
ಮೈಸೂರು: ‘ಶ್ರೇಷ್ಠ ಕೃತಿ ಮೂಡಿಬರಲು ರಚನಾಕಾರನ ಹೃದಯದಲ್ಲಿ ಭಾವ, ಭಾಷೆ ಮತ್ತು ಅಭಿವ್ಯಕ್ತಿಯ ಹದ ತುಂಬಾ ಮುಖ್ಯವಾಗುತ್ತದೆ’ ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ ಹೇಳಿದರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ದಕ್ಷ ಪದವಿ ಕಾಲೇಜು ಸಹಯೋಗದಲ್ಲಿ ಇಲ್ಲಿನ ಹೂಟಗಳ್ಳಿಯ ದಕ್ಷ ಕಾಲೇಜು ಸಭಾಂಗಣದಲ್ಲಿ ಗುರುವಾರ ಲೇಖಕ ಮುತ್ತೇಶ್ ಮೆಣಸಿನಕಾಯಿ ಅವರ ‘ಹೃದಯಗರ್ಭದಲ್ಲೊಂದು ಅಗ್ನಿಪಥ’ ಮತ್ತು ‘ಬೆಳದಿಂಗಳ ಕಾಣುವ ಕನಸು’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಹದವರಿತ ಕೃತಿಗಳು ಓದುಗರನ್ನು ಸೆಳೆಯುವಲ್ಲಿ ಸಫಲವಾಗುತ್ತವೆ. ಇಂತಹ ಹದವರಿತ ಬರವಣಿಗೆ ಕಲೆಯನ್ನು ಯುವ ಲೇಖಕರು ರೂಢಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ‘ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಓದಿನಷ್ಟೇ, ಸಾಹಿತ್ಯ ಪುಸ್ತಕಗಳ ಓದು ತುಂಬಾ ಮುಖ್ಯ. ಇದರಿಂದಾಗಿ, ಜ್ಞಾನದ ಜೊತೆಗೆ ಸಾಹಿತ್ಯ ಪುಸ್ತಕಗಳಲ್ಲಿನ ಲೋಕಾನುಭವ ದೊರಕುತ್ತದೆ. ಜ್ಞಾನದ ಪ್ರಸಾರವಾಗುತ್ತದೆ. ಸಾಮಾಜಿಕ ವ್ಯಕ್ತಿತ್ವ ವಿಕಾಸವಾಗುತ್ತದೆ. ಸಾಹಿತ್ಯಾಭಿರುಚಿಯ ಆಸಕ್ತಿಯ ಅಂಕುರವಾಗುತ್ತದೆ’ ಎಂದು ಪ್ರತಿಪಾದಿಸಿದರು.
ದಕ್ಷ ಕಾಲೇಜಿನ ಅಧ್ಯಕ್ಷ ಪಿ. ಜಯಚಂದ್ರರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ. ಗುರುರಾಜ್, ಕೆ.ಆರ್. ಪೇಟೆಯ ಪತ್ರಕರ್ತ ಕೆ.ಆರ್. ನೀಲಕಂಠ, ಕೆಎಸ್‌ಆರ್‌ಟಿಸಿ ಘಟಕ ನಿವೃತ್ತ ವ್ಯವಸ್ಥಾಪಕ ಜಿ.ಬಿ. ಮಂಟೂರು, ಲೇಖಕ ಮುತ್ತೇಶ್ ಮೆಣಸಿನಕಾಯಿ, ಕಾಲೇಜಿನ ಪ್ರಾಂಶುಪಾಲ ಅಭಿಷೇಕ್, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಪದಾಧಿಕಾರಿ ಚಂದ್ರು ಮಂಡ್ಯ, ನಿವೃತ್ತ ಪ್ರಾಂಶುಪಾಲ ಕೆ. ಕಾಳೇಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.