ADVERTISEMENT

ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿಯಾಗಲಿ: ಆರ್‌.ಧ್ರುವನಾರಾಯಣ

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 6:14 IST
Last Updated 15 ಆಗಸ್ಟ್ 2021, 6:14 IST
ನಗರದ ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿಗೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಮಾಲಾರ್ಪಣೆ ಮಾಡಿದರು. ಎಂ.ಕೆ.ಸೋಮಶೇಖರ್‌, ಡಾ.ಬಿ.ಜೆ.ವಿಜಯಕುಮಾರ್‌‌, ಆರ್‌.ಧ್ರುವನಾರಾಯಣ, ಆರ್‌.ಧರ್ಮಸೇನ, ಆರ್‌.ಮೂರ್ತಿ ಇದ್ದರು
ನಗರದ ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿಗೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಮಾಲಾರ್ಪಣೆ ಮಾಡಿದರು. ಎಂ.ಕೆ.ಸೋಮಶೇಖರ್‌, ಡಾ.ಬಿ.ಜೆ.ವಿಜಯಕುಮಾರ್‌‌, ಆರ್‌.ಧ್ರುವನಾರಾಯಣ, ಆರ್‌.ಧರ್ಮಸೇನ, ಆರ್‌.ಮೂರ್ತಿ ಇದ್ದರು   

ಮೈಸೂರು: ‘ದೇಶದಲ್ಲಿ 75 ವರ್ಷಗಳ ಬಳಿಕ ಮತ್ತೊಂದು ಸ್ವಾತಂತ್ರ್ಯದ ಕೂಗು ಕೇಳಿಬರುತ್ತಿದೆ. ಸ್ವಾತಂತ್ರ್ಯ ದಿನವನ್ನು ಆತಂಕದಿಂದ ಆಚರಿಸಬೇಕಾದ ಸ್ಥಿತಿ ಇದೆ. ಇದಕ್ಕಾಗಿ ಕಾಂಗ್ರೆಸ್‌ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿಯಾಗಬೇಕಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅಭಿಪ್ರಾಯಪಟ್ಟರು.

ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿ ಆವರಣದಿಂದ ಕಾಂಗ್ರೆಸ್‌ ಭವನದವರೆಗೆ ಸ್ವಾತಂತ್ರ್ಯ ನಡಿಗೆ’ ಹಾಗೂ ‘ಸ್ವಾತಂತ್ರ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘70 ವರ್ಷಗಳಲ್ಲಿ ಕಾಂಗ್ರೆಸ್‌ ಕಟ್ಟಿದ್ದ ಭಾರತವನ್ನು ಬಿಜೆಪಿಯು 7 ವರ್ಷಗಳಲ್ಲಿ ಕೆಡವಲು ಮುಂದಾಗಿದೆ. ದೇಶದಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ, ಹಿಂದುತ್ವ ಅಜೆಂಡಾದ ಮೇರೆಗೆ ಅಧಿಕಾರಕ್ಕೆ ಬಂದ ಬಿಜೆಪಿ, ಭಾರತವನ್ನು ಅಕ್ಷರಶಃ 50 ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ. 7 ವರ್ಷಗಳಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದೆ. ನಿರುದ್ಯೋಗಿಗಳು ಹಾಗೂ ಕೋಮುವಾದಿಗಳ ಸಂಖ್ಯೆ ಹೆಚ್ಚಾಗಿದೆ. ದೇಶದ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದಿದೆ. ಸಾವಿರಾರು ಕೈಗಾರಿಕೆಗಳಿಗೆ ಬೀಗ ಬಿದ್ದಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸರ್ವ ಧರ್ಮ ಸಹಿಷ್ಣುತೆಗೆ ಧಕ್ಕೆ ಬಂದಿದೆ. ದೀನ–ದಲಿತರು, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಕೊಲೆ ಹೆಚ್ಚಾಗಿದೆ. ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಬರುತ್ತಿದೆ. ಖಾಸಗೀಕರಣ ನೀತಿಯಿಂದ ಸಾಮಾಜಿಕ ನ್ಯಾಯಕ್ಕೆ ಬಹುದೊಡ್ಡ ಕೊಡಲಿಪೆಟ್ಟು ಬಿದ್ದಿದೆ. ಇದರ ವಿರುದ್ಧ ಧ್ವನಿ ಎತ್ತುತ್ತಿರುವ ಹೋರಾಟಗಾರರು, ಸಾಹಿತಿಗಳು, ಚಳವಳಿಗಾರರನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಬಂದಿದೆ. ಲಕ್ಷಾಂತರ ಜನರ ಪ್ರಾಣ ಬಲಿದಾನಗಳಿಂದ ದೊರಕಿದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಪ್ರಜಾಪ್ರಭುತ್ವದ ಮರು ಸ್ಥಾಪನೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್‌ ಮಾತನಾಡಿ, ‘ಬಿಜೆಪಿಯವರು ಸುಳ್ಳು ಹೇಳಿ ಜನರ ಹಾದಿ ತಪ್ಪಿಸುತ್ತಿದ್ದಾರೆ. ದೇಶವನ್ನು ಸುಡುಗಾಡು ಮಾಡಲು ಹೊರಟಿದ್ದಾರೆ. ದೇಶಕ್ಕಾಗಿ ಕಾಂಗ್ರೆಸ್‌ ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ಯುವ ಕಾರ್ಯಕರ್ತರು ಮಾಡಬೇಕು’ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಮುಖಂಡ ವಾಸು ಮಾತನಾಡಿ, ‘ದೇಶದಿಂದ ಬ್ರಿಟಿಷರನ್ನು ತೊಲಗಿಸಲು ಸ್ವಾತಂತ್ರ್ಯ ಸೇನಾನಿಗಳು ಹೋರಾಡಿದಂತೆ, ಬಿಜೆಪಿ ಸರ್ಕಾರವನ್ನು ತೊಲಗಿಸಲು ನಾವು ಹೋರಾಡಬೇಕಿದೆ’ ಎಂದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಮುಖಂಡರಾದ ಎಂ.ಶಿವಣ್ಣ, ಕಳಲೆ ಕೇಶವಮೂರ್ತಿ, ರವಿಶಂಕರ್‌, ಮರಿಗೌಡ, ನಾರಾಯಣ ಇದ್ದರು.

ದಲಿತರನ್ನು ಕೈಬಿಡಬೇಡಿ: ಆರ್‌.ಧರ್ಮಸೇನ

‘ಸ್ವಾತಂತ್ರ್ಯ ಹೋರಾಟಕ್ಕೆ ದಲಿತರು ಬೆಂಬಲ ನೀಡಿದ ಬಳಿಕವೇ ಮತ್ತಷ್ಟು ಶಕ್ತಿಯುತವಾದದ್ದು. ಸ್ವಾತಂತ್ರ್ಯ ಬಂದ ಬಳಿಕ 30–40 ವರ್ಷಗಳವರೆಗೆ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮಗಳಲ್ಲಿ ನಾಯಕರು ಮಾತನಾಡುವಾಗ, ಹರಿಜನ ಗಿರಿಜನರೇ, ದಲಿತ– ಅಲ್ಪಸಂಖ್ಯಾತ ಜನರೇ ಎಂದು ಸಂಬೋಧಿಸುತ್ತಿದ್ದರು. ಆದರೆ, ಈಗ ಆ ಬಳಕೆ ಕಡಿಮೆ ಆಗಿದೆ. ಇದರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತಿದೆ. ರಾಜ್ಯದಲ್ಲಿ ಅಸ್ಪೃಶ್ಯರಿಗೆ ಆಗಿರುವ ಅನ್ಯಾಯದಿಂದಾಗಿ, ಅವರು ಕಾಂಗ್ರೆಸ್‌ ಪಕ್ಷವನ್ನು ಕೈಬಿಡುತ್ತಿದ್ದಾರೆ. ಈ ಬಗ್ಗೆ ಪಕ್ಷ ಚಿಂತನೆ ಮಾಡಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಆರ್‌.ಧರ್ಮಸೇನ ಸಲಹೆ ನೀಡಿದರು.

***

ಸುಡುಗಾಡು ಆಗಿದ್ದ ಭಾರತವನ್ನು ಸ್ವರ್ಗವನ್ನಾಗಿ ಕಾಂಗ್ರೆಸ್‌ ಮಾಡಿದ್ದರೆ, ಸ್ವರ್ಗವನ್ನು ಸುಡುಗಾಡು ಮಾಡಲು ಬಿಜೆಪಿ ಹೊರಟಿದೆ.

ಆರ್‌.ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.