ADVERTISEMENT

ಹಿಂದಿಯವರು ಕನ್ನಡ ಕಲಿಯಬಾರದೇಕೆ: ಪ್ರೊ.ಪ್ರದ್ಯುಮ್ನ ಕುಮಾರ್ ಸೇಥಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:59 IST
Last Updated 20 ಡಿಸೆಂಬರ್ 2025, 6:59 IST
ಮೈಸೂರಿನ ಕೆಎಸ್‌ಒಯುನಲ್ಲಿ ಶುಕ್ರವಾರ ನಡೆದ ‘ಭಾಷಾ ಸೌಹಾರ್ದತಾ ದಿನಾಚರಣೆ’ಯನ್ನು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಪ್ರದ್ಯುಮ್ನ ಕುಮಾರ್ ಸೇಥಿ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ 
ಮೈಸೂರಿನ ಕೆಎಸ್‌ಒಯುನಲ್ಲಿ ಶುಕ್ರವಾರ ನಡೆದ ‘ಭಾಷಾ ಸೌಹಾರ್ದತಾ ದಿನಾಚರಣೆ’ಯನ್ನು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಪ್ರದ್ಯುಮ್ನ ಕುಮಾರ್ ಸೇಥಿ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ    

ಮೈಸೂರು: ‘ಹಿಂದಿ ಭಾಷಿಕ ಉತ್ತರ ಭಾರತದ ರಾಜ್ಯಗಳು ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು, ಮಲಯಾಳಂ ಕಲಿಯಬಾರದೇಕೆ’ ಎಂದು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ಪ್ರದ್ಯುಮ್ನ ಕುಮಾರ್ ಸೇಥಿ ಪ್ರಶ್ನಿಸಿದರು. 

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ‘ರಾಷ್ಟ್ರೀಯ ಐಕ್ಯತಾ ಸಪ್ತಾಹ’ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ‘ಭಾಷಾ ಸೌಹಾರ್ದತಾ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ‘ದೇಶದ ಏಕತೆಗಾಗಿ ತ್ರಿಭಾಷಾ ಸೂತ್ರವನ್ನು ಅನುಸರಿಸಬೇಕೆಂದು ದಕ್ಷಿಣದ ರಾಜ್ಯಗಳಿಗೆ ಮಾತ್ರ ಹೇಳಲಾಗುತ್ತದೆ. ಉತ್ತರದ ರಾಜ್ಯಗಳು ಮಾತ್ರ ಹಿಂದಿ– ಇಂಗ್ಲಿಷ್‌ನ ದ್ವಿಭಾಷಾ ಸೂತ್ರವನ್ನು ಅನುಸರಿಸಿವೆ’ ಎಂದರು. 

‘ಉತ್ತರ ಭಾರತದ ರಾಜ್ಯಗಳು ಶಿಕ್ಷಣ ನೀತಿಯಲ್ಲಿ ದೇಶದ ಯಾವುದೇ ಭಾಷೆಯನ್ನು ಕಲಿಯಲು ಅವಕಾಶ ನೀಡಬೇಕು. ಅದರಿಂದ ಪರಸ್ಪರ ಗೌರವ ಭಾವ ಮೂಡುತ್ತದೆ. ಅರ್ಥಪೂರ್ಣ ಭಾಷಾ ಕೊಡುಕೊಳ್ಳುವಿಕೆಯಿಂದ ಸೌಹಾರ್ದ ದೇಶ ನಿರ್ಮಾಣ ಸಾಧ್ಯವಾಗುತ್ತದೆ. ಭಾಷಾ ಅಂತರ ಕಡಿಮೆಗೊಳ್ಳುತ್ತದೆ’ ಎಂದು ಹೇಳಿದರು. 

ADVERTISEMENT

ವೈವಿಧ್ಯ ಕಾಪಾಡಿ

‘ಇಂಗ್ಲಿಷ್‌ ಕಲಿಯುವ ಭರದಲ್ಲಿ ಮಾತೃಭಾಷೆ ಮರೆಯಬಾರದು. ಇಂಗ್ಲಿಷ್‌ ಮಾತನಾಡುವ ಅತಿ ದೊಡ್ಡ ದೇಶವಾಗಿ ಭಾರತ ಹೊರಹೊಮ್ಮಿದೆ. ಇಂಗ್ಲಿಷ್‌ ಜೊತೆಗೆ ಪ್ರಾದೇಶಿಕ ಭಾಷೆಗಳನ್ನು ಉಳಿಸಿಕೊಳ್ಳಬೇಕು. ‌ದೇಶದ ಬಹುತ್ವ, ಭಾಷಾ ವೈವಿಧ್ಯ ಕಾಪಾಡಿಕೊಳ್ಳಬೇಕು’ ಎಂದು ಪ್ರದ್ಯುಮ್ನ ಹೇಳಿದರು.  

‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು 1968, 1986 ಹಾಗೂ 2020ರಲ್ಲಿ ಜಾರಿಗೊಳಿಸಲಾಗಿದ್ದು, ನೂತನ ಶಿಕ್ಷಣ ನೀತಿಯು ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಮಹತ್ವ ನೀಡಿದೆ’ ಎಂದು ತಿಳಿಸಿದರು. 

‘ನನ್ನ ಮಾತೃಭಾಷೆ ಒಡಿಯಾ ಆದರೂ, ಕನ್ನಡಕ್ಕೆ ಸಾಮ್ಯತೆ ಇದೆ. ಒಂದು ಭಾಷೆ ಕಲಿಯುವುದೆಂದರೆ ಜ್ಞಾನ ವಿಸ್ತರಿಸಿಕೊಳ್ಳುವುದಾಗಿದೆ. ಸಂವಹನ ಮಾತ್ರವಲ್ಲದೇ ಇತಿಹಾಸ, ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದಾಗಿದೆ’ ಎಂದು ವ್ಯಾಖ್ಯಾನಿಸಿದರು.

ನಂತರ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಪ್ರೊ.ಕವಿತಾ ರೈ– ಕನ್ನಡ, ಪ್ರೊ.ಎಂ.ರಾಮನಾಥಂ ನಾಯ್ಡು– ತೆಲುಗು, ಪ್ರೊ.ಶ್ರೀಕಾಂತ್‌– ಇಂಗ್ಲಿಷ್, ಆನಂದಸಿಂಹ– ಸಂಸ್ಕೃತ, ಪ್ರೊ.ಮೊಹಮ್ಮದ್‌ ನಸ್ರುಲ್ಲಾ ಖಾನ್– ಉರ್ದು, ಪಿ.ಮಣಿ– ತಮಿಳು– ಕವಿತೆ ವಾಚಿಸಿದರು.  

ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಅವರೆಕಾಡು ವಿಜಯಕುಮಾರ್, ಡಿ.ಎಸ್.ಶಿವಕುಮಾರ್ ಪಾಲ್ಗೊಂಡಿದ್ದರು.  

ದಕ್ಷಿಣ ಭಾರತದ ಬಹುತೇಕ ರಾಜ್ಯಗಳು ತ್ರಿಭಾಷಾ ಸೂತ್ರ ಅನುಸರಿಸಿವೆ. ಇದೇ ನೀತಿಯನ್ನು ಉತ್ತರ ಭಾರತದ ರಾಜ್ಯಗಳು ಅನುಸರಿಸುವ ಜವಾಬ್ದಾರಿ ಪ್ರದರ್ಶಿಸಬೇಕು
– ಪ್ರೊ.ಪ್ರದ್ಯುಮ್ನ ಕುಮಾರ್ ಸೇಥಿ, ಪ್ರಾಂಶುಪಾಲ ಆರ್‌ಐಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.