ADVERTISEMENT

8 ಸಾವಿರ ಹಾವು ರಕ್ಷಿಸಿದ ಮಧು: ರಾಜ್ಯದ ಮೊದಲ ಉರಗ ಸಂರಕ್ಷಕಿ ಎಂಬ ಹೆಸರು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 0:07 IST
Last Updated 12 ಮಾರ್ಚ್ 2024, 0:07 IST
ಸಂರಕ್ಷಿಸಿದ ಹಾವಿನೊಂದಿಗೆ ಮಧು
ಸಂರಕ್ಷಿಸಿದ ಹಾವಿನೊಂದಿಗೆ ಮಧು   

ಮೈಸೂರು: ಬಾಹ್ಯಾಕಾಶ, ಸೇನೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಛಾಪು ಮೂಡಿಸಿದ್ದಾರೆ. ಇದೀಗ ಪುರುಷರೇ ಹೆಚ್ಚಿರುವ ಉರಗ ಸಂರಕ್ಷಣೆ ಕ್ಷೇತ್ರದಲ್ಲಿ ಮೈಸೂರಿನ ಮಧು ಗಮನ ಸೆಳೆದಿದ್ದಾರೆ. ಅವರು 8 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಸೈ ಎನಿಸಿಕೊಂಡಿದ್ದಾರೆ.

ಬೆಳಗಾವಿ ಮೂಲದ 36 ವರ್ಷದ ವಿದ್ಯಾ ವಿಜಯ್‌ ಟಕ್ಕೇಕರ್‌, ‘ಮಧು’ ಎಂದೇ ಮೈಸೂರಿಗರಿಗೆ ಚಿರಪರಿಚಿತ. 17 ವರ್ಷಗಳಿಂದ ಉರಗ ಸಂರಕ್ಷಣೆಯಲ್ಲಿರುವ ಅವರು, 3 ವರ್ಷದಿಂದ ಮೈಸೂರಿನಲ್ಲಿ ನೆಲೆಸಿದ್ದಾರೆ.

‘ವಿಷಪೂರಿತ ಹಾಗೂ ವಿಷ ರಹಿತ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವೆ. ಯಾರೇ ಕರೆ ಮಾಡಿದರೂ ಸಮಯ ನೋಡದೆ ಸ್ಪಂದಿಸುವೆ. ಹೀಗಾಗಿ ಜನರಿಗೂ ನನ್ನ ಮೇಲೆ ವಿಶ್ವಾಸವಿದೆ. ಒಂದು ಬಾರಿಯೂ ಹಾವಿನ ಕಡಿತಕ್ಕೆ ಒಳಗಾಗಿಲ್ಲ’ ಎಂದು ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬೇಸಿಗೆಯಲ್ಲಿ, ಕೇರೆ ಹಾಗೂ ನಾಗರ ಹಾವುಗಳ ಮಿಲನ ಕಾಲದಲ್ಲಿ ಹೆಚ್ಚು ಕರೆಗಳು ಬಂದಿವೆ. ವಿವಿಧ ಪ್ರಭೇದದ ಹಾವುಗಳ ಮಿಲನ ಕಾಲ ಬೇರೆ ಬೇರೆಯಾಗಿರುತ್ತದೆ. ಆದರೆ, ಅಕ್ಟೋಬರ್‌– ಡಿಸೆಂಬರ್‌ ಅವಧಿಯಲ್ಲಿ ಹೆಚ್ಚು ಕರೆಗಳು ಬಂದಿವೆ’ ಎಂದರು.

‘ಭೂಮಿಯ ಮೇಲಿನ ಪ್ರತಿ ಜೀವಿಗೂ ಜೀವಿಸುವ ಹಕ್ಕಿದೆ’ ಎನ್ನುವ ಅವರು, ಬೆಳಗಾವಿಯಲ್ಲಿ ಹಾವುಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದ್ದರು. ನೆರೆಯ ಮಹಾರಾಷ್ಟ್ರದಲ್ಲೂ ಸೇವಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

‘ಕರೆ ಬಂದ ಕ್ಷಣವೇ ಬೈಕ್‌ನಲ್ಲಿ ತೆರಳಿ ಹಾವುಗಳನ್ನು ರಕ್ಷಿಸುತ್ತಿದ್ದೇನೆ. ಹಣ ಕೇಳುವುದಿಲ್ಲ. ಅವರಾಗೇ ನೀಡಿದರೆ ನಿರಾಕರಿಸುವುದಿಲ್ಲ. ಹಣಕ್ಕೆ ಒತ್ತಾಯಿಸಿದರೆ ಜನ ಹಾವುಗಳನ್ನು ಕೊಲ್ಲಲು ಆರಂಭಿಸುತ್ತಾರಲ್ಲವೇ’ ಎಂದು ಹೇಳಿದರು.

‘ಬೆಳಗಾವಿಯಲ್ಲಿದ್ದಾಗ ನಿತ್ಯ 25 ಕರೆಗಳು ಬರುತ್ತಿದ್ದವು. ಒಂದೇ ದಿನ 15 ಹಾವುಗಳನ್ನು ರಕ್ಷಿಸಿದ್ದೆ. ದಿನಕ್ಕೆ ಒಂದಾದರೂ ಹಾವನ್ನು ರಕ್ಷಿಸದಿದ್ದರೆ ಅಂದು ನಿದ್ದೆಯೇ ಬರುವುದಿಲ್ಲ’ ಎಂದರು.

ಮೈಸೂರಿನ ಶ್ರೀರಾಂಪುರದಲ್ಲಿ ಕೆಲ ವರ್ಷಗಳ ಹಿಂದೆ ಭಾರಿ ಮಳೆ ನಡುವೆ ಹಾಗೂ ಬನ್ನಿಮಂಟಪದಲ್ಲಿ ಬೈಕ್‌ನೊಳಗೆ ಸೇರಿಕೊಂಡಿದ್ದ ಹಾವನ್ನು ರಕ್ಷಿಸಿದ್ದನ್ನು ಈಗಲೂ ಸ್ಮರಿಸುವ ಅವರು, ಬೆಳಗಾವಿಯಲ್ಲಿ  ತಾತ, ಪರಿಸರವಾದಿ ಬಾಬೂರಾವ್‌ ಟಕೇಕ್ಕರ್‌ ಅವರೊಂದಿಗೆ ಹಾವುಗಳನ್ನು ರಕ್ಷಿಸಲು ಮನೆಗಳ ಚಾವಣಿ ಹಾಗೂ ಮರ ಹತ್ತುತ್ತಿದ್ದ ದಿನಗಳ ಕುರಿತು ಹೇಳುವುದನ್ನು ಮರೆಯಲಿಲ್ಲ.

ತಮ್ಮ ಇಬ್ಬರು ಮಕ್ಕಳಿಗೂ ಹಾವುಗಳ ಸಂರಕ್ಷಣೆಯ ಕುರಿತು ಅವರು ಕಲಿಸುತ್ತಿರುವುದು ಇನ್ನೊಂದು ವಿಶೇಷ.

ರಕ್ಷಣೆಗೆ 24 ಗಂಟೆಯೂ ಸಿದ್ಧ ಒಂದೇ 15 ಹಾವುಗಳ ಸಂರಕ್ಷಣೆ ಒಂದೂ ಬಾರಿಯೂ ಹಾವು ಕಚ್ಚಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.