ಎಚ್.ಡಿ.ಕೋಟೆ ಪಟ್ಟಣದ ವಿಶ್ವನಾಥಯ್ಯ ಕಾಲೊನಿಯಲ್ಲಿ ನಡೆದ ಮಡಿವಾಳ ಮಾಚೀದೇವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಿದರು
ಎಚ್.ಡಿ.ಕೋಟೆ: ‘ಮಡಿವಾಳ ಸಮುದಾಯ ಭವನ ನಿರ್ಮಾಣಕ್ಕೆ ₹80 ಲಕ್ಷ ಬೆಲೆಯ 8 ಗುಂಟೆ ಜಾಗವನ್ನು ಅಧಿಕೃತವಾಗಿ ನೀಡಲಾಗುತ್ತಿದೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ವಿಶ್ವನಾಥಯ್ಯ ಕಾಲೊನಿಯಲ್ಲಿ ಶನಿವಾರ ನಡೆದ ಮಡಿವಾಳ ಮಾಚೀದೇವರ ಜಯಂತ್ಯುತ್ಸವ ಮತ್ತು ಭೂಮಿಪೂಜೆ, ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಮಡಿವಾಳ ಮಾಚಿದೇವ ಸಮುದಾಯ ಭವನವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುತ್ತೇನೆ, ನನ್ನ ತಂದೆ ಸಣ್ಣ ಸಮುದಾಯಗಳ ಮೇಲೆ ವಿಶೇಷ ಕಾಳಜಿ ಇಟ್ಟಿದ್ದರು. ನಾನೂ ಅದನ್ನೇ ಮುಂದುವರಿಸುತ್ತೇನೆ. ಭವನಕ್ಕೆ ವಿಶೇಷ ಅನುದಾನ ನೀಡಿ, ಈ ಸಮುದಾಯವನ್ನು ರಾಜಕೀಯವಾಗಿ ಮುಂದೆ ತರುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದರು.
‘ಸಮುದಾಯ ಭವನ ನಿರ್ಮಾಣಕ್ಕೆ ₹50 ಲಕ್ಷ ಮಂಜೂರಾಗಿದ್ದು, ಪ್ರಸ್ತುತ ₹25 ಲಕ್ಷ ಬಿಡುಗಡೆ ಮಾಡಲಾಗಿದೆ. ಸಮಾಜದ ಬಂಧುಗಳೆಲ್ಲಾ ಒಂದೆಡೆ ಸೇರಿ ಸಂಘಟನೆಯಾಗುವ ದೃಷ್ಟಿಯಿಂದ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
‘12 ಶತಮಾನದಲ್ಲಿ ಬಸವಣ್ಣನವರ ಅನುಯಾಯಿಗಳಾಗಿ ಮಾಚೀದೇವರು ಹಲವು ವಚನಗಳನ್ನು ರಚಿಸಿದ್ದು, ಅಸಮಾನತೆಯ ವಿರುದ್ಧ ಹೋರಾಡಿದ್ದರು. ಶ್ರೀಮಂತ, ಬಡವ, ಬಲ್ಲಿದ ಎಂಬ ಭೇದ-ಭಾವಗಳಿಲ್ಲದ ರೀತಿ ಬಾಳಿದವರು’ ಎಂದರು.
ತಹಶೀಲ್ದಾರ್ ಶ್ರೀನಿವಾಸ್, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಸದಸ್ಯರಾದ ರಾಜು ವಿಶ್ವಕರ್ಮ, ಮಧು, ಶಾಂತಮ್ಮ, ಸುಹಾಸಿನಿ ದಿನೇಶ್, ಮುಖಂಡರಾದ ಕೆ.ಈರೇಗೌಡ, ಎಚ್.ಸಿ.ಮಂಜುನಾಥ್, ಮಡಿವಾಳರ ಸಂಘದ ಅಧ್ಯಕ್ಷ ಮಹೇಶ್, ಧರಣೇಶ್, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ಮಡಿವಾಳ, ಶಿವಪ್ಪ ಶೆಟ್ಟಿ, ಕೆಂಪು ಶೆಟ್ಟಿ, ರಮೇಶ್ ಕೋಟೆ, ನಾಗರಾಜು, ಕಾಳಶೆಟ್ಟಿ, ಸೌಮ್ಯಾ, ತಿಮ್ಮಶೆಟ್ಟಿ, ಮಲ್ಲೇಶ್, ಜವರಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.