ADVERTISEMENT

ವಿಶ್ವಮಾನವ ಚಿಂತನೆ ಎಲ್ಲರಿಗೂ ಆದರ್ಶವಾಗಲಿ: ಮಂಜೇಗೌಡ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 15:37 IST
Last Updated 29 ಡಿಸೆಂಬರ್ 2025, 15:37 IST
   

ಮೈಸೂರು: ‘ರಾಷ್ಟ್ರಕವಿ ಕುವೆಂಪು ನೀಡಿದ ವಿಶ್ವಮಾನವ ಚಿಂತನೆ ಎಲ್ಲರಿಗೂ ಆದರ್ಶವಾಗಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ ಆಶಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ಸೋಮವಾರ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಅವರು ಕನ್ನಡ ಪ್ರಸಿದ್ಧ ಕವಿ, ನಾಟಕಕಾರರು ಮತ್ತು ಉತ್ತಮ ಬರಹಗಾರರು. ಬರವಣಿಗೆಯ ಮೂಲಕ ಇಡೀ ಸಮಾಜವನ್ನು ತಿದ್ದಿದರು. ನಮ್ಮ ನಾಡು ಸರ್ವಜನಾಂಗದ ಶಾಂತಿಯ ತೋಟ ಎಂದು ಬರೆದು ಪ್ರತಿಯೊಬ್ಬರೂ ಶಾಂತಿ ನೆಮ್ಮದಿಯಿಂದ ಬದುಕಬೇಕು ಎಂಬುದನ್ನು ಕಲಿಸಿಕೊಟ್ಟವರು. ಓದು, ಬರಹದಿಂದ ಮನುಷ್ಯ ಹೇಗೆ ಉನ್ನತ ಮಟ್ಟಕ್ಕೆ ಹೋಗಬಹುದು ಎಂಬುದನ್ನು ತಿಳಿಸಿಕೊಟ್ಟಂತಹ ಮಹಾನ್ ವ್ಯಕ್ತಿ’ ಎಂದು ಸ್ಮರಿಸಿದರು.

ADVERTISEMENT

‘ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯವಾಗಬಾರದು ನೈತಿಕತೆ, ವ್ಯಕ್ತಿತ್ವದಿಂದ ಮುಖ್ಯವಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದ್ದಾಗಿದೆ. ಯಾರನ್ನೂ ಜಾತಿಯಿಂದ ಗುರುತಿಸದೆ ಅವರ ವ್ಯಕ್ತಿತ್ವದಿಂದ ಕಾಣಬೇಕು. ನಾವೆಲ್ಲರೂ ಒಂದೇ ಎಂದು ಬದುಕಬೇಕು’ ಎಂದರು.

‘ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ ಅಪಾರವಾದುದು. ವಿದ್ಯಾರ್ಥಿಗಳು ಸಾಹಿತಿಗಳ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಾಹಿತಿ ಸಿ.ನಾಗಣ್ಣ ಮಾತನಾಡಿ, ‘ಕುವೆಂಪು ಅವರ ವ್ಯಕ್ತಿತ್ವ ಬಹಳ ದೊಡ್ದದು. ಅವರ ವಿಚಾರಧಾರೆಗಳು ಸರ್ವ ವ್ಯಾಪ್ತಿ ಹಾಗೂ ಸಮಗ್ರವಾದುದು. ಅವರು ಆಧ್ಯಾತ್ಮಿಕ, ಭೌತಿಕ, ಲೌಕಿಕ, ಧಾರ್ಮಿಕ, ಸಾಮಾಜಿಕ, ವೈಜ್ಞಾನಿಕ, ಸಾಂಸಾರಿಕ, ಸನ್ಯಾಸಿಕ, ರಾಷ್ಟ್ರೀಯ ಜಾಗತಿಕ, ಶೈಕ್ಷಣಿಕ, ರಾಜಕೀಯ, ಪ್ರೇಮ, ನೀತಿ, ನಿಷ್ಠೆ, ನಾಡು ನುಡಿಯಂತಹ ನೂರಾರು ವಿಷಯಗಳನ್ನು ನಮಗೆ ಸಾಹಿತ್ಯದ ಮೂಲಕ ನೀಡಿದ್ದಾರೆ. ಅದನ್ನು ಈಗಿನ ಪೀಳಿಗೆಯವರು ಓದಿಕೊಳ್ಳಬೇಕು’ ಎಂದು ಹೇಳಿದರು.

‘ಅವರು ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದವರು. ಪ್ರಕೃತಿಯನ್ನು ಪ್ರಥಮ ಗುರು ಎಂದು ಸ್ವೀಕರಿಸಿದ್ದರು. ಬಾಲ್ಯದಿಂದಲೇ ಅನೇಕ ಪದ್ಯಗಳನ್ನು ಬರೆಯಲು ಪ್ರಾರಂಭಿಸಿದ್ದರು. ದೇಶದಲ್ಲಿ ಶಾಂತಿ– ನೆಮ್ಮದಿ ನೆಲಸಲು ಬೇಕಿರುವ ಮೂಲಭೂತ ತತ್ವಗಳನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಅಂಬೇಡ್ಕರ್‌ ಅವರು ಸಂವಿಧಾನ ನೀಡಿದಂತೆಯೇ ಕುವೆಂಪು ಅವರು ಸಾಹಿತ್ಯದ ಮೂಲಕ ನೀತಿ ಸಂಹಿತೆಯನ್ನು ಕೊಟ್ಟಿದ್ದಾರೆ. ಅದನ್ನು ನಾವು ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ಅಧ್ಯಕ್ಷ ಬಿ.ಎ.ಶಿವಂಕರ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.