ADVERTISEMENT

ಮೈಸೂರು: ಅಂತರ ಕಾಯ್ದುಕೊಳ್ಳುವಿಕೆ ಪಾಲನೆ ಇಲ್ಲ, ಬ್ಯಾಂಕ್‌ಗಳ ಮುಂದೆ ಜನರ ಸಾಲು

ಡಿ.ಬಿ, ನಾಗರಾಜ
Published 8 ಏಪ್ರಿಲ್ 2020, 19:30 IST
Last Updated 8 ಏಪ್ರಿಲ್ 2020, 19:30 IST
ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್‌ ಮುಂಭಾಗ ಹಣ ಬಿಡಿಸಿಕೊಳ್ಳಲು ಸರತಿಯಲ್ಲಿ ನಿಂತಿದ್ದ ಜನರು
ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್‌ ಮುಂಭಾಗ ಹಣ ಬಿಡಿಸಿಕೊಳ್ಳಲು ಸರತಿಯಲ್ಲಿ ನಿಂತಿದ್ದ ಜನರು   

ಮೈಸೂರು: ಮೈಸೂರು ಸೇರಿದಂತೆ ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿರುವ ಬ್ಯಾಂಕ್‌ಗಳ ಮುಂಭಾಗ ಮಂಗಳವಾರ ಮಹಿಳೆಯರದ್ದೇ ಸರತಿ ಸಾಲು. ಬ್ಯಾಂಕ್‌ ಆರಂಭಗೊಂಡ ಅವಧಿಯಿಂದ ಮುಗಿಯುವ ತನಕವೂ ಜನದಟ್ಟಣೆಯಿತ್ತು.

ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಂಡರೆ, ಬಹುತೇಕ ಕಡೆ ‘ಸಾಮಾಜಿಕ ಅಂತರ’ ಎಂಬುದೇ ಮಾಯವಾಗಿತ್ತು. ಬ್ಯಾಂಕ್‌ ಒಳಭಾಗ ಮಾತ್ರ ಸಾಮಾಜಿಕ ಅಂತರದ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿತ್ತು.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಮಹಿಳೆಯರ ನೆರವಿಗೆ ಧಾವಿಸಲು ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್’ ಪ್ಯಾಕೇಜ್‌ ಘೋಷಿಸಿದೆ. ‘ಪ್ರಧಾನ ಮಂತ್ರಿ ಜನ್‌ಧನ್‌ ಯೋಜನೆಯಡಿ’ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಎಲ್ಲ ಮಹಿಳೆಯರ ಖಾತೆಗೆ ತಲಾ ₹500 ಜಮೆ ಮಾಡುತ್ತಿದೆ.

ADVERTISEMENT

ಮೈಸೂರು ಜಿಲ್ಲೆಯಲ್ಲಿ ಏ.3ರಿಂದ ಮಹಿಳೆಯರ ಜನ್‌ಧನ್‌ ಖಾತೆಗೆ ಹಣ ಜಮೆಯಾಗುತ್ತಿದ್ದು, ಇದು ತಿಳಿದೊಡನೆ ಕಾಸು ಬಿಡಿಸಿಕೊಳ್ಳಲು ಬ್ಯಾಂಕ್‌ಗೆ ಜಮಾಯಿಸುತ್ತಿರುವ ಮಹಿಳೆಯರ ಸಂಖ್ಯೆ ಒಮ್ಮಿಂದೊಮ್ಮೆಲೇ ಹೆಚ್ಚಿದೆ. ಖಾತೆಗೆ ಹಣ ಜಮೆಯಾಗಿದೆ ಎಂಬುದನ್ನು ಪರಿಶೀಲಿಸಲು ಬರುತ್ತಿರುವ ಮಹಿಳೆಯರ ಸಂಖ್ಯೆಯೂ ತುಸು ಹೆಚ್ಚೇ ಇದೆ. ಇದು ಬ್ಯಾಂಕ್‌ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ.

ಮೈಸೂರಿನ ಎನ್‌.ಆರ್.ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಉದಯಗಿರಿ, ಶಕ್ತಿ ನಗರ, ಸಿದ್ಧಾರ್ಥ ಲೇಔಟ್, ಚಾಮರಾಜ ಜೋಡಿ ರಸ್ತೆ, ಹೊರ ವಲಯದ ಹೂಟಗಳ್ಳಿ, ಹಿನಕಲ್ ಸೇರಿದಂತೆ ಗ್ರಾಮೀಣ ಪ್ರದೇಶದ ಬಹುತೇಕ ಬ್ಯಾಂಕ್‌ಗಳ ಮುಂಭಾಗ ಜನಜಾತ್ರೆಯೇ ನೆರೆದಿತ್ತು. ಶುಕ್ರವಾರದಿಂದ (ಏ.10) ಮಂಗಳವಾರದವರೆಗೆ (ಏ.14) ಬ್ಯಾಂಕ್‌ಗೆ ಸೋಮವಾರ ಹೊರತುಪಡಿಸಿ ಸರಣಿ ರಜೆ ಇರುವುದರಿಂದಲೂ ಹಣ ಬಿಡಿಸಿಕೊಳ್ಳಲು ಮುಂದಾದ ಮಹಿಳೆಯರ ಸಂಖ್ಯೆಯೇ ಹೆಚ್ಚಿತ್ತು.

ಬಹುತೇಕ ಮಹಿಳೆಯರು ತಮ್ಮ ಕುಟುಂಬದ ಸದಸ್ಯರೊಟ್ಟಿಗೆ ಬಂದಿದ್ದರೆ, ಹಲವರು ಅಕ್ಕಪಕ್ಕದ ಮನೆಯವರು ಒಟ್ಟೊಟ್ಟಿಗೆ ಬಂದಿದ್ದರು. ಬ್ಯಾಂಕ್‌ ಮುಂಭಾಗವೂ ಗುಂಪಾಗಿಯೇ ನಿಂತಿದ್ದು ಗೋಚರಿಸಿತು. ಗ್ರಾಮೀಣ ಪ್ರದೇಶದಲ್ಲಿ ‘ಸಾಮಾಜಿಕ ಅಂತರ’ದ ಲವಶೇಷವೂ ಗೋಚರಿಸಲಿಲ್ಲ.

70 ಸಾವಿರ ಖಾತೆಗಳು: ‘ಜಿಲ್ಲೆಯ ವ್ಯಾಪ್ತಿಯಲ್ಲಿ 50 ಸಾವಿರದಿಂದ 70 ಸಾವಿರ ಮಹಿಳೆಯರು ಜನ್‌ಧನ್‌ ಖಾತೆ ಹೊಂದಿರುವ ಮಾಹಿತಿಯಿದೆ. ಈ ಎಲ್ಲ ಖಾತೆಗಳಿಗೂ ಏಪ್ರಿಲ್‌, ಮೇ, ಜೂನ್‌ ತಿಂಗಳಲ್ಲಿ ತಲಾ ₹ 500 ಜಮೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರದ ಘೋಷಣೆಯಂತೆ ಮೊದಲ ಕಂತು ಜಮೆಯಾಗುತ್ತಿದೆ. ಏ.9ರೊಳಗೆ ಪ್ರಧಾನಮಂತ್ರಿ ಜನ್‌ಧನ್‌ ಯೋಜನೆಯಡಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿರುವ ಜಿಲ್ಲೆಯ ಎಲ್ಲ ಮಹಿಳೆಯರ ಉಳಿತಾಯ ಖಾತೆಗೆ ಹಣ ಜಮಾವಣೆಗೊಳ್ಳಲಿದೆ. ಯಾರೊಬ್ಬರೂ ಆತಂಕ ಪಡಬೇಕಿಲ್ಲ’ ಎನ್ನುತ್ತಾರೆ ಲೀಡ್‌ ಬ್ಯಾಂಕ್ ಮ್ಯಾನೇಜರ್ ವೆಂಕಟಾಚಲಪತಿ.

‘ಜಿಲ್ಲೆಯಲ್ಲಿರುವ ಬಹುತೇಕ ಬ್ಯಾಂಕ್‌ಗಳು ‘ಗ್ರಾಹಕ ಮಿತ್ರ’ರನ್ನು ಹೊಂದಿವೆ. ಗ್ರಾಹಕ ಸೇವಾ ಕೇಂದ್ರ ಗಳನ್ನು ಆರಂಭಿಸಿವೆ. ಇವುಗಳ ಮೂಲಕ ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುತ್ತಿವೆ. ಜಿಲ್ಲೆಯಾದ್ಯಂತ 266 ಗ್ರಾಹಕ ಮಿತ್ರರಿದ್ದು, ನಿಮ್ಮ ಸೇವೆಗೆ ಸಿದ್ಧರಿದ್ದಾರೆ. ಇವರ ನೆರವನ್ನು ಬಳಸಿಕೊಳ್ಳಿ. ₹500 ಬಿಡಿಸಿಕೊಳ್ಳಲಿಕ್ಕಾಗಿ ದಿನವಿಡೀ ಬ್ಯಾಂಕ್‌ ಮುಂದೆ ಸರತಿಯಲ್ಲಿ ಕಾಯುವ ಅಗತ್ಯವಿಲ್ಲ’ ಎಂದು ಹೇಳಿದರು.

ಹೆಚ್ಚುವರಿ ಕ್ಯಾಶ್‌ ಕೌಂಟರ್
‘ಜನ್‌ಧನ್‌ ಖಾತೆಗೆ ₹500 ಜಮೆಯಾಗುವುದು ಶುರುವಾಗುತ್ತಿದ್ದಂತೆ, ನಾವು ಸಹ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡೆವು. ನಮ್ಮ ಶಾಖೆಯಲ್ಲಿ ಕ್ಯಾಶ್‌ ಕೌಂಟರ್‌ ಸಂಖ್ಯೆ ಹೆಚ್ಚಿಸಿದೆವು. ಬಹುತೇಕ ಸಿಬ್ಬಂದಿ ನಗದು ಕೌಂಟರ್‌ನಲ್ಲೇ ಕೆಲಸ ನಿರ್ವಹಿಸಿದರು’ ಎಂದು ತಿ.ನರಸೀಪುರ ಪಟ್ಟಣದ ಕೆನರಾ ಬ್ಯಾಂಕ್‌ನ ಹಿರಿಯ ಮ್ಯಾನೇಜರ್ ಕೆ.ವಿ.ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ಯಾಂಕ್‌ನೊಳಗೆ ಸಾಮಾಜಿಕ ಅಂತರ ಕಾದುಕೊಂಡೆವು. ಪ್ರತಿ ಗ್ರಾಹಕ ಒಳ ಪ್ರವೇಶಿಸಬೇಕಾದರೆ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ನೋಡಿ ಕೊಂಡೆವು. ಎಲ್ಲರಿಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದೆವು. ಆಗಾಗ್ಗೆ ಪೊಲೀಸರು ವೀಕ್ಷಿಸುತ್ತಿದ್ದರು. ಎಲ್ಲ ಗ್ರಾಹಕರಿಗೂ ಹಣ ನೀಡಿದೆವು’ ಎಂದು ಹೇಳಿದರು.

ಹೆಚ್ಚಿದ ಜನಸಂಚಾರ
ಲಾಕ್‌ಡೌನ್‌ ಘೋಷಣೆಯಾದ ದಿನದಿಂದ ಸೋಮವಾರದವರೆಗೂ (ಏ.6) ವಾಹನ–ಜನ ಸಂಚಾರ ಮೈಸೂರು ನಗರದಲ್ಲಿ ವಿರಳವಾಗಿತ್ತು. ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿದ್ದರು. ಆದರೆ, ಮಂಗಳವಾರ ಮಧ್ಯಾಹ್ನ ನಗರದ ಎಲ್ಲೆಡೆ ವಾಹನಗಳು ಹಾಗೂ ಜನಸಂಚಾರ ಏಕಾಏಕಿ ಹೆಚ್ಚಿತ್ತು.

ಮಾಂಸದ ಅಂಗಡಿಗಳ ಮುಂಭಾಗ ಸಾಮಾಜಿಕ ಅಂತರ ಎಂಬುದು ಕಣ್ಮರೆಯಾಗಿತ್ತು. ಯುವಕರು ರಸ್ತೆಯ ಮೂಲೆ, ಗಲ್ಲಿಗಳಲ್ಲಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಗುಂಪು ಗುಂಪಾಗಿ ಹರಟೆ ಹೊಡೆಯುತ್ತಿದ್ದುದು ಗೋಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.