ಮೈಸೂರು: ‘ತಾಲ್ಲೂಕಿನ ಮೀನಾಕ್ಷಿಪುರದ ಕೆಆರ್‌ಎಸ್ ಹಿನ್ನೀರಿನಲ್ಲಿ ದೊಡ್ಡ ಅಪಾಯ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಂಡು ಪ್ರವಾಸಿಗರ ಹುಚ್ಚಾಟಗಳಿಗೆ ಅಂಕುಶ ಹಾಕಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ವಾರಾಂತ್ಯದಲ್ಲಿ ಹಿನ್ನೀರಿನ ಪ್ರದೇಶದ ಕಡೆ ತೆರಳುವ ಪ್ರವಾಸಿಗರಲ್ಲಿ ಕೆಲವರು, ಪಾನಮತ್ತರಾಗಿ ಜೀವಕ್ಕೆ ಅಪಾಯವಾಗುವಂತೆ ವರ್ತಿಸುತ್ತಿದ್ದಾರೆ. ಅವರ ವರ್ತನೆಗಳು ಸ್ಥಳೀಯರ ನೆಮ್ಮದಿಯನ್ನು ಕೆಡಿಸುತ್ತಿದೆ.
ವಾರಾಂತ್ಯದಲ್ಲಿ ಬರುವ ಬಹಳಷ್ಟು ವಾಹನಗಳು ಸ್ಥಳೀಯರಿಗೂ ಕಿರಿ, ಕಿರಿ ಉಂಟು ಮಾಡುತ್ತಿದೆ. ಪ್ರವಾಸಿ ತಾಣವೆಂದು ಅಧಿಕೃತವಾಗಿ ಗುರುತಿಸಿಲ್ಲವಾದ ಕಾರಣ ಪ್ರವಾಸೋದ್ಯಮ ಇಲಾಖೆಯೂ ಇತ್ತ ಗಮನಹರಿಸಿಲ್ಲ. ಪೊಲೀಸ್ ಇಲಾಖೆಯು ಬೀಟ್ ನಡೆಸುತ್ತಿದ್ದು, ಪ್ರವಾಸಿಗರ ಹುಚ್ಚಾಟಕ್ಕೆ ಕಡಿವಾಣ ಬಿದ್ದಿಲ್ಲ.
‘ಈ ಪ್ರದೇಶ ಹಿಂದೆ ಹೀಗಿರಲಿಲ್ಲ. ಸ್ಥಳೀಯರಿಗಷ್ಟೇ ಇಲ್ಲಿನ ಪ್ರಕೃತಿ ಸೌಂದರ್ಯದ ಮಾಹಿತಿಯಿತ್ತು. ಈಚೆಗೆ ಸಾಮಾಜಿಕ ಮಾಧ್ಯಮದಲ್ಲಿ ದೊರೆತ ಪ್ರಚಾರ, ಅಲ್ಲಿನ ಸೌಂದರ್ಯ ಹಾಳುಗೆಡವಿದೆ. ಅಲ್ಲಿಗೆ ಬರುವ ಪ್ರವಾಸಿಗರು ತರುವ ಪ್ಲಾಸ್ಟಿಕ್‌ಗಳು, ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಕಾಣಸಿಗುತ್ತಿವೆ. ತುಸು ದೂರ ಹಜ್ಜೆ ಹಾಕಿದರೆ ಕಾಣಸಿಗುವ ಕಾಂಡೋಮ್ ರಾಶಿಗಳು ಇಲ್ಲಿನ ಮತ್ತೊಂದು ಮುಖವನ್ನು ತೆರೆದಿಡುತ್ತದೆ’ ಎನ್ನುತ್ತಾರೆ ಸ್ಥಳೀಯರು.
ಮೀನಾಕ್ಷಿಪುರಂ ಪ್ರೇಮಿಗಳ, ಮಾದಕ ವ್ಯಸನಿಗಳ, ಫ್ರೆಂಡ್ಸ್ ಗ್ಯಾಂಗ್‌ಗಳ ಅಡ್ಡೆಯಾಗಿ ಬೆಳೆಯುತ್ತಿದೆ. ನೀರಿನಲ್ಲಿ ಕುರ್ಚಿ–ಟೇಬಲ್‌ಗಳನ್ನು ಇಟ್ಟುಕೊಂಡು ಮದ್ಯ ಸೇವಿಸುತ್ತಿರುವ ಹಾಗೂ ಕಾರನ್ನು ನೀರಿಗಿಳಿಸುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ಹುಚ್ಚಾಟಗಳಿಗೆ ಅಂಕುಶ ಹಾಕಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಕ್ರಮ ವಹಿಸಬೇಕಿದೆ ಎನ್ನುವುದು ಪ್ರಜ್ಞಾವಂತರ ಒತ್ತಾಯವಾಗಿದೆ.
ಅಪಾಯಕಾರಿ ಜಾಗ:
ಮೇಲ್ನೋಟಕ್ಕೆ ಸುಂದರವಾಗಿ ಕಾಣುವ ಮೀನಾಕ್ಷಿಪುರಂ, ತನ್ನೊಡಳಿಗೆ ಹಲವು ಜೀವಗಳನ್ನು ಸೆಳೆದುಕೊಂಡಿದೆ. ಅಲ್ಲಿ ವಿಹಾರಕ್ಕೆ ತೆರಳಿ, ನೀರಿಗಿಳಿದ ಯುವಕ, ಯುವತಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ಅನೇಕ ಉದಾಹರಣೆಗಳಿವೆ. ಮೋಜು ಮಸ್ತಿಯ ನೆಪದಲ್ಲಿ ಮತ್ತೊಂದು ದುರಂತ ಆಗುವುದನ್ನು ತಪ್ಪಿಸಲು ಅಧಿಕಾರಿಗಳು ತ್ವರಿತವಾಗಿ ಕ್ರಮ ವಹಿಸಬೇಕು ಎನ್ನುವುದು ಅವರ ಮನವಿಯಾಗಿದೆ.
ಇದೇ ವೇಳೆ, ಪರಿಸರವನ್ನು ಆಸ್ವಾದಿಸಲು ಕುಟುಂಬ ಸಮೇತವಾಗಿ ಬಂದು ಹೋಗುವವರಿಗೆ ಪುಂಡರಿಂದ ತೊಂದರೆ ಆಗುವುದನ್ನೂ ತಪ್ಪಿಸಬೇಕು ಎನ್ನುವ ಒತ್ತಾಯವೂ ಇದೆ.
‘ಮೀನಾಕ್ಷಿಪುರದ ಕೆಆರ್‌ಎಸ್ ಹಿನ್ನೀರಿನಲ್ಲಿ 2024ರ ಸೆಪ್ಟೆಂಬರ್‌ನಲ್ಲಿ ರೇವ್ ಪಾರ್ಟಿ ನಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಆಗ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಪೊಲೀಸರನ್ನು ನಿಯೋಜಿಸಿದ್ದರು. ಆದರೆ, ನಂತರ ಅತ್ತ ಗಮನಕೊಡದ ಪರಿಣಾಮ ಅಲ್ಲಿ ಮೋಜು–ಮಸ್ತಿ, ಮದ್ಯಪಾನ ಗೋಷ್ಠಿಗಳು ಜಾಸ್ತಿಯಾಗಿವೆ. ಇದರಿಂದ ನಮ್ಮ ನೆಮ್ಮದಿಯೂ ಹಾಳಾಗುತ್ತಿದೆ’ ಎಂದು ಸ್ಥಳೀಯರು ಹೇಳಿದರು.
ಪ್ರಕರಣ ದಾಖಲಿಸುತ್ತೇವೆ: ಎಸ್‌ಪಿ
‘ಡಿಎಸ್‌ಪಿ ಹಾಗೂ ಇತರ ಅಧಿಕಾರಿಗಳು ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬೀಟ್ ಪೊಲೀಸರು ಆಗಾಗ ಭೇಟಿ ನೀಡಿ ಮದ್ಯಪಾನ ಮಾಡುವವರನ್ನು ಅಲ್ಲಿಂದ ತೆರಳುವಂತೆ ಸೂಚನೆ ನೀಡುತ್ತಿದ್ದಾರೆ. ಅಲ್ಲಿ ಈ ರೀತಿಯ ಹುಚ್ಚಾಟಗಳು ಅಥವಾ ಮದ್ಯಪಾನ ಮಾಡುವುದು ಕಂಡುಬಂದರೆ ಪ್ರಕರಣ ದಾಖಲಿಸುವಂತೆ ಸೂಚಿಸುತ್ತೇನೆ. ಇಲ್ಲಿನ ವಿದ್ಯಮಾನಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆಗೂ ಪತ್ರ ಬರೆಯುತ್ತೇನೆ’ ಎಂದು ಎಸ್‌ಪಿ ಎನ್.ವಿಷ್ಣುವರ್ಧನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.