ADVERTISEMENT

ಭರ್ಜರಿ ಹೂವು: ರೈತರ ಕೈ ಹಿಡಿಯುತ್ತ ಮಾವು?

ಬೂದಿ ರೋಗದಿಂದ ಶೇ 50ರಷ್ಟು ನಷ್ಟ; ಸೂಕ್ತ ಆರೈಕೆಗೆ ವಿಜ್ಞಾನಿಗಳ ಸಲಹೆ

ಆರ್.ಜಿತೇಂದ್ರ
Published 11 ಫೆಬ್ರುವರಿ 2026, 7:56 IST
Last Updated 11 ಫೆಬ್ರುವರಿ 2026, 7:56 IST
ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿಯ ತೋಟವೊಂದರಲ್ಲಿ ಹೂ ತುಂಬಿಕೊಂಡ ಮಾವಿನ ಮರ– ಪ್ರಜಾವಾಣಿ ಚಿತ್ರ: ಡಿ.ಕೆ. ಬಸವರಾಜು
ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿಯ ತೋಟವೊಂದರಲ್ಲಿ ಹೂ ತುಂಬಿಕೊಂಡ ಮಾವಿನ ಮರ– ಪ್ರಜಾವಾಣಿ ಚಿತ್ರ: ಡಿ.ಕೆ. ಬಸವರಾಜು   

ಮೈಸೂರು: ಸದ್ಯ ಮಾವಿನ ಮರಗಳು ಮೈತುಂಬ ಹೂತುಂಬಿ ನಿಂತಿದ್ದು, ಈ ಋತುವಿನಲ್ಲಿ ಉತ್ತಮ ಫಸಲಿನ ನಿರೀಕ್ಷೆ ರೈತರದ್ದು. ಆದರೆ ಈ ಬಾರಿ ಇಳಿ ಹಂಗಾಮು ಇದ್ದು, ಎಷ್ಟು ಫಸಲು ಸಿಕ್ಕರೂ ಲಾಭ. ಮಾವಿಗೆ ಬೆಲೆಯಂತೂ ಇದ್ದೇ ಇರಲಿದೆ ಎನ್ನುತ್ತಾರೆ ವಿಜ್ಞಾನಿಗಳು.

ಉತ್ತಮ ಇಳುವರಿ: ‘ಕಳೆದ ಸೆಪ್ಟೆಂಬರ್–ಅಕ್ಟೋಬರ್‌ ನಂತರ ಜೋರು ಮಳೆಯಾಗಿಲ್ಲ. ಒಣ ಹವೆ ಹಾಗೂ ನಂತರದಲ್ಲಿ ಚಳಿಯೂ ಜಾಸ್ತಿ ಇದ್ದು, ಮಾವಿನ ಮರಗಳು ತಡವಾಗಿ ಹೂ ಬಿಟ್ಟಿವೆ. ಆದರೆ ಅತಿಹೆಚ್ಚು ಪ್ರಮಾಣದಲ್ಲಿ ಹೂವು ಕಚ್ಚಿವೆ. ಇದರಲ್ಲಿ ಶೇ 30ರಷ್ಟು ಪ್ರಮಾಣದ ಹೂವು ಫಸಲಾಗಿ ಬದಲಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಯಲಚಹಳ್ಳಿಯ ತೋಟಗಾರಿಕೆ ಮಹಾವಿದ್ಯಾಲಯದ ವಿಜ್ಞಾನಿ ರಾಮೇಗೌಡ.

‘ಮತ್ತೆ ಮಾವಿನ ಮರಗಳು ಹೂ ಬಿಡುವ ನಿರೀಕ್ಷೆ ಇದೆ. ಹೊಸತಾಗಿ ಬರುವ ಹೂವುಗಳು ಅರಳುವ ಮುನ್ನವೇ ಸಿಂಪಡನೆ ಕೈಗೊಂಡರೆ ಅವುಗಳನ್ನು ಉಳಿಸಿಕೊಳ್ಳಬಹುದು’ ಎನ್ನುತ್ತಾರೆ ಅವರು.

ಬೂದಿರೋಗ ಬಾಧೆ: ಡಿಸೆಂಬರ್ ಆರಂಭದಲ್ಲಿ ಆಗಾಗ್ಗೆ ಇಬ್ಬನಿ ಹೆಚ್ಚಾದ ಕಾರಣಕ್ಕೆ ಮಾವಿನ ಮರಗಳಲ್ಲಿ ಬೂದಿ ರೋಗ ಹೆಚ್ಚಾಗಿತ್ತು. ಬಹುತೇಕ ರೈತರು ಸೂಕ್ತ ಔಷಧೋಪಚಾರ ಮಾಡದ ಕಾರಣಕ್ಕೆ ಈಗಾಗಲೇ ಶೇ 50ರಷ್ಟು ಹೂವು ಹಾಳಾಗಿದೆ. ಸೂಕ್ತ ಔಷಧೋಪಚಾರ ಮಾಡಿದ ಕಡೆಗಳಲ್ಲಿ ಮಾತ್ರ ಹೆಚ್ಚು ಹೂವು ಉಳಿದಿದೆ. ಆದರೆ ಮರಗಳಲ್ಲಿ ಜಿಗಿಹುಳು ಬಾಧೆ ಇರದಿರುವುದು ಸಮಾಧಾನದ ಸಂಗತಿ.

ADVERTISEMENT

ಬೂದಿ ರೋಗ ನಿಯಂತ್ರಣಕ್ಕೆ ಕಾಂಟಾಫ್‌ನಂತಹ ಔಷಧ ಸಿಂಪಡಿಸಬಹುದು. ಕಾಯಿಗಳು ಈಚು ಗಾತ್ರದಲ್ಲಿದ್ದು, ಇನ್ನಷ್ಟು ಉಪಚಾರ ಕೈಗೊಂಡರೆ ಫಸಲು ಕೈ ಹಿಡಿಯಲಿದೆ. ನೈಸರ್ಗಿಕ ಕೃಷಿ ಮಾಡುತ್ತಿರುವವರು ಅಜರ್‌ಡೆಕ್ಟಿನ್‌ನಂತಹ ದ್ರಾವಣಗಳ ಸಿಂಪಡನೆ ಮಾಡಬಹುದು. ಇಲ್ಲವಾದಲ್ಲಿ ಕಾರ್ಬೋಸಲ್ಫನ್‌ನಂತಹ ಕೀಟನಾಶಕಗಳನ್ನು ಬಳಸಬಹುದು. ಮುಂಜಾನೆ ಇಲ್ಲವೇ ಸಂಜೆ ಹೊತ್ತಿನಲ್ಲಿ ಮಾತ್ರ ಸಿಂಪಡನೆ ಮಾಡಬೇಕು. ಮಾವಿನ ಮರಗಳಿಗೆ ಔಷಧಗಳ ಸಿಂಪಡನೆ ಸಂದರ್ಭ ಪವರ್ ಸ್ಪ್ರೇಗಳನ್ನು ಬಳಸಿದಷ್ಟು ಉತ್ತಮ ಎನ್ನುವುದು ವಿಜ್ಞಾನಿಗಳ ಸಲಹೆ.

ಸೂಕ್ತ ಉಪಚಾರ ಅಗತ್ಯ: ಮಾವಿನ ಮರಗಳು ಹೂ ಬಿಟ್ಟ ಬಳಿಕ ಗೊಬ್ಬರ–ಉಪಚಾರ ಮಾಡುವ ಪ್ರಕ್ರಿಯೆಯನ್ನು ಬಿಡಬೇಕು. ಇಡೀ ವರ್ಷ ಬೆಳೆಯ ಬಗ್ಗೆ ಕಾಳಜಿ ವಹಿಸಬೇಕು. ಜೂನ್‌ನಲ್ಲೇ ಮರಗಳ ಕಾಂಡಕ್ಕೆ ಸುಣ್ಣ ಬಳಿಯುವುದರಿಂದ ಮರಗಳಿಗೆ ಅನುಕೂಲ ಆಗಲಿದ್ದು, ಮುಂದಿನ ಋತುವಿನಲ್ಲಿ ಉತ್ತಮ ಫಸಲು ಸಿಗಲಿದೆ. ಜಿಗಿಹುಳುವಿನ ಕಾಟವೂ ತಪ್ಪಲಿದೆ. ಜೊತೆಗೆ ಮಾವು ಕಟಾವಿನ ನಂತರ ಫ್ರೂನಿಂಗ್‌ನಂತಹ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ ರಾಮೇಗೌಡ. 

ಉಷ್ಣ ಹವೆ ಕಾರಣಕ್ಕೆ ಮಾವು ಈ ಬಾರಿ ಹೇರಳವಾಗಿ ಹೂ ಬಿಟ್ಟಿದೆ. ಬೂದಿರೋಗದಿಂದ ಹಾನಿ ಹೆಚ್ಚಾಗಿದ್ದು ಸೂಕ್ತ ಉಪಚಾರ ಮಾಡಿದಲ್ಲಿ ಫಸಲು ಕೈ ಹಿಡಿಯಲಿದೆ
–ರಾಮೇಗೌಡ, ವಿಜ್ಞಾನಿ ಯಲಚಹಳ್ಳಿ ತೋಟಗಾರಿಕೆ ಮಹಾವಿದ್ಯಾಲಯ
ಡಿಸೆಂಬರ್‌ನಲ್ಲಿ ಮರಗಳ ತುಂಬ ಹೂ ಬಿಟ್ಟಿದ್ದು ಚಳಿ–ಇಬ್ಬನಿ ಕಾರಣಕ್ಕೆ ಬೂದಿರೋಗ ಹೆಚ್ಚಾಗಿ ಅರ್ಧದಷ್ಟು ಹೂವು ಉದುರಿವೆ. ಸದ್ಯ ಔಷಧ ಸಿಂಪಡಿಸಿದ್ದು ಮರಗಳಿಗೆ ಉಪಚಾರ ಮಾಡುತ್ತಿದ್ದೇವೆ
– ಗಿರೀಶ್‌, ರೈತ ಇಲವಾಲ

ಉತ್ತಮ ಬೆಲೆ ನಿರೀಕ್ಷೆ

ಈ ಬಾರಿ ರಾಜ್ಯದಾದ್ಯಂತ ಮಾವಿನ ಇಳಿ ಹಂಗಾಮು ಇದೆ. ಮರಗಳು ಸಾಕಷ್ಟು ಪ್ರಮಾಣದಲ್ಲಿ ಹೂ ಬಿಟ್ಟಾಗ್ಯೂ ಹೆಚ್ಚು ಫಸಲು ಕೈ ಸೇರುವ ಸಾಧ್ಯತೆ ಕಡಿಮೆ. ಹೀಗಾಗಿ ಈ ಬಾರಿ ಮಾವು ಉತ್ತಮ ಬೆಲೆ ಪಡೆದುಕೊಳ್ಳುವ ನಿರೀಕ್ಷೆ ಇದೆ. ಕಳೆದ ಕೆಲವು ವರ್ಷದಿಂದಲೂ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸಿದ್ದಾರೆ. ಫಸಲನ್ನು ಕಾಪಾಡಿಕೊಂಡಲ್ಲಿ ಆದಾಯ ಪಡೆಯಬಹುದು ಎನ್ನುತ್ತಾರೆ ತೋಟಗಾರಿಕೆ ವಿಜ್ಞಾನಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.