ಹುಣಸೂರು: ಇಲ್ಲಿನ ಮಂಜುನಾಥ ಬಡಾವಣೆ ಸಮಗ್ರ ಅಭಿವೃದ್ಧಿಗೆ ಒಟ್ಟು ₹ 5.50 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ನಗರದ ಮಂಜುನಾಥ ಬಡಾವಣೆಯಲ್ಲಿ ಬುಧವಾರ ರಾಜ್ಯ ವಿಪತ್ತು ಉಪಶಮನ ಅನುದಾನ ₹ 41 ಲಕ್ಷದಲ್ಲಿ ಚರಂಡಿ ವಿಸ್ತರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಂಜುನಾಥ ಬಡಾವಣೆ ಮಳೆಗಾಲದಲ್ಲಿ ಅತೀವ ಸಮಸ್ಯೆಗೆ ಸಿಲುಕಲಿದ್ದು, ಇದನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲು ನಗರಸಭೆ ತೀರ್ಮಾನಿಸಿ ನಗರೋತ್ಥಾನ 4ನೇ ಹಂತದಲ್ಲಿ ₹ 3.50 ಕೋಟಿ ಅನುದಾನದಲ್ಲಿ ರಾಜಕಾಲುವೆ ನಿರ್ಮಾಣ ಪ್ರಗತಿಯಲ್ಲಿದೆ. ವಿಪತ್ತು ಉಪಶಮನ ಅನುದಾನ ₹ 41 ಲಕ್ಷ, ಎಸ್.ಎಫ್.ಸಿ ಅನುದಾನ ₹ 40 ಲಕ್ಷ ಹಾಗೂ ಉದ್ಯಾನ ಅಭಿವೃದ್ಧಿಗೆ ₹ 1 ಕೋಟಿ ಬಳಸಲಾಗಿದೆ’ ಎಂದರು.
‘ನಗರಸಭೆ 31 ವಾರ್ಡ್‌ನಲ್ಲಿ ಮಳೆ ನೀರು ನಿಯಂತ್ರಣದ ಕಾಮಗಾರಿಗೆ ವಿಪತ್ತು ಉಪಶಮನ ಅನುದಾನ ಬಳಸಬೇಕಿತ್ತು, ಸದಸ್ಯರ ಸಹಕಾರದಿಂದ ಮಂಜುನಾಥ ಬಡಾವಣೆ ಸಮಸ್ಯೆ ನಿವಾರಣೆಗೆ ಸಮ್ಮತಿಸಿ ಅನುದಾನ ನೀಡಿದ್ದಾರೆ. ಬಡಾವಣೆ ನಿವಾಸಿಗರು ನಗರಸಭೆ ಪ್ರತಿಯೊಬ್ಬ ಸದಸ್ಯರಿಗೂ ಕೃತಜ್ಞರಾಗಿರಬೇಕು’ ಎಂದರು.
ಬಡಾವಣೆಯಲ್ಲಿ ಕಾಮಗಾರಿಗೆ ಚಾಲನೆ ನೀಡಲು ಬಂದ ಶಾಸಕರಿಗೆ ಅಲ್ಲಿನ ನಿವಾಸಿಗಳು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಂಡರು.
ಸಮಸ್ಯೆ ಆಲಿಸಿ ಮಾತನಾಡಿ, ‘20 ವರ್ಷಗಳಿಂದ ಸಮಸ್ಯೆಯ ಜೊತೆಗೆ ಜೀವನ ನಡೆಸಿದ್ದೀರಿ, ಮುಂದಿನ 6 ತಿಂಗಳು ಸಹಿಸಿಕೊಂಡಲ್ಲಿ ಹೆಚ್ಚುವರಿ ಅನುದಾನ ತಂದು ಬಡಾವಣೆಯ ಒಳಚರಂಡಿ, ಚರಂಡಿ ಮತ್ತು ರಸ್ತೆ ನಿರ್ಮಿಸಿ ಸಮಸ್ಯೆ ಮುಕ್ತ ಬಡಾವಣೆ ಮಾಡಲು ಬದ್ಧನಿದ್ದೇನೆ’ ಎಂದರು.
ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಯೋಜನೆ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿ, ‘ಈಗಾಗಲೇ ಹೊಳ್ಳಮ್ಮನ ಕಟ್ಟೆಯಿಂದ ಮಳೆ ನೀರು ಬಡಾವಣೆಯಲ್ಲಿ ಸೇರುವುದನ್ನು ನಿವಾರಿಸಿದ್ದೇವೆ. ರಾಜಕಾಲುವೆ ನಿರ್ಮಾಣಗೊಂಡ ಬಳಿಕ ಬಹುತೇಕ ಸಮಸ್ಯೆ ನೀಗಲಿದೆ’ ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ್, ವಾರ್ಡ್ ಸದಸ್ಯೆ ಶ್ವೇತಾ ಮಂಜು, ನಗರಸಭೆ ಆಯುಕ್ತೆ ಮಾನಸ, ಪರಿಸರ ಎಂಜಿನಿಯರ್ ಸೌಮ್ಯ, ಶರ್ಮಿಳಾ, ಲೋಕೇಶ್, ನಗರಸಭೆ ಸದಸ್ಯರಾದ ಸತೀಶ್ ಕುಮಾರ್, ದೇವರಾಜ್, ರಾಣಿ ಪೆರುಮಾಳ್, ಜೆಡಿಎಸ್ ಮುಖಂಡ ಕಿರಂಗೂರು ಬಸವರಾಜ್, ಗೋವಿಂದರಾಜ್, ನಾಗರಾಜ್, ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.