ಮೈಸೂರು: ' ಸರ್ಕಾರಿ ದೂರದರ್ಶನದಲ್ಲಿ ಹಿಂದಿನ ಯಾವ ಪ್ರಧಾನಿಯೂ ಈಗಿನವರಂತೆ ನಿತ್ಯ ಬೊಗಳುತ್ತಿರಲಿಲ್ಲ. ಮಣಿಪುರದ ಜನರ ಸಮಸ್ಯೆ ಕೇಳಲು ಇವರಿಗೆ ಸಮಯ ಇಲ್ಲ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ 2578 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
' 42 ದೇಶ ಸುತ್ತಿರುವ ಪ್ರಧಾನಿ ಮೋದಿ ಗಲಭೆ ಪೀಡಿತ ಮಣಿಪುರಕ್ಕೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಕೇಳುವ ಮಾಡುವ ಕೆಲಸ ಮಾಡಿಲ್ಲ. ದೇಶದಲ್ಲಿ ಜನರು ಸಾಯುವಾಗ ವಿದೇಶ ಪ್ರವಾಸ ಮಾಡುತ್ತಾರೆ. ಸಾರ್ವಜನಿಕ ಉದ್ಯಮ ಗಳನ್ನು ಮುಚ್ಚಿ ಅದಾನಿ, ಅಂಬಾನಿಗಳಿಗೆ ಮಾರುತ್ತಿದ್ದಾರೆ' ಎಂದು ಟೀಕಿಸಿದರು.
' ಯಾವುದೇ ಯೋಜನೆಗಳು ಬಂದರೂ ಸಿದ್ದರಾಮಯ್ಯ ಮೊದಲ ಆದ್ಯತೆ ಕೊಡುವುದು ಮೈಸೂರಿಗೆ. ಈ ಊರಿನ ಮೇಲೆ ಅವರಿಗೆ ಹೆಚ್ಚು ಪ್ರೀತಿ ಇದೆ. ಹಣಕಾಸು ಸಚಿವರಾಗಿ ಅವರು ಮೈಸೂರಿಗೆ ಹೆಚ್ಚು ಅನುದಾನ ನೀಡಿದ್ದಾರೆ. ಬಿಜೆಪಿಯವರು ಟೀಕಾಚಾರ್ಯರು. ಅವರಿಗೆ ಕೇವಲ ಟೀಕೆ ಮಾಡುವುದಷ್ಟೇ ಗೊತ್ತು' ಎಂದರು
' ಕಾಂಗ್ರೆಸ್ ಏನು ಮಾಡಿದೆ ಎಂಬುದು ದೇಶದ ಜನರ ಮುಂದೆ ಇದೆ. ನೆಹರೂ ಕಾಲದಲ್ಲಿ ಅನೇಕ ಕಾರ್ಖಾನೆಗಳನ್ನು ಮೈಸೂರಿಗೆ ಕೊಟ್ಟಿದೆ. ಮೋದಿ ಹಾಗೂ ಇಲ್ಲಿರುವ ಮೋದಿ ಶಿಷ್ಯರು ಈ ಭಾಗಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ ಹೇಳಿ' ಎಂದು ಪ್ರಶ್ನಿಸಿದರು.
ಸಂವಿಧಾನ ತಿದ್ದಲು ಬಿಡೆವು: ಸಂವಿಧಾನವನ್ನು ತಿದ್ದುವ ಕೆಲಸವನ್ಮು ಬಿಜೆಪಿ ಹಾಗೂ ಆರ್ ಎಸ್ ಎಸ್ ಮಾಡುತ್ತಿದೆ. ಆದರೆ ನೀವೆಷ್ಟೇ ತಿಪ್ಪರಲಾಗ ಹೊಡೆದರೂ ಈ ದೇಶದ ಜನ ಅದಕ್ಕೆ ಅವಕಾಶ ನೀಡುವುದಿಲ್ಲ' ಎಂದು ಖರ್ಗೆ ಹೇಳಿದರು.
ಅಂಬೇಡ್ಕರ್ ಸಂವಿಧಾನ ಬರೆಯದೇ ನಿಮ್ಮ ತಾತ, ಆರ್ ಎಸ್ ಎಸ್ ನವರು ಬರೆದರೆ? ಸಂವಿಧಾನ ರೂಪಿಸಿದ್ದೇ ಅಂಬೇಡ್ಕರ್. ಆ ಸಂವಿಧಾನದಿಂದಲೇ ನೀವು ಪ್ರಧಾನಿ ಆಗಿದ್ದೀರಿ. ಅದನ್ನೇ ಕೊಲೆ ಮಾಡುವ ಕೆಲಸ ಏಕೆ ಮಾಡುತ್ತಿದ್ದೀರಿ?' ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.