ADVERTISEMENT

ಕೃಷ್ಣರಾಜ: ಲಿಂಗಾಯತರಿಗೆ ಕಾಂಗ್ರೆಸ್ ಟೆಕೆಟ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 12:55 IST
Last Updated 30 ಮಾರ್ಚ್ 2023, 12:55 IST

ಮೈಸೂರು: ‘ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ವೀರಶೈವ ಲಿಂಗಾಯತ ಸಮಾಜದವರಿಗೆ ಟಿಕೆಟ್ ನೀಡಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕಾರಿ ಸಮಿತಿಯ ಸದಸ್ಯ ತುಂಬಲ ಲೋಕೇಶ್‌ ಒತ್ತಾಯಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ–ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ಸಹಯೋಗದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 11 ಕ್ಷೇತ್ರಗಳಿವೆ. ಕಳೆದ ಮೂರು ಚುನಾವಣೆಯನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷವು ‌ನಮ್ಮ ಸಮಾಜಕ್ಕೆ ಆದ್ಯತೆ‌ ನೀಡಿಲ್ಲ; ಸಾಮಾಜಿಕ ನ್ಯಾಯವನ್ನು ಒದಗಿಸುತ್ತಿಲ್ಲ ಎಂಬ ನೋವು–ವೇದನೆ ನಮ್ಮನ್ನು ಕಾಡುತ್ತಿದೆ. ಆ ನೋವನ್ನು ಈ ಬಾರಿ ಹೋಗಲಾಡಿಸಬೇಕು’ ಎಂದು ಹೇಳಿದರು.

ADVERTISEMENT

‘ವರುಣಾದಲ್ಲಿ ಸಮಾಜದ ಮತದಾರರು 70 ಸಾವಿರ ಇದ್ದೇವೆ. ಕೃಷ್ಣರಾಜ ಕ್ಷೇತ್ರದಲ್ಲಿ 45ಸಾವಿರ ಇದ್ದೇವೆ. ಅಲ್ಲಿ ಮತದಾನ ಮಾಡುವವರಲ್ಲಿ ನಾವು ಮುಂದಿದ್ದೇವೆ. 42 ಸಾವಿರ ಮಂದಿ‌ ಮತ ಚಲಾಯಿಸುತ್ತಾರೆ. ಕಾಂಗ್ರೆಸ್‌ನಿಂದ ವರುಣಾ ಹಾಗೂ ಕೃಷ್ಣರಾಜ ಕ್ಷೇತ್ರಗಳಲ್ಲಿ ಸಮಾಜದವರಿಗೆ ಟಿಕೆಟ್ ಬಯಸಿದ್ದೆವು. ಆದರೆ, ಕಾಂಗ್ರೆಸ್ ಪ್ರಕಟಿಸಿರುವ ಮೊದಲ ಪಟ್ಟಿ ಪ್ರಕಾರ, ವರುಣಾದಲ್ಲಿ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಹೀಗಾಗಿ, ಕೃಷ್ಣರಾಜ ಕ್ಷೇತ್ರದಿಂದಾದರೂ ಟಿಕೆಟ್‌ ಕೊಡಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ’ ಎಂದರು.

‘ಜಿಲ್ಲೆಯ ನಾಯಕ ಸಿದ್ದರಾಮಯ್ಯ ಅವರು ನಿಜವಾಗಿಯೂ ಸಾಮಾಜಿಕ ನ್ಯಾಯ ಒದಗಿಸಬೇಕು ಎನ್ನುವುದಾದರೆ ನಮ್ಮ ಸಮಾಜದವರಿಗೆ ಟಿಕೆಟ್ ಕೊಡಲೇಬೇಕು. ಸಮಾಜದ ನಾಯಕರಾದ ಎಂ.ಬಿ.ಪಾಟೀಲ, ಶಾಮನೂರು ಶಿವಶಂಕರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೂ ಮನವಿ ಸಲ್ಲಿಸಿದ್ದೇವೆ. ಅರ್ಜಿ ಸಲ್ಲಿಸಿರುವವರಲ್ಲಿ ನಮ್ಮವರನ್ನು ಪರಿಗಣಿಸಬೇಕು ಮತ್ತು ಈವರೆಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಗಮನಸೆಳೆದಿದ್ದೇವೆ’ ಎಂದು ತಿಳಿಸಿದರು.

‘ಬಿಜೆಪಿಯಿಂದ ಎಸ್‌.ಎ.ರಾಮದಾಸ್ ಅವರಿಗೆ ಟಿಕೆಟ್ ‌ಕೊಡುವುದಿಲ್ಲ ಎಂದಾದರೆ ನಮ್ಮ ಸಮಾಜದವರನ್ನು ಪರಿಗಣಿಸಬೇಕು ಎನ್ನುವುದು ನಮ್ಮ‌ ಆಗ್ರಹವಾಗಿದೆ. ಎರಡೂ ಪಕ್ಷದವರು ಟಿಕೆಟ್ ಕೊಡದಿದ್ದರೆ, ಜೆಡಿಎಸ್‌ ಬೆಂಬಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಟಿ.ಲಿಂಗರಾಜು ಹಡಜನ, ಸಮಾಜದ ಮುಖಂಡರಾದ ಗುರುಸ್ವಾಮಿ, ಎಲ್.ಎಸ್. ಮಹದೇವಸ್ವಾಮಿ, ಗಂಗಾಧರಸ್ವಾಮಿ, ಬಿ.ಕೆ ‌ನಾಗರಾಜ್ ಹಾಗೂ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.