ಮೈಸೂರಿನ ಪುರಭವನದಲ್ಲಿ ಸೋಮವಾರ ನಡೆದ ಪೌರಾಣಿಕ ರಂಗ ಸಂಭ್ರಮದಲ್ಲಿ ‘ರಂಗ ಚಾವಡಿ’ ತಂಡದ ‘ಕುರುಕ್ಷೇತ್ರ’ ನಾಟಕದಲ್ಲಿ ಕರ್ಣ ಪಾತ್ರಧಾರಿ ಸಂಗಾಪುರ ನಾಗರಾಜು, ಕುಂತಿ ಪಾತ್ರದಲ್ಲಿ ಕಲಾವಿದೆ ಸರೋಜಿನಿ
– ಪ್ರಜಾವಾಣಿ ಚಿತ್ರ
ಮೈಸೂರು: ಇಲ್ಲಿನ ಪುರಭವನದಲ್ಲಿ ಸೋಮವಾರ ಪೌರಾಣಿಕ ರಂಗ ಸಂಭ್ರಮ ಮನೆ ಮಾಡಿತ್ತು. ಜಗಮಗಿಸುವ ಬೆಳಕಿನ ವೇದಿಕೆಯಲ್ಲಿ ಜನಪ್ರಿಯ ಐದು ನಾಟಕಗಳ ದೃಶ್ಯಗಳನ್ನು ವಿವಿಧ ನಾಟಕ ಮಂಡಳಿಯ ಕಲಾವಿದರು ಅಭಿನಯಿಸಿದರು.
‘ಮೈಸೂರು ಜಿಲ್ಲಾ ಕನ್ನಡ ವೃತ್ತಿ ರಂಗಭೂಮಿ ಕಲಾವಿದೆಯರ ಸಂಘವು’ ಆಯೋಜಿಸಿದ್ದ 36ನೇ ವರ್ಷದ ನಾಟಕೋತ್ಸವದಲ್ಲಿ ‘ರಂಗ ಚಾವಡಿ’ ತಂಡದ ಕರ್ಣ ಪಾತ್ರಧಾರಿ ಸಂಗಾಪುರ ನಾಗರಾಜು, ಕುಂತಿಯಾಗಿ ಅಭಿನಯಿಸಿದ ಹಿರಿಯ ಕಲಾವಿದೆ ಸರೋಜಿನಿ ಅದ್ಭುತ ಅಭಿನಯದಿಂದ ಎಲ್ಲರನ್ನೂ ಸೆಳೆದರು.
ಮುಳ್ಳೂರು ದೇವರಾಜು ಅವರ ‘ಲಕ್ಷ್ಮಿ ವೆಂಕಟೇಶ್ವರ ಡ್ರಾಮಾ ಸೀನರಿ’ಯ ಜಗಮಗಿಸುವ ಬೆಳಕಿನ ವೇದಿಕೆಯಲ್ಲಿ ಕರ್ಣ– ಕುಂತಿಯರ ಸಂಭಾಷಣೆ, ಹಾಡುಗಳು ಭಾವಪರವಶಗೊಳಿಸಿದವು.
ಕಿರಗಸೂರು ರಾಜಪ್ಪ ನಿರ್ದೇಶನದಲ್ಲಿ ಈ ಐದೂ ನಾಟಕದ ದೃಶ್ಯಾವಳಿಗಳಲ್ಲಿ ಕಲಾವಿದರ ಅಭಿನಯಕ್ಕೆ, ವಾದ್ಯಕಾರರಾದ ಎಚ್.ಪಿ.ನಾಗೇಂದ್ರ, ಪ್ರಸಾದ್, ದಾಸಪ್ಪ ಅಪ್ಪು, ಅಲೆಗ್ಸಾಂಡರ್, ಜಗದೀಶ್ ಸಂಗೀತದ ಸಾಥ್ ನೀಡಿ ಮೆರಗು ಹೆಚ್ಚಿಸಿದರು.
ಭುವನೇಶ್ವರಿ ಕಲಾ ತಂಡದ ‘ಸಾಮ್ರಾಟ್ ಅಶೋಕ’ ನಾಟಕದಲ್ಲಿ ಹರ್ಷವರ್ಧನ್, ರೇಖಾ, ದಿವ್ಯಶ್ರೀ ಕಲಾಸಂಘದ ‘ಶಿವಾಜಿ’ ನಾಟಕದಲ್ಲಿ ಗೋಪಿ, ರವಿ, ದೊಡ್ಡಲೀಲಾ, ವಿ.ಎನ್.ದಾಸ್, ಅಧಿಮೂರ್ತಿ ಪಟ್ಟಾಭಿಷೇಕದಲ್ಲಿ ಮಧುಪ್ರಕಾಶ್ ಅಯ್ಯ, ಶೇಷಾಚಲ, ಗೋಪಾಲರಾವ್, ‘ಗಾನಕಲಾ ವೃಂದ’ದ ‘ಮುದುಕನ ಮದುವೆ’ ನಾಟಕದಲ್ಲಿ ಮುದುಕನ ಪಾತ್ರ ಮಾಡಿದ ಗೌರಮ್ಮ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.
ರಂಗಭೂಮಿ ಉಳಿಸಿ: ರಂಗ ಸಂಭ್ರಮಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಮುಖಂಡ ಎಚ್.ವಿ.ರಾಜೀವ್, ‘ವೃತ್ತಿ ರಂಗಭೂಮಿ ಕಲಾವಿದರು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕಲೆಯನ್ನು ಬಿಡುವುದಿಲ್ಲ. ಹೀಗಾಗಿಯೇ ರಂಗಭೂಮಿ ಉಳಿದಿದೆ. ಅವರಿಗೆ ಪ್ರೋತ್ಸಾಹ ನೀಡಬೇಕಿದೆ’ ಎಂದರು.
‘ಪುರಾಣ, ಮಹಾಕಾವ್ಯ, ಧಾರ್ಮಿಕ ವಿಚಾರಗಳನ್ನು ಸಮಾಜಕ್ಕೆ ದಾಟಿಸಿದ ಕೀರ್ತಿ ಕಲಾವಿದರಿಗೆ ಸಲ್ಲುತ್ತದೆ’ ಎಂದು ಹೇಳಿದರು.
ಅಧ್ಯಕ್ಷ ಎಸ್.ವಸಂತ ಕೃಷ್ಣ, ಕಾರ್ಯದರ್ಶಿ ಎನ್.ಲೀಲಾವತಿ, ಬಿ.ಎ.ಶಾಂತಾದೇವಿ, ಎಚ್.ಪಿ.ನಾಗೇಂದ್ರ ಪ್ರಸಾದ್, ರಾಜೇಶ್ವರಿ ವಸ್ತ್ರಾಲಂಕಾರದ ರಾಮಚಂದ್ರ, ಮುಖಂಡರಾದ ಕಾಪು ಸಿದ್ದವೀರಪ್ಪ, ಕೆ.ಎಂ.ಗಿರಿಜಮ್ಮ, ನಂಜಪ್ಪ, ಚಲನಚಿತ್ರ ನಿರ್ಮಾಪಕ ಶ್ರೀನಿವಾಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.