ADVERTISEMENT

ನ್ಯೂಯಾರ್ಕ್‌ ವಿವಿ ಜತೆ ಕೆಎಸ್‌ಒಯು ಒಪ್ಪಂದ: ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 9:58 IST
Last Updated 29 ಸೆಪ್ಟೆಂಬರ್ 2021, 9:58 IST
ಪ್ರೊ.ಎಸ್‌.ವಿದ್ಯಾಶಂಕರ್‌
ಪ್ರೊ.ಎಸ್‌.ವಿದ್ಯಾಶಂಕರ್‌   

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು) ನ್ಯೂಯಾರ್ಕ್‌ ವಿವಿ ಜತೆಗೆ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದು, ವಿವಿಯ ಸಾವಿರ ವಿದ್ಯಾರ್ಥಿಗಳಿಗೆ ಆ ವಿಶ್ವವಿದ್ಯಾಲಯವು ಕೌಶಲ ಅಭಿವೃದ್ಧಿಯ ತರಬೇತಿ ನೀಡಲಿದೆ ಎಂದು ಕೆಸ್‌ಒಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್ ಇಲ್ಲಿ ಹೇಳಿದರು.

ನಗರದ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಯ ಕಲಿಕಾರ್ಥಿ ಸಹಾಯ ಕೇಂದ್ರಗಳ ಸಂಯೋಜನಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯೂಯಾರ್ಕ್‌ ವಿವಿಯಲ್ಲಿ ಭಾರತದ ₹40 ಸಾವಿರಕ್ಕೆ ನೀಡುವ ಕೌಶಲ ತರಬೇತಿಯನ್ನು ‘ಮೇಕ್‌ ಇನ್‌ ಇಂಡಿಯ’ ಕಾರ್ಯಕ್ರಮದಡಿ ₹ 2 ಸಾವಿರಕ್ಕೆ ನೀಡಲು ಅಲ್ಲಿನ ವಿವಿ ಮುಂದೆ ಬಂದಿದೆ. ಜತೆಗೆ, ‘ಸೆಂಟರ್‌ ಆಫ್‌ ಎಕ್ಸಲೆನ್ಸ್’ ಅನ್ನು ಅವರ ಹೂಡಿಕೆಯಲ್ಲೇ ಕೆಎಸ್‌ಒಯು ಆವರಣದಲ್ಲಿ ನಿರ್ಮಾಣ ಮಾಡಲಿದ್ದಾರೆ. ನಮ್ಮ ಶಿಕ್ಷಕರನ್ನು ಕರೆಸಿಕೊಂಡು ಒಂದು ತಿಂಗಳು ತರಬೇತಿ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಕೌಶಲ ಅಭಿವೃದ್ಧಿ ಕಾರ್ಯಕ್ರಮವನ್ನು ಕೆಎಸ್‌ಒಯುನಿಂದ ನೀಡಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ಕೆಎಸ್‌ಒಯುನಲ್ಲಿ ಪ್ರವೇಶ ಪ್ರಕ್ರಿಯೆಯೂ ಆನ್‌ಲೈನ್‌ ಮೂಲಕವೇ ನಡೆಯುತ್ತಿದೆ. ಸ್ವಯಂ ಕಲಿಕಾ ಪರಿಕರಗಳು ಡಿಜಿಟಲ್‌ ಸ್ವರೂಪದಲ್ಲಿ ಸಿಗುವಂತೆ ಮಾಡಲಾಗುವುದು. ಎಂಬಿಎ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್‌ ನೀಡುವ ಬಗ್ಗೆಯೂ ಚಿಂತನೆ ಇದೆ. ‘ಸ್ವಯಂ’ ವೇದಿಕೆ ಮೂಲಕ ಆನ್‌ಲೈನ್‌ ಶಿಕ್ಷಣ ನೀಡಲಾಗುವುದು. ಜನವರಿಯಿಂದ ಪ್ರವೇಶಾವಕಾಶ ನೀಡಲಿದ್ದು, ಈ ಬಾರಿ ವಿದ್ಯಾರ್ಥಿಗಳ ನೋಂದಣಿ ಒಂದು ಲಕ್ಷ ದಾಟಬೇಕು ಎಂಬ ಗುರಿ ಇದೆ. ಶಿಕ್ಷಣದ ಅವಶ್ಯಕತೆಯನ್ನು ಹಳ್ಳಿಗಳಲ್ಲೂ ಮನದಟ್ಟು ಮಾಡಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.