ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂಕುಶ ಪ್ರಭುತ್ವದ ಸ್ಥಾಪನೆಯನ್ನು ಗುರಿಯಾಗಿಸಿಕೊಂಡಿದ್ದು. ರಾಜ್ಯದ ಜನತೆ ಈ ಬಾರಿ ಬಿಜೆಪಿಯನ್ನು ಸ್ಪಷ್ಟವಾಗಿ ವಿರೋಧಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್ ಮನವಿ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಹಿಂದುತ್ವ ರಾಷ್ಟ್ರದ ಕಲ್ಪನೆಯನ್ನು ತೇಲಿ ಬಿಡುತ್ತಾ ಸಂವಿಧಾನ ಬದಲಾಯಿಸುವ ಗುರಿ ಹೊಂದಿದೆ. ಈ ಉದ್ದೇಶ ಸಾಧನೆಗಾಗಿ ದೇಶದ್ರೋಹಿ ಕಾಯ್ದೆ, ಸಿಬಿಐ ಬಳಕೆ ಹಾಗೂ ಇತ್ತೀಚಿಗೆ ಚುನಾವಣಾ ಬಾಂಡ್ ಮೂಲಕವೂ ಕಾರ್ಯಾಚರಣೆ ನಡೆಸಿದೆ’ ಎಂದು ಆರೋಪಿಸಿದರು.
‘ಎಂಟು ವರ್ಷಗಳ ಹಿಂದೆಯೇ ನರೇಂದ್ರ ಮೋದಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಎನ್ನುತ್ತಾ ವಿರೋಧ ಪಕ್ಷಗಳನ್ನು ಮುಗಿಸುವ ಕೆಲಸ ಮಾಡಿದ್ದರು. ಇಂದು ಕಾಂಗ್ರೆಸ್ ಪಕ್ಷದ ಆದಾಯ ಮೂಲಗಳನ್ನು ನಾಶ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದಾರೆ. ರಾಜ್ಯಗಳಿಗೆ ಹಣಕಾಸು ಸಂದಿಗ್ಧತೆ ಉಂಟು ಮಾಡಿ ಸ್ವಾಯತ್ತತೆ ಹಾಳುಗೆಡವಲಾಗಿದೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿದ್ಧವಿಲ್ಲ. ಈ ಎಲ್ಲ ಅಂಶಗಳನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು’ ಎಂದರು.
‘ಮೋದಿಯ ಎಲ್ಲ ಭರವಸೆಗಳು ವೈಫಲ್ಯಗಳಾಗಿ ಬದಲಾಗಿದ್ದು, ರೈತರ ಆದಾಯ ಸುಧಾರಣೆಯಾಗಿಲ್ಲ, ಜನರ ಆಶ್ರಯಕ್ಕೆ ಮನೆಯಾಗಲಿ, ಉತ್ತಮ ಕುಡಿಯುವ ನೀರಾಗಲಿ, ಯುವಕರಿಗೆ ಉದ್ಯೋಗವಾಗಲಿ ದೊರೆತಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಕಾಂಗ್ರೆಸ್‌ಗೆ ಬೆಂಬಲ ನೀಡುವುದು ದೇಶದ ಉಳಿವಿಗೆ ಅಗತ್ಯ’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.