
ಮೈಸೂರು/ಗುಂಡ್ಲುಪೇಟೆ: ಇಲ್ಲಿನ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಪರಮೇಶ್ ಅವರಿಗೆ ಸೇರಿದ ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದು, ಆ ವೇಳೆ ಮನೆಯಲ್ಲಿ 1.25 ಕೆ.ಜಿ. ಚಿನ್ನ ಹಾಗೂ 6 ಕೆ.ಜಿ. ಬೆಳ್ಳಿ ಸಿಕ್ಕಿದೆ.
ಮೈಸೂರು ಲೋಕಾಯುಕ್ತ ಪೊಲೀಸರು ಅಧಿಕಾರಿಗೆ ಸೇರಿದ ಆಸ್ತಿಗಳ ಮೇಲೆ ಬೆಳಿಗ್ಗೆ 6ಕ್ಕೆ ದಾಳಿ ನಡೆಸಿದರು. ಅಶೋಕಪುರಂನ ಅರಣ್ಯಭವನದ ಕಚೇರಿ, ವಸತಿಗೃಹ, ಹಿನಕಲ್‌ನ ಆದಿತ್ಯ ಲೇಔಟ್‌ನಲ್ಲಿರುವ ಮನೆ, ಬೋಗಾದಿ 2ನೇ ಹಂತದಲ್ಲಿರುವ ಸಹೋದರ ಜಗದೀಶ್ ಮನೆ ಹಾಗೂ ಬೆಂಗಳೂರಿನ ಬನಶಂಕರಿಯಲ್ಲಿರುವ ಅತ್ತೆ ಮನೆ ಮೇಲೂ ದಾಳಿ ನಡೆಯಿತು.
ಲೋಕಾಯುಕ್ತ ಮೈಸೂರು ಎಸ್ಪಿ ಟಿ.ಜೆ.ಉದೇಶ್ ನಿರ್ದೇಶನದಂತೆ ಡಿವೈಎಸ್‌ಪಿ ಅರಗ ಶೈಲೇಂದ್ರ, ಕೊಡಗು ಡಿವೈಎಸ್ಪಿ ದಿನಕರ್ ಶೆಟ್ಟಿ, ಇನ್‌ಸ್ಪೆಕ್ಟರ್ ಗಿರೀಶ್, ಜಯಕುಮಾರ್, ಶಾಂತಿನಾಥ ಹೊನ್ನೂರು, ಬೆಂಗಳೂರು ಲೋಕಾಯುಕ್ತ ಇನ್‌ಸ್ಪೆಕ್ಟರ್ ಆನಂದ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಆರ್‌ಎಫ್‌ಒ ಮನೆಯಲ್ಲಿ ದಾಖಲೆ:
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ಆರ್‌ಎಫ್‌ಒ ನಾಗೇಂದ್ರ ನಾಯಕ್ ಅವರ ನಿವಾಸ, ಕಚೇರಿ, ಫಾರ್ಮ್ ಹೌಸ್ ಸೇರಿದಂತೆ ಐದು ಕಡೆ ಅಧಿಕಾರಿಗಳು ದಾಳಿ ನಡೆಸಿದರು.
ಗುಂಡ್ಲುಪೇಟೆ ಪಟ್ಟಣದ ದರ್ಶನ್ ಲೇಔಟ್‌ನಲ್ಲಿರುವ ಅಧಿಕಾರಿಯ ನಿವಾಸ ಹಾಗೂ ಮಾವನ ಮನೆ, ಕುಂದುಕೆರೆ ವಲಯ ಅರಣ್ಯಾಧಿಕಾರಿ ಕಚೇರಿ, ವಸತಿ ಗೃಹ ಹಾಗೂ ಲಕ್ಕೂರು ಬಳಿಯ ಫಾರ್ಮ್‌ಹೌಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು.
ದಾಳಿ ವೇಳೆ 580 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ, 2 ಮನೆ, ಒಂದು ನಿವೇಶನ, ಒಂದು ಫಾರ್ಮ್‌ಹೌಸ್‌ಗೆ ಸೇರಿದ ಆಸ್ತಿಯ ದಾಖಲೆಗಳು ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.