ಕೆ.ಆರ್.ನಗರ: ರೆಸಾರ್ಟ್, ಹೋಂ ಸ್ಟೇ, ಅತಿಥ್ಯ ಉದ್ಯಮದಿಂದ ಕಾಡು ನಾಶವಾಗುತ್ತಿದ್ದು, ಅದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಬಾರದು ಎಂದು ಕರ್ನಾಟಕ ಕೃಷಿಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ ಭೋವಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕೃಷಿಕರ ಸಂಘದ ವತಿಯಿಂದ ಬುಧವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
‘ಉದ್ಯಮಗಳಿಂದ ಕಾಡು ಪ್ರಾಣಿಗಳಿಗೆ ಅಡಚಣೆಯಾಗಿ ಕಾಡು ಬಿಟ್ಟು ನಾಡಿಗೆ ಬರುತ್ತಿವೆ. ಹೀಗೆ ನಾಡಿಗೆ ಬರುವ ಆನೆ, ಹುಲಿ, ಚಿರತೆ, ಕರಡಿಗಳಿಂದ ರೈತರ ಬೆಳೆ ನಾಶವಾಗುತ್ತಿದೆ. ಕಾಡು ಪ್ರಾಣಿಗಳು ರೈತರ ಮೇಲೆ ದಾಳಿ ಮಾಡುತ್ತಿವೆ, ದಾಳಿಯಲ್ಲಿ ಸಾಕಷ್ಟು ರೈತರ ಪ್ರಾಣ ಹಾನಿಯಾಗಿದೆ, ಹಲವು ರೈತ ಕುಟುಂಬಗಳು ಬೀದಿ ಪಾಲಾಗಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ರಸಗೊಬ್ಬರಕ್ಕೆ ನಿಗದಿತ ದರಕ್ಕಿಂತ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಒಂದೊಂದು ಅಂಗಡಿಗಳಲ್ಲಿ ಒಂದೊಂದು ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೃಷಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ರಸಗೊಬ್ಬರ ಅಂಗಡಿ ಮಾಲೀಕರ ಸಭೆ ಕರೆದು ಸೂಕ್ತ ತಿಳಿವಳಿಕೆ ನೀಡಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವ ಅಂಗಡಿಗಳ ಲೈಸನ್ಸ್ ರದ್ದು ಮಾಡಬೇಕು. ಇಲ್ಲದೇ ಹೋದಲ್ಲಿ ಕೃಷಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾ ಗೌರವ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಅಣ್ಣೇಗೌಡ, ಕೆ.ಆರ್.ನಗರ ತಾಲ್ಲೂಕು ಘಟಕದ ಅಧ್ಯಕ್ಷ ದೇವೇಂದ್ರ, ಉಪಾಧ್ಯಕ್ಷ ಸಿದ್ದೇಗೌಡ, ಕಾರ್ಯದರ್ಶಿ ರಾಜಣ್ಣ, ಖಜಾಂಚಿ ಗಣೇಶ್, ಪ್ರಸನ್ನಕುಮಾರ್, ಮಾರಿಗುಡಿಕೊಪ್ಪಲು ಈಶ್ವರ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ವೀಣಾ, ಹುಣಸೂರು ತಾಲ್ಲೂಕು ಘಟಕದ ಅಧ್ಯಕ್ಷ ತಮ್ಮರಸ, ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ್, ಬೋರೇಗೌಡ ಗ್ರಾಮ ಘಟಕದ ಅಧ್ಯಕ್ಷ ದಿನೇಶ್, ಗೌಡೇನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಜಯರಾಮ, ಚೀರ್ನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ರಾಮೇಗೌಡ, ಮರದೂರು ಗ್ರಾಮ ಘಟಕದ ಅಧ್ಯಕ್ಷ ಸ್ವಾಮಿನಾಯಕ, ಕಾಳೇನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಮಾಲೇಗೌಡ, ರೈತ ಮುಖಂಡರಾದ ಪುಟ್ಟಸ್ವಾಮಿ, ರಾಜನಾಯಕ ಭಾಗವಹಿಸಿದ್ದರು
ರೆಸಾರ್ಟ್, ಹೋಂ ಸ್ಟೇ ನಿಲ್ಲಿಸದಿದ್ದರೆ ಹೋರಾಟ | ರಸಗೊಬ್ಬರಕ್ಕೆ ನಿಗದಿತ ದರಕ್ಕಿಂತ ಹೆಚ್ಚಿನ ವಸೂಲಿ | ಆತಿಥ್ಯ ಉದ್ಯಮಗಳಿಗೆ ಕಾಡು ಪ್ರಾಣಿಗಳಿಗೆ ಅಡಚಣೆ
‘ನಿಗದಿತ ದರಕ್ಕಿಂತ ₹50 ಹೆಚ್ಚು ವಸೂಲಿ’
‘ಗ್ಯಾಸ್ ಸಿಲಿಂಡರ್ ಮನೆ ಮನೆಗೆ ತಂದು ಹಾಕಲು ರಶೀದಿ ದರಕ್ಕಿಂತ ₹50 ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಪ್ರಶ್ನಿಸಿದರೆ ಆಟೋ ಬಾಡಿಗೆ ಎಂದು ಉತ್ತರಿಸುತ್ತಾರೆ. ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು ತಹಶೀಲ್ದಾರ್ ಅವರು ಗ್ಯಾಸ್ ಏಜೆನ್ಸಿ ಮಾಲೀಕರ ಸಭೆ ಕರೆದು ಸೂಕ್ತ ತಿಳಿವಳಿಕೆ ನೀಡಬೇಕು. ಇಲ್ಲದೇ ಹೋದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೆಕಾಗುತ್ತದೆ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.