
ಮೈಸೂರು: ‘ವಿಮರ್ಶೆ ಉಸಿರಾಟದಷ್ಟೇ ಅನಿವಾರ್ಯ. ಮೌಲ್ಯಮಾಪನ ಮಾಡದೇ ಜಗತ್ತಿನ ಯಾವುದನ್ನೂ ಅರ್ಥಮಾಡಿಕೊಳ್ಳಲು ಆಗದು’ ಎಂದು ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಹೇಳಿದರು.
ನಗರದ ಮಹಾರಾಜ ಕಾಲೇಜಿನಲ್ಲಿ ಕನ್ನಡ ವಿಭಾಗವು ಶುಕ್ರವಾರ ಆಯೋಜಿಸಿದ್ದ ‘ಸಾಹಿತ್ಯ ವಿಮರ್ಶೆಯ ಕೌಶಲಗಳು’ ಕಾರ್ಯಾಗಾರದಲ್ಲಿ ಮಾತನಾಡಿದರು.
‘ಎಲ್ಲ ವ್ಯಕ್ತಿಗಳೂ ವಿಮರ್ಶಕರೇ. ಸರಿ– ತಪ್ಪು, ಒಳಿತು– ಕೆಡಕು ಸೇರಿದಂತೆ ಎಲ್ಲ ವಿಷಯ ವಸ್ತುಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಹೋಲಿಕೆ ಮತ್ತು ಮೌಲ್ಯಮಾಪನ ಅಗತ್ಯ’ ಎಂದರು.
‘ಬದುಕಿನಲ್ಲಿ ವಿಮರ್ಶೆ ಮುಖ್ಯ. ವಿದ್ಯಾರ್ಥಿಗಳಲ್ಲಿ ವಿಮರ್ಶಾ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ಪಠ್ಯದಲ್ಲಿ ವಿಮರ್ಶೆ ಇಡಲಾಗಿದೆ. ಜೀವನದಲ್ಲಿ ಯಾವುದು ಅಸ್ಪಷ್ಟವಾಗಿರುತ್ತದೋ ಅದು ಸಾಹಿತ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ವಿಮರ್ಶಾ ಪ್ರಜ್ಞೆ ಬೆಳೆಸಿಕೊಂಡರೆ ಜೀವನದಲ್ಲೂ ಸ್ಪಷ್ಟತೆ ಸಿಗುತ್ತದೆ’ ಎಂದು ಅಭಿಪ‍್ರಾಯಪಟ್ಟರು.
‘ಸಾಹಿತ್ಯದ ಕರ್ತೃ, ಕೃತಿ, ಓದುಗ ಹಾಗೂ ಸಮಾಜ ಇರಬೇಕು. ಈ ನಾಲ್ಕರಲ್ಲಿ ಒಂದೇ ಒಂದು ಇಲ್ಲದಿದ್ದರೂ ಸಾಹಿತ್ಯ ಇರುವುದಿಲ್ಲ. ಕೃತಿಯ ಲೇಖಕ, ಸಾರ, ಭಾಷೆ, ಕೃತಿಯಲ್ಲಿನ ವಿಷಯ ಮಂಡನೆ ಎಲ್ಲವನ್ನೂ ವಿಮರ್ಶೆಗೆ ಒಳಪಡಿಸಬಹುದು’ ಎಂದರು.
ಪ್ರಾಂಶುಪಾಲ ಪ್ರೊ.ವಿ.ಷಣ್ಮುಗಂ, ‘ಸಾಹಿತ್ಯ ವಿದ್ಯಾರ್ಥಿಗಳಿಗೆ ವಿಮರ್ಶಾ ಕೌಶಲ ಮುಖ್ಯ. ಅದರ ಪರಿಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. ವಿಮರ್ಶಾ ಕೌಶಲ ಅಭಿವೃದ್ಧಿ ಪಡಿಸಿಕೊಂಡರೆ ಯಾವ ಅಭಿವ್ಯಕ್ತಿಯನ್ನೂ ಮಾಡಬಹುದು’ ಎಂದು ಹೇಳಿದರು.
ವಿಭಾಗದ ಮುಖ್ಯಸ್ಥೆ ಪ್ರೊ.ಡಿ.ವಿಜಯಲಕ್ಷ್ಮೀ, ಸಂಚಾಲಕಿ ಪ್ರೊ.ಷಹಸೀನಾ ಬೇಗಂ, ಪ್ರೊ.ಎಸ್. ಕೃಷ್ಣಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.