ಮೈಸೂರು: ಅಳಿವಿನ ಅಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳಲ್ಲಿ ಒಂದಾದ ಸಿಂಹಬಾಲದ ಸಿಂಗಳೀಕ ( Loin tailed macaque) ಜೋಡಿಯು ಇಲ್ಲಿನ ಕೂರ್ಗಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಮರಿಯೊಂದಕ್ಕೆ ಜನ್ಮ ನೀಡಿದ್ದು, ಈ ಕುಟುಂಬದ ಸದಸ್ಯರ ಸಂಖ್ಯೆ ಈಗ ನಾಲ್ಕಕ್ಕೆ ಏರಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಿಂಗಳೀಕ ಜೋಡಿಯು ಮರಿಯೊಂದಕ್ಕೆ ಜನ್ಮ ನೀಡಿತ್ತು. ರಾಜ್ಯದಲ್ಲಿ ಮೊದಲ ಬಾರಿಗೆ ಮೃಗಾಲಯದಲ್ಲಿ ಸಿಂಗಳೀಕಗಳ ಸಂತಾನೋತ್ಪತ್ತಿ ಯಶಸ್ವಿಯಾಗಿದ್ದು, ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಅದರ ಮರು ವರ್ಷವೇ ಮತ್ತೊಂದು ಮರಿಯ ಜನನವು ಸಂತಸ ಹೆಚ್ಚಿಸಿದೆ.
‘ಎರಡು ತಿಂಗಳ ಹಿಂದೆಯೇ ಮರಿ ಜನಿಸಿದ್ದು, ಸದ್ಯ ಆರೋಗ್ಯದಿಂದ ಇದೆ. ಅದರ ಆರೈಕೆ ನಡೆದಿದ್ದು, ನಂತರದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡುವ ಕುರಿತು ಪರಿಶೀಲಿಸಲಾಗುವುದು’ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಅನುಷಾ ‘ಪ್ರಜಾವಾಣಿ’ಗೆ ತಿಳಿಸಿದರು.
ತಳಿ ಸಂವರ್ಧನೆ: ದೇಶದಲ್ಲಿ ಅಪಾಯದ ಅಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳನ್ನು ಗುರುತಿಸಿ ಅವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ‘ತಳಿ ಅಭಿವೃದ್ಧಿ ಯೋಜನೆ’ ರೂಪಿಸಿದೆ. ಅದರಂತೆ ಮೈಸೂರು ಮೃಗಾಲಯಕ್ಕೆ ಸಿಂಹಬಾಲದ ಸಿಂಗಳೀಕಗಳ ಅಭಿವೃದ್ಧಿಯ ಜವಾಬ್ದಾರಿ ನೀಡಿದೆ. 2015ರಿಂದ ಇಲ್ಲಿ ಈ ಪ್ರಬೇಧದ ಅಭಿವೃದ್ಧಿಯ ಪ್ರಯತ್ನ ನಡೆದಿತ್ತು. ಕಳೆದ ವರ್ಷವಷ್ಟೇ ಅದು ಯಶಸ್ಸು ಕಂಡಿತ್ತು.
‘ಹೀಗೆ ಮೃಗಾಲಯಗಳಲ್ಲಿ ತಳಿ ಸಂವರ್ಧನೆ ಬಳಿಕ ಅವುಗಳನ್ನು ಮರಳಿ ಕಾಡಿಗೆ ಬಿಡುವ ಯೋಜನೆಯೂ ಇದೆ. ಆದರೆ ಮೈಸೂರಿನಲ್ಲಿ ಈಗ ಸಿಂಗಳೀಕಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಕಾಡಿಗೆ ಬಿಡುವಷ್ಟು ಪ್ರಮಾಣದಲ್ಲಿಲ್ಲ. ಮುಂದಿನ ನಾಲ್ಕೈದು ವರ್ಷ ಇಲ್ಲಿಯೇ ಅವುಗಳ ಲಾಲನೆ–ಪಾಲನೆ ನಡೆಯಲಿದೆ. ನಂತರದಲ್ಲಿ ಅವುಗಳ ಸಂಖ್ಯೆ ಆಧರಿಸಿ ಮೃಗಾಲಯ ಪ್ರಾಧಿಕಾರವು ನಿರ್ಧರಿಸುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.
ಏನಿದರ ವಿಶೇಷ?
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ ಸಿಂಹಬಾಲದ ಸಿಂಗಳೀಕಗಳು ತೀರ ನಾಚಿಕೆಯ ಸ್ವಭಾವದ ಜೀವಿಗಳು. ದೇಶದಲ್ಲಿಯೇ ಇವುಗಳ ಸಂಖ್ಯೆಯು ಸದ್ಯ ಕೇವಲ 2 ಸಾವಿರದಷ್ಟಿದೆ ಎಂದು ಗುರುತಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶರಾವತಿ ಅಘನಾಶಿನಿ ನದಿ ಕಣಿವೆಯಿಂದ ಹಿಡಿದು ಕನ್ಯಾಕುಮಾರಿ ಅಗಸ್ತ್ಯ ಮಲೆಯವರೆಗೆ ಕಾಣಸಿಗುತ್ತವೆ. ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಐಯುಸಿಎನ್) ಈ ಜೀವಿಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಕೆಂಪು ಪಟ್ಟಿಯಲ್ಲಿ ಸೇರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.