ADVERTISEMENT

ಗೂಳಿಗೌಡರನ್ನು ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯಿಂದ ತೆಗೆದ ಸಚಿವ ಎಸ್‌ಟಿಎಸ್‌

ಮಂಡ್ಯದಿಂದ ವಿಧಾನ ಪರಿಷತ್ ಚುನಾವಣೆಗೆ ಗೂಳಿಗೌಡ ಸ್ಪರ್ಧೆ ಸಂಭವ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 9:41 IST
Last Updated 20 ನವೆಂಬರ್ 2021, 9:41 IST
ದಿನೇಶ್‌ ಗೂಳಿಗೌಡ
ದಿನೇಶ್‌ ಗೂಳಿಗೌಡ   

ಮೈಸೂರು: ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ದಿನೇಶ್‌ ಗೂಳಿಗೌಡ ಅವರನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಡ್ಯದಲ್ಲಿ ಸ್ಪರ್ಧೆ ಮಾಡುವಂತೆ ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಹೇಳಿದ್ದಾರೆ ಎಂಬುದಾಗಿ ದಿನೇಶ್‌ ನನಗೆ ನಾಲ್ಕೈ ದಿನಗಳ ಹಿಂದೆ ಮಾಹಿತಿ ನೀಡಿದರು. ವಿಷಯ ಗೊತ್ತಾಗುತ್ತಿದ್ದಂತೆ ವಿಶೇಷ ಕರ್ತವ್ಯಾಧಿಕಾರಿ ಹುದ್ದೆಯಿಂದ ತೆಗೆದು ಹಾಕಲು ಶಿಫಾರಸು ಮಾಡಿದೆ. ಈ ವಿಚಾರವನ್ನು ಪಕ್ಷದ ವರಿಷ್ಠರಿಗೂ ತಿಳಿಸಿದ್ದೇನೆ’ ಎಂದರು.

ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ದಿನೇಶ್‌ ಪ್ರಯತ್ನ ನಡೆಸಿರುವ ವಿಚಾರ ತಮಗೆ ಗೊತ್ತಿಲ್ಲವೇ ಎಂಬ ಪ್ರಶ್ನೆಗೆ, ’ಕಾಂಗ್ರೆಸ್ ಸೇರುವುದು, ಚುನಾವಣೆಗೆ ಸ್ಪರ್ಧಿಸುವುದು, ರಾಜಕೀಯ ಮಾಡುವುದು ಅವರ ವೈಯಕ್ತಿಕ ವಿಚಾರ‌’ ಎಂದು ನುಡಿದರು.

ADVERTISEMENT

ವಿಧಾನ ಪರಿಷತ್‌ನ ಮಂಡ್ಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ದಿನೇಶ್‌ ಗೂಳಿಗೌಡ , ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಂಭವವಿದೆ.

ಪ್ರಚಾರ ಆರಂಭಿಸಿದ್ದೇನೆ: ‘ಕಾಂಗ್ರೆಸ್‌ ಟಿಕೆಟ್‌ ಸಿಗುವ ಭರವಸೆ ಇದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಅವರ ಸೂಚನೆಯಂತೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದೇನೆ. ಶನಿವಾರ ನಾಗಮಂಗಲದಲ್ಲಿ ಮತಯಾಚಿಸಿದ್ದೇನೆ’ ಎಂದು ದಿನೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‌‘ಹಲವು ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ಕೆಲಸ ಮಾಡಿದ್ದು, ಕೆಪಿಸಿಸಿ ಮಾಧ್ಯಮ ತಂಡದಲ್ಲಿದ್ದೆ. ಬಿಜೆಪಿ ಸರ್ಕಾರ ಬಂದು, ಸೋಮಶೇಖರ್‌ ಸಚಿವರಾದಾಗಿನಿಂದ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದೆ’ ಎಂದರು.ದಿನೇಶ್‌ ಬಿಜೆಪಿ ಮುಖಂಡ ಎಸ್‌.ಎಂ. ಕೃಷ್ಣ ಅವರಿಗೂ ಆಪ್ತರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಸಂಪರ್ಕಿಸಿದ್ದ ಕೃಷ್ಣ, ಆಪ್ತನಿಗೆ ಟಿಕೆಟ್‌ ನೀಡುವಂತೆ ಪ್ರಭಾವ ಬೀರಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.