ADVERTISEMENT

ದಬ್ಬಾಳಿಕೆ ಬಿಡಿ: ಸಚಿವ ನಾರಾಯಣಗೌಡ ವರ್ತನೆಗೆ ಸಂಸದ ಪ್ರತಾಪ ಸಿಂಹ ಕಿಡಿ

​ಪ್ರಜಾವಾಣಿ ವಾರ್ತೆ
Published 7 ಮೇ 2021, 8:47 IST
Last Updated 7 ಮೇ 2021, 8:47 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ಚಾಮರಾಜನಗರದಲ್ಲಿ ನಡೆದ ದುರಂತ ಘಟನೆಯನ್ನೇ ಮುಂದಿಟ್ಟುಕೊಂಡು, ನೆರೆ ಜಿಲ್ಲೆಯ ಉಸ್ತುವಾರಿ ಸಚಿವರು ಮೈಸೂರಿಗೆ ಖುದ್ದಾಗಿ ಬಂದು ಆಮ್ಲಜನಕದ ಸಿಲಿಂಡರ್‌ ಕೊಂಡೊಯ್ಯುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಸಂಸದ ಪ್ರತಾಪ ಸಿಂಹ ಶುಕ್ರವಾರ ಇಲ್ಲಿ ಕಿಡಿಕಾರಿದರು.

‘ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಯೇ ಸ್ವತಃ ಪೊಲೀಸ್ ಬೆಂಗಾವಲಿನೊಂದಿಗೆ ಮೈಸೂರಿಗೆ ಬಂದು, ಆಮ್ಲಜನಕದ ಮರು ಭರ್ತಿ (ರೀ ಫಿಲ್ಲಿಂಗ್‌) ಘಟಕದಿಂದ ಸಿಲಿಂಡರ್‌ ಕೊಂಡೊಯ್ಯುವುದು ಸರಿಯೇ?’ ಎಂದು ಸಂಸದರು ಮಾಧ್ಯಮದವರ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

‘ನೆರೆ ಜಿಲ್ಲೆಯ ಉಸ್ತುವಾರಿ ಸಚಿವರು ದಬ್ಬಾಳಿಕೆ ಮಾಡುವುದನ್ನು ತಕ್ಷಣವೇ ಬಿಡಬೇಕು. ಸಚಿವ ಸಂಪುಟ ಸಭೆಯಲ್ಲಿ ತಮ್ಮ ಜಿಲ್ಲೆಗೆ ಎಷ್ಟು ಆಮ್ಲಜನಕ ಬೇಕಿದೆ ಎಂಬ ಕೋಟಾವನ್ನು ಮುಖ್ಯಮಂತ್ರಿಯಿಂದಲೇ ನಿಗದಿ ಮಾಡಿಸಿಕೊಳ್ಳಬೇಕು. ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿ, ತಮ್ಮ ಜಿಲ್ಲೆಯ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಪೊಲೀಸ್‌ ಬೆಂಗಾವಲಿನೊಂದಿಗೆ ಮೈಸೂರಿಗೆ ಬಂದು, ಮರು ಭರ್ತಿ ಘಟಕದಲ್ಲೇ ಠಿಕಾಣಿ ಹೂಡುವುದು ಸರಿಯಲ್ಲ’ ಎಂದು ತಮ್ಮದೇ ಪಕ್ಷದ ಸಚಿವದ್ವಯರ ಕಾರ್ಯವೈಖರಿಯನ್ನು ಸಿಂಹ ಖಂಡಿಸಿದರು.

‘ಮೈಸೂರಿನಲ್ಲೇನು ಆಮ್ಲಜನಕ ಉತ್ಪಾದಿಸುತ್ತಿಲ್ಲ. ಇಲ್ಲಿ ನಡೆದಿರುವುದು ಮರು ಭರ್ತಿಯಷ್ಟೇ. ಈಗಾಗಲೇ ನಮ್ಮಲ್ಲೇ ಆಮ್ಲಜನಕದ ಕೊರತೆ ಸಾಕಷ್ಟು ಕಾಡುತ್ತಿದೆ. ಬೇಕಿದ್ದರೇ ನಿಮ್ಮ ಜಿಲ್ಲೆಯ ಕೋಟಾವನ್ನು ನಿಮ್ಮಲ್ಲಿಗೆ ತರಿಸಿಕೊಂಡು ಮರು ಭರ್ತಿ ಮಾಡಿಕೊಳ್ಳಿ. ಅನಗತ್ಯವಾಗಿ ನಮಗೆ ತೊಂದರೆ ಕೊಡಬೇಡಿ. ನೀವೂ ಇದೇ ರೀತಿ ದಬ್ಬಾಳಿಕೆ ಮುಂದುವರೆಸಿದರೆ, ನಾವೂ ಪ್ರತಿರೋಧಿಸಬೇಕಾಗುತ್ತದೆ. ಆಗ ನಮ್ಮಿಬ್ಬರ ನಡುವೆಯೇ ಬೀದಿ ಕಿತ್ತಾಟ ನಡೆಯುವುದು ಬೇಡ. ಈಗಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳಿ’ ಎಂದು ಸಂಸದರು, ಉಸ್ತುವಾರಿ ಸಚಿವರಿಬ್ಬರಿಗೂ ಎಚ್ಚರಿಕೆ ನೀಡಿದರು.

‘ಮೇ ಅಂತ್ಯದ ವೇಳೆಗೆ ನಮ್ಮಲ್ಲೇ ಸೋಂಕಿತರ ಸಂಖ್ಯೆ ಇನ್ನೂ ಹಲವು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅದಕ್ಕಾಗಿಯೇ ಆಮ್ಲಜನಕ ಸಹಿತ ಹಾಸಿಗೆ ಸಿದ್ಧತೆ ಭರದಿಂದ ನಡೆದಿದೆ. ರಾಜ್ಯ ಸರ್ಕಾರ ಸಹ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಆಮ್ಲಜನಕ ಪೂರೈಕೆಯ ಪ್ರಮಾಣವನ್ನು ನಿಗದಿಪಡಿಸಬೇಕು’ ಎಂದು ಸಂಸದ ಪ್ರತಾಪ ಸಿಂಹ, ಇದೇ ಸಂದರ್ಭ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.