆಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ‘ಈ ಹಿಂದೆ ವ್ಯಕ್ತಿಯೊಬ್ಬ ನನ್ನೊಂದಿಗೆ ಫೋಟೊ ತೆಗೆಸಿಕೊಂಡ ಮಾತ್ರಕ್ಕೆ ಅವನು ನನ್ನ ಬಲಗೈ ಭಂಟ ಆಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ ಅವರು, ‘ಇದರಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅವನಿಗೂ ನನಗೂ ಯಾವುದೇ ಸಂಬಂಧ ಇಲ್ಲದೇ ಹೋದರೂ ವಿರೋಧಿಗಳಿಂದ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸಯ್ಯದ್ ಜಾಬೀರ್, ಕಾಂಗ್ರೆಸ್ ಮುಖಂಡ ಕಲ್ಲಹಳ್ಳಿ ಶ್ರೀನಿವಾಸ್, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿ.ಪಿ.ಕುಲದೀಪ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಂ.ಶಂಕರಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ, ಸೆಸ್ಕ್ ಎಇಇ ಅರ್ಕೇಶಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ, ಗ್ರಾಮಸ್ಥರಾದ ಪುಟ್ಟರಾಜು, ಕೃಷ್ಣಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.