
ಮೈಸೂರು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಉದ್ಘಾಟಿಸಿದರು
ಪ್ರಜಾವಾಣಿ ಚಿತ್ರ
ಮೈಸೂರು: ‘ವಿಜ್ಞಾನ ಮತ್ತು ತಂತ್ರಜ್ಞಾನವು ಬದುಕಿನ ವೇಗ ಹೆಚ್ಚಿಸಿದೆ. ಕಾನೂನುಗಳು ಅವುಗಳಿಗೆ ಮಿತಿಗಳನ್ನು ಹಾಕಿ, ಎಲ್ಲರೂ ಸಮಾನವಾಗಿ ಬದುಕುವಂತೆ ನೋಡಿಕೊಳ್ಳುತ್ತದೆ’ ಎಂದು ಕುಲಪತಿ ಎನ್.ಕೆ.ಲೋಕನಾಥ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ‘ವಾಯು ಮತ್ತು ಬಾಹ್ಯಾಕಾಶ ಕಾನೂನು’ ಕುರಿತು ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ವಾಯು ಮತ್ತು ಬಾಹ್ಯಾಕಾಶ ಕಾನೂನುಗಳು ವಿಮಾನಯಾನ ಮತ್ತು ಬಾಹ್ಯಾಕಾಶ ಚಟುವಟಿಕೆ ನಿಯಂತ್ರಿಸುವ ಕಾನೂನಾಗಿದೆ. ಸ್ಪೇಸ್ ಸ್ಟೇಷನ್ ನಿರ್ಮಾಣಕ್ಕಾಗಿ ಪ್ರಭಾವಿ ದೇಶಗಳು ಸ್ಪರ್ಧೆ ನಡೆಸುತ್ತಿವೆ. ಅದರ ಮರ್ಮವೇನು. ಕುತೂಹಲಕಾರಿ ವಿಚಾರಗಳು ಯಾವುವು ಎಂಬುದನ್ನು ತಿಳಿಯುವುದು ಅವಶ್ಯ’ ಎಂದರು.
‘ಸಮಾಜ ಬೆಳೆದಂತೆ ಕಾನೂನು ವಿಭಾಗವೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಎಲ್ಲಾ ವಿಭಾಗಗಳಲ್ಲೂ ಕಾನೂನು ಸಲಹೆ ಅಗತ್ಯ. ಹೀಗಾಗಿ ಕಾನೂನು ಶಿಕ್ಷಣ ಪಡೆಯುವವರು, ತರಗತಿಯ ಕಲಿಕೆಯೊಂದಿಗೆ ಬಾಹ್ಯಾಕಾಶ, ವಿಜ್ಞಾನ ಮುಂತಾದ ವಿಚಾರಗಳ ಬಗ್ಗೆಯೂ ಆಸಕ್ತಿಯಿಂದ ಕಲಿಯಬೇಕು. ಅವು ನಿಮಗೆ ಉದ್ಯೋಗವಕಾಶ ಸೃಷ್ಟಿಸಬಲ್ಲದು. ಶಿಕ್ಷಣವು ಪದವಿಗಷ್ಟೇ ಸೀಮಿತವಾಗಿರಬಾರದು, ಜ್ಞಾನ ಸಂಪಾದನೆಯೊಂದಿಗೆ ಕೌಶಲ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಕೌಶಲ, ಬುದ್ಧಿವಂತಿಕೆ ಹಾಗೂ ಮೌಲ್ಯ ಇದ್ದಾಗ ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯ. ಎಲ್ಲವನ್ನೂ ಕಾನೂನು ಸುಧಾರಿಸಲು ಸಾಧ್ಯವಿಲ್ಲ. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಹೀಗಾದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ನಮಗಿರುವ ಮಿತಿಗಳನ್ನು ತಿಳಿದು, ಅನುಸರಿಸಬೇಕು. ಅದನ್ನು ಇನ್ಯಾರಿಂದಲೋ ಹೇಳಿಸಿಕೊಳ್ಳವಂತಾಗಬಾರದು’ ಎಂದು ಹೇಳಿದರು.
ಇಸ್ರೊದ ಭೂ ವೀಕ್ಷಣಾ ಕಾರ್ಯಕ್ರಮ ಯೋಜನಾ ವಿಭಾಗದ ಮಾಜಿ ನಿರ್ದೇಶಕ ಡಾ. ಸುದರ್ಶನ ರಾಮರಾಜು, ಕಾನೂನು ಶಾಲೆಯ ಮುಖ್ಯಸ್ಥ ಪ್ರೊ.ಟಿ.ಆರ್.ಮಾರುತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.