
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಅಂತರರಾಷ್ಟ್ರೀಯ ವಿಚಾರಗಳ ಮಂಥನ ಮತ್ತು ಸಮಾಗಮ ನಡೆಯಿತು.
ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಅಂತರರಾಷ್ಟ್ರೀಯ ವಿಚಾರಗಳ ಮಂಥನ ಮತ್ತು ಸಮಾಗಮ ನಡೆಯಿತು.
ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಗಳು, ಸಾಕ್ಷ್ಯಚಿತ್ರ ಬಿಡುಗಡೆ ನೆರವೇರಿತು. ದಕ್ಷಿಣ ಭಾರತೀಯ, ಭಾಷಾ ವಿಜ್ಞಾನ ಹಾಗೂ ಜಾನಪದ ಅಧ್ಯಯನವೂ ನಡೆಯಿತು.
ಉದ್ಘಾಟಿಸಿದ ಸಾಹಿತಿ ಪ್ರೊ.ಆರ್.ವಿ.ಎಸ್. ಸುಂದರಂ ಮಾತನಾಡಿ, ‘ಕನ್ನಡ ಅಧ್ಯಯನ ಸಂಸ್ಥೆಯು ಬೇರೆ ಅಧ್ಯಯನ ವಿಭಾಗಗಳಿಗೂ ಸ್ಫೂತಿಯಾಗಿತ್ತು. ಇದನ್ನು ನೋಡಿಕೊಂಡು ಕನ್ನಡ ಅಧ್ಯಯನ ಪೀಠ, ಕನ್ನಡ ಅಧ್ಯಯನ ಕೇಂದ್ರ ಹಾಗೂ ಅನೇಕ ಸಂಸ್ಥೆಗಳು ರೂಪಗೊಂಡವು. ತಿರುಂ ವಿಶ್ವವಿದ್ಯಾಲಯದಲ್ಲಿ ಜಾನಪದ ಕಲೆಗಳ ಎಂಎ ಕೋರ್ಸ್ ಆರಂಭವೂ ಇಲ್ಲಿಂದ ಸ್ಫೂರ್ತಿ ಪಡೆದದ್ದೇ ಆಗಿದೆ’ ಎಂದು ತಿಳಿಸಿದರು.
‘ದೇಶ ಹಾಗೂ ವಿದೇಶದಲ್ಲಿ ಎಷ್ಟೋ ವಿ.ವಿಗಳಿವೆ. ಆದರೆ, ಕನ್ನಡ ಅಧ್ಯಯನ ಸಂಸ್ಥೆಯಂಥದ್ದು ಎಲ್ಲೂ ಇಲ್ಲ.ಇದೊಂದು ವಿಭಾಗವಲ್ಲ, ಕಿರು ವಿಶ್ವವಿದ್ಯಾಲಯ’ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ನಾಗರಾಜು, ‘ಇಂದಿನ ಯುವ ಸಮೂಹಕ್ಕೆ ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ. ಈ ಕಲೆ ಕಲಿಸಿಕೊಡುವ ಕೆಲಸವನ್ನು ಅಧ್ಯಯನ ಸಂಸ್ಥೆಗಳು ಮಾಡಬೇಕು. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವುದನ್ನು ತಿಳಿಸಿಕೊಡಬೇಕು’ ಎಂದು ಸಲಹೆ ನೀಡಿದರು.
‘ಪ್ರಸ್ತುತ ಎಂ.ಎ ಕನ್ನಡ ವಿದ್ಯಾರ್ಥಿಗಳಿಗೆ ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ. ನಾನೇ ಅವರಿಗೆ ಪಿಎಚ್‌ಡಿ ಸೀಟು ಕೊಡಿ ಎಂದು ಹೇಳುವ ಸ್ಥಿತಿ ಇದೆ. ಎಂ.ಎ. ಮಾಡಿದಾಕ್ಷಣ ಕೆಲಸ ಸಿಗುತ್ತದೆ ಎಂಬ ಭಾವನೆ ತಪ್ಪು. ಇದಕ್ಕೆ ಪರ್ಯಾಯವಾಗಿ ವ್ಯವಸ್ಥೆ ಮಾಡಿಕೊಳ್ಳಬೇಕು ಹಾಗೂ ಕೌಶಲ ಬೆಳೆಸಿಕೊಳ್ಳಬೇಕು. ಕುಲಕಸಬು ಮಾಡುವುದರಲ್ಲಿ ಅವಮಾನ ಅಥವಾ ಅಪಾಯವಿಲ್ಲ’ ಎಂದರು.
ಮೈಸೂರು ವಿ.ವಿ. ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕನ್ನಡ ಕುವೆಂಪು ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ನಿವೃತ್ತ ಪ್ರಾಧ್ಯಾಪಕರಾದ ಎಸ್.ಸೋಮಶೇಖರಗೌಡ, ಹಿ.ಶಿ.ರಾಮಚಂದ್ರೇಗೌಡ, ಪ್ರಕಾಶಕ ಓಂಕಾರಪ್ಪ, ಅಧ್ಯಾಪಕ ಪುಟ್ಟನಂಜಯ ಬಿ.ಕೆ. ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.