ADVERTISEMENT

ಮೈಸೂರು | ಇಎಂಆರ್‌ಸಿ: ಹಂಗಾಮಿಗಳಿಗೇ ಕಾರ್ಯ‘ಭಾರ’!

13 ವರ್ಷದಿಂದಲೂ ನಿರ್ದೇಶಕ ಹುದ್ದೆಗೆ ಆಗದ ನೇಮಕ

ಮೋಹನ್ ಕುಮಾರ ಸಿ.
Published 31 ಜನವರಿ 2025, 7:37 IST
Last Updated 31 ಜನವರಿ 2025, 7:37 IST
ಮಾನಸಗಂಗೋತ್ರಿಯಲ್ಲಿರುವ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ
ಮಾನಸಗಂಗೋತ್ರಿಯಲ್ಲಿರುವ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ   

ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿರುವ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರಕ್ಕೆ (ಇಎಂಆರ್‌ಸಿ) 13 ವರ್ಷದಿಂದಲೂ ಪೂರ್ಣಾವಧಿಯ ನಿರ್ದೇಶಕರಾಗಿ ಯಾರನ್ನೂ ನೇಮಿಸಿಲ್ಲ. ಇತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರನ್ನೇ ಹಂಗಾಮಿ ನಿರ್ದೇಶಕರಾಗಿ ಮೈಸೂರು ವಿಶ್ವವಿದ್ಯಾಲಯ ನಿಯೋಜಿಸುತ್ತಿದೆ. ಅವರ ಮೇಲೆ ಹೆಚ್ಚುವರಿ ಕಾರ್ಯಭಾರ ಬೀಳುತ್ತಿದೆ. 

ವಿಶ್ವವಿದ್ಯಾಲಯದ ಧನಸಹಾಯ ಆಯೋಗವು(ಯುಜಿಸಿ) ದೃಶ್ಯ ಮಾಧ್ಯಮದ ಮೂಲಕ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕೇಂದ್ರವನ್ನು 1995ರಲ್ಲಿ ಸ್ಥಾಪಿಸಿತ್ತು. ಆಗ ಧ್ವನಿ ಮತ್ತು ದೃಶ್ಯ ಸಂಶೋಧನಾ ಕೇಂದ್ರ (ಎವಿಆರ್‌ಸಿ) ಎಂದು ಕರೆಯಲಾಗುತ್ತಿತ್ತು. 2004ರಲ್ಲಿ ಇಎಂಆರ್‌ಸಿ ಮರು ನಾಮಕರಣ ಮಾಡಲಾಗಿದೆ. ಇ–ಪರಿಕರ ಹಾಗೂ ಆನ್‌ಲೈನ್ ಕಲಿಕಾ ಸಂಪನ್ಮೂಲವನ್ನು ಕೇಂದ್ರವು ಸೃಷ್ಟಿಸುತ್ತಿದೆ.

ಬಹುದೊಡ್ಡ ಜವಾಬ್ದಾರಿ ಇರುವ ಕೇಂದ್ರದ ಹುದ್ದೆಗೆ ಮೈಸೂರು ವಿಶ್ವವಿದ್ಯಾಲಯವು ಈ ಹಿಂದೆ ವಾಣಿಜ್ಯ ವಿಭಾಗದ ಪ್ರೊ.ರಾಜಶೇಖರ್, ಮಾನವ ವಿಜ್ಞಾನದ ಪ್ರೊ.ಎಂ.ಆರ್‌.ಗಂಗಾಧರ್, ಕನ್ನಡ ವಿಭಾಗದ ಪ್ರೊ.ಸುಚೇತನ ಸ್ವರೂಪ್‌ ಅವರನ್ನು ಪ್ರಭಾರ ನಿರ್ದೇಶಕರಾಗಿ ನಿಯೋಜಿಸಿತ್ತು.

ADVERTISEMENT

ನವದೆಹಲಿಯ ಶೈಕ್ಷಣಿಕ ಸಂವಹನ ಒಕ್ಕೂಟದ (ಸಿಇಸಿ) ನಿರ್ದೇಶಕ ಜಗತ್‌ಭೂಷಣ್ ನಡ್ಡಾ ಅವರು ಜುಲೈ 2,  2019ರಲ್ಲೇ ಶೈಕ್ಷಣಿಕ ಕಾರ್ಯಗಳು ಸುಗಮವಾಗಿ ನಡೆಯಲು ಪೂರ್ಣಾವಧಿಯ ನಿರ್ದೇಶಕರನ್ನು ನಿಯೋಜಿಸುವಂತೆ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು. ನೇಮಕ ಪ್ರಕ್ರಿಯೆ ಮುಗಿಯುವವರೆಗೂ ಪ್ರಭಾರ ನಿರ್ದೇಶಕರ ಹುದ್ದೆಗೆ ಮಾಧ್ಯಮ ತಜ್ಞ ಪ್ರಾಧ್ಯಾಪಕರನ್ನು ಒಂದು ವರ್ಷದ ಅವಧಿಗೆ ನಿಯೋಜಿಸಬೇಕು ಎಂದಿದ್ದರು.

ವಿಷಯ ತಜ್ಞ ಪ್ರಾಧ್ಯಾಪಕರು ಇಲ್ಲದಿದ್ದರೆ, ಮಾಧ್ಯಮ ಕೇಂದ್ರದ ಹಿರಿಯ ಸಿಬ್ಬಂದಿ (ಪ್ರೊಡ್ಯೂಸರ್) ಅನ್ನು ವರ್ಷದ ಅವಧಿಗೆ ಮಾತ್ರ ಪ್ರಭಾರ ನಿರ್ದೇಶಕರನ್ನು ನಿಯೋಜಿಸಬಹುದೆಂದೂ ಸಿಇಸಿ ತಿಳಿಸಿತ್ತು. ಆದರೆ, ಬೇರೆ ವಿಭಾಗದ ಪ್ರಾಧ್ಯಾಪಕರನ್ನೇ ಹಂಗಾಮಿ ನಿರ್ದೇಶಕರಾಗಿ ಆಯ್ಕೆ ಮಾಡಲಾಗುತ್ತಿದೆ.

‘5 ವರ್ಷ ಅವಧಿಯ ಪೂರ್ಣಾವಧಿ ನಿರ್ದೇಶಕರ ನೇಮಕಾತಿ ಪ್ರಕ್ರಿಯೆಗೆ ವಿಶ್ವವಿದ್ಯಾಲಯವು ಅಧಿಸೂಚನೆ ಹೊರಡಿಸುತ್ತಿಲ್ಲ. ಕೇಂದ್ರದ ಪ್ರೊಡ್ಯೂಸರ್‌ಗಳ ಸೇವಾ ಜೇಷ್ಠತೆ ಪರಿಗಣಿಸುತ್ತಿಲ್ಲ. ಅವರ ಕಾರ್ಯಾನುಭವಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ. 18 ಸಿಬ್ಬಂದಿ ಇದ್ದು, ದಶಕಗಳ ಹಿಂದೆ ಸೈಯದ್‌ ಖಲೀಂ ಅವರನ್ನು ಮಾತ್ರ ನಿಯೋಜಿಸಿತ್ತಷ್ಟೇ’  ಎಂದು ಹೆಸರು ಪ್ರಕಟವಾಗಲು ಬಯಸದ ಕೇಂದ್ರದ ಸಿಬ್ಬಂದಿಯೊಬ್ಬರು ದೂರಿದರು.

‘ಪ್ರಭಾರ ನಿರ್ದೇಶಕಿಯಾಗಿ ಪತ್ರಿಕೋದ್ಯಮ ಅಧ್ಯಯನ ವಿಭಾಗದ ಪ್ರೊ.ಎಂ.ಎಸ್‌.ಸಪ್ನಾ ಅವರನ್ನು ಫೆ.2, 2024ರಂದು ವಿಶ್ವವಿದ್ಯಾಲಯ ನಿಯೋಜಿಸಿತ್ತು. ಇಎಂಆರ್‌ಸಿ ಹಿರಿಯ ಪ್ರೊಡ್ಯೂಸರ್‌ಗಳನ್ನು ಬಿಟ್ಟು ಇತರ ವಿಭಾಗದವರನ್ನು ನಿಯೋಜಿಸುತ್ತಿರುವುದರಿಂದ ಕೇಂದ್ರದಲ್ಲಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಿದೆ. ಅವನ್ನು ಬಗೆಹರಿಸಲು ಕೇಂದ್ರದ ಸಿಬ್ಬಂದಿಯನ್ನೇ ಪರಿಗಣಿಸಬೇಕು’ ಎಂದು ಅವರ ಆಗ್ರಹ.

ವಿಷಯ ತಜ್ಞರಲ್ಲದವರಿಗೂ ಮಣೆ ಕೇಂದ್ರದಲ್ಲಿ ಸಮಸ್ಯೆಯ ಸರಮಾಲೆ ಹಿರಿಯ ಪ್ರೊಡ್ಯೂಸರ್‌ ಪರಿಗಣನೆಗೆ ಒತ್ತಾಯ
‘ನೇಮಕಕ್ಕೆ ಸಭೆಯಲ್ಲಿ ತೀರ್ಮಾನ’
‘ಕೇಂದ್ರದ ನಿರ್ದೇಶಕ ಹುದ್ದೆಗೆ ನೇಮಕ ಮಾಡಲು ವ್ಯವಸ್ಥಾಪನ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದು ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ವಿಷಯ ತಜ್ಞರನ್ನೇ ಹಿಂದೆ ಪ್ರಭಾರ ನಿರ್ದೇಶಕರಾಗಿ ನಿಯೋಜಿಸಲಾಗಿತ್ತು. ಅವರ ಅವಧಿ ಮುಗಿಯುತ್ತಿದ್ದಂತೆ ಐದು ವರ್ಷದ ಅವಧಿಗೆ ನಿರ್ದೇಶಕರನ್ನು ಆಯ್ಕೆ ಮಾಡಲು ಸಭೆಯು ನಿರ್ಣಯ ತೆಗೆದುಕೊಳ್ಳಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.