ಮೈಸೂರು: ‘ರಾಜ್‌ಕುಮಾರ್ ಸಿನಿಮಾಗಳು ಜನರಿಗೆ ಇತಿಹಾಸ, ಪುರಾಣ, ವಾಸ್ತವದ ವಿಚಾರಗಳನ್ನು ತಿಳಿಸಿದವು. ಆದರೆ ಸರ್ಕಾರ, ವಿಶ್ವವಿದ್ಯಾಲಯಗಳು ಅವರನ್ನು ಜನರ ಬಳಿ ತಲುಪಿಸುವ ಕಾರ್ಯ ಮಾಡಲಿಲ್ಲ’ ಎಂದು ನಟ ಮಂಡ್ಯ ರಮೇಶ್ ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಡಾ.ರಾಜಕುಮಾರ್ ಅಧ್ಯಯನ ಪೀಠವು ಶೇಷಾದ್ರಿಪುರಂ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್‌ಕುಮಾರ್ ಕುರಿತ ಸಾಕ್ಷ್ಯಚಿತ್ರ ಹಾಗೂ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
‘ಸರ್ಕಾರ ಆರಂಭಿಸುವ ಅಕಾಡೆಮಿಗಳ ಆಶಯ ಯುವ ಸಮೂಹವನ್ನು ತಲುಪಬೇಕು. ಪ್ರಸ್ತುತ ಯುವ ಜನತೆ ರಾಜ್‌ಕುಮಾರ್ ಅವರನ್ನು ಪುನೀತ್ ರಾಜ್‌ಕುಮಾರ್ ಅವರ ಅಪ್ಪ ಎಂದು ಗುರುತಿಸುತ್ತಾರೆ. ಅಂದರೆ ರಾಜ್‌ಕುಮಾರ್ ಹಿರಿಮೆಯನ್ನು ಮಕ್ಕಳಿಗೆ ತಲುಪಿಸುವಲ್ಲಿ ನಾವು ಸೋತಿದ್ದೇವೆ’ ಎಂದು ವಿವರಿಸಿದರು.
‘ರಾಜ್‌ಕುಮಾರ್ ಅವರನ್ನು ಪಠ್ಯವಾಗಿ ಗಮನಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತೇನೆ. ಅವರ ಆಂಗಿಕ, ಭಾವ ಪೂರ್ಣ ಆಂತರ್ಯದ ಭಾಷೆಗಳು ನಮ್ಮ ಹೃದಯ ಮುಟ್ಟುತ್ತದೆ. ಹುಬ್ಬಿನ ಚಲನೆ, ಸ್ವರದ ಏರಿಳಿತಗಳು ಕಥೆಯ ನಡುವೆ ಹೇಳಲು ಸಾಧ್ಯವಾಗದ ವಿಚಾರಗಳನ್ನು ಪ್ರೇಕ್ಷಕನಿಗೆ ಮುಟ್ಟಿಸುತ್ತವೆ’ ಎಂದು ತಿಳಿಸಿದರು.
‘ಇಂದಿನ ಕೆಲವು ಕಲಾವಿದರು ಮುಖವನ್ನು ಕೂದಲಿನಿಂದ ಮುಚ್ಚಿಟ್ಟುಕೊಂಡು ಅಭಿನಯಿಸುತ್ತಾರೆ. ವಾಕ್ಯ ದೋಷಗಳು ಎದ್ದು ಕಾಣುತ್ತವೆ. ಹೀಗಾಗಿ ನಟನೆಗೆ ಬರುವವರು ರಾಜ್‌ಕುಮಾರ್ ಅವರ ಕುರಿತು ಓದಿಕೊಳ್ಳುವುದು ಉತ್ತಮ’ ಎಂದು ಸಲಹೆ ನೀಡಿದರು.
ಹಂಪಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಡಿ.ವಿ.ಪರಶಿವಮೂರ್ತಿ ಮಾತನಾಡಿ, ‘ರಾಜ್‌ಕುಮಾರ್ ನಡವಳಿಕೆ ಹಾಗೂ ಸಿನಿಮಾಗಳಿಂದ ಸಂಸ್ಕೃತಿ ನಿರ್ಮಾಣವಾಗಿದೆ. ಇಂದಿನ ಸಿನಿಮಾಗಳನ್ನು ತುಲನೆ ಮಾಡಿದಾಗ ರಾಜ್ ಸಿನಿಮಾದ ಮಹತ್ವ ಮತ್ತು ಸಂದೇಶದ ಅರಿವಾಗುತ್ತದೆ’ ಎಂದರು.
‘ಯುವ ಸಮೂಹವು ರಾಜ್‌ಕುಮಾರ್ ಸಿನಿಮಾ ಹಾಗೂ ಹಾಡುಗಳು ಹಳೆಯ ಕಾಲದವು ಎಂಬ ಕಾರಣಕ್ಕೆ ನಿರ್ಲಕ್ಷಿಸುತ್ತಿದೆ. ಆದರೆ ಅವುಗಳಲ್ಲಿ ಮನಸ್ಸು ವಿಕಾಸವಾಗುವ ಹಾಗೂ ನಮ್ಮನ್ನು ತಿದ್ದುವ ವಿಚಾರಗಳಿವೆ. ಜೀವನ ಮೌಲ್ಯ ಕಲಿಯಲು ಅವರ ಸಿನಿಮಾ ನೋಡಬೇಕು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರೊ.ಜಿ.ಪ್ರಶಾಂತ್ ನಾಯಕ್ ಬರೆದ ‘ಡಾ.ರಾಜಕುಮಾರ್ ಬಹುತ್ವದ ಪ್ರಜ್ಞೆ’, ಪ್ರೊ.ಡಿ.ಸತೀಶ್‌ಚಂದ್ರ ಬರೆದ ‘ಡಾ.ರಾಜ್ ಚಿತ್ರಗೀತೆಗಳಲ್ಲಿ ಬಾಂಧವ್ಯದ ನೆಲೆಗಳು’, ಬಿ.ಎಂ.ಗಿರಿರಾಜ್ ನಿರ್ದೇಶಿಸಿದ ‘ಡಾ.ರಾಜಕುಮಾರ್: ಒಂದು ಕಿರು ಅವಲೋಕನ’ ಸಾಕ್ಷ್ಯಚಿತ್ರ ಬಿಡುಗಡೆಗೊಂಡಿತು.
ಶೇಷಾದ್ರಿಪುರಂ ಪದವಿ ಕಾಲೇಜಿನ ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಹಂಪಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಜಯ್ ಪೂಣಚ್ಚ ತಂಬಂಡ, ರಾಜಕುಮಾರ್ ಅಧ್ಯಯನ ಪೀಠದ ಸಂಚಾಲಕ ಎ.ಎಸ್.ಪ್ರಭಾಕರ, ಚಿಂತಕ ಎಂ.ಕೃಷ್ಣೇಗೌಡ, ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಈರಪ್ಪ, ಕಾರ್ಯಕ್ರಮ ಸಂಚಾಲಕ ಪ್ರಕಾಶ್ ಮೆಹು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.