ಮೈಸೂರು: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಕ್ಷೇತ್ರದಲ್ಲಿ ಮಂಟೇಸ್ವಾಮಿ, ರಾಚಪ್ಪಾಜಿ ಮತ್ತು ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದಕ್ಕೆ ಸಂಸದ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಈ ಕಮ್ಯುನಿಸ್ಟ್ ನಿಯಂತ್ರಿತ ಇಸ್ಲಾಮಿಕ್ ಓಲೈಕೆ ಸರ್ಕಾರವು ಪ್ರಾಚೀನ ಹಿಂದೂ ಸಂಪ್ರದಾಯಕ್ಕೆ ಸೇರಿದ, ಅದರಲ್ಲೂ ಹಿಂದುಳಿದ ವರ್ಗಗಳ, ತಳ ಸಮುದಾಯಗಳ ಹಾಗೂ ಜಾತ್ಯತೀತ ನಿಲುವುಗಳನ್ನು ಒಳಗೊಂಡಿರುವ ಮಂಟೇಸ್ವಾಮಿ ಮಠವನ್ನು ಸ್ವಾಧೀನಪಡಿಸಿಕೊಳ್ಳುವ ಈ ಘೋಷಣೆಯು ಹಿಂದೂ ನಂಬಿಕೆಯ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುವ ನೇರ ಪ್ರಯತ್ನವಾಗಿದೆ’ ಎಂದು ದೂರಿದ್ದಾರೆ.
‘ಇದು ಅತ್ಯಂತ ಖಂಡನೀಯ ಕೃತ್ಯವಾಗಿದೆ. ಇಂತಹ ಪ್ರಯತ್ನವನ್ನು ಎಲ್ಲ ಹಂತಗಳಲ್ಲೂ ಬಹಿರಂಗಪಡಿಸಬೇಕಾಗಿದೆ. ಸರ್ಕಾರ ಈ ನಿಲುವಿನಿಂದ ಹಿಂದೆ ಸರಿದು ನಮ್ಮ ನೀಲಗಾರ ಪರಂಪರೆಯ ನಂಬಿಕೆ, ಆಚರಣೆ, ಜಾನಪದ ಪರಂಪರೆಯನ್ನು ಉಳಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಮಂಟೇಸ್ವಾಮಿ ಮಠವು ನೀಲಗಾರ/ ಸಿದ್ಧ ಪರಂಪರೆಯ ಅಡಿಯಲ್ಲಿ ಬರುವ ಜಾತ್ಯತೀತ ಹಿಂದೂ ಧಾರ್ಮಿಕ ಮಠವಾಗಿದೆ. ಹಳೆಯ ಮೈಸೂರು ಭಾಗದ ಬಹುಪಾಲು ಹಿಂದೂ ಪಂಗಡಗಳು ಅತಿ ಹೆಚ್ಚಾಗಿ ಹಿಂದುಳಿದ ವರ್ಗ ಮತ್ತು ತಳ ಸಮುದಾಯಗಳ ಜನರು ಈ ಗುರುಪೀಠದ ಅನುಯಾಯಿಗಳಾಗಿದ್ದಾರೆ. ತಮಿಳುನಾಡಿನ ಕೆಲವು ಭಾಗಗಳ ಭಕ್ತರೂ ಇದ್ದಾರೆ. ಅರಸು ಸಮುದಾಯದವರು 500 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಪೀಠಾಧಿಪತಿಗಳಾಗಿದ್ದಾರೆ. ಮಠವನ್ನು ಇತರ ಅನೇಕ ಹಿಂದೂ ಸಮುದಾಯಗಳ ಸಹಕಾರ ಮತ್ತು ಸಮನ್ವಯದಿಂದ ಸಾಮೂಹಿಕವಾಗಿ ನಡೆಸಲಾಗುತ್ತಿದೆ. ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.