ADVERTISEMENT

ಅರಮನೆ ಗ್ರಂಥಗಳ ಡಿಜಿಟಲೀಕರಣ ಶೀಘ್ರ: ಪುರಾತತ್ವ ಇಲಾಖೆಯ ಆಯುಕ್ತ ಎ.ದೇವರಾಜು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 4:04 IST
Last Updated 30 ಅಕ್ಟೋಬರ್ 2025, 4:04 IST
ಮೈಸೂರಿನ ಮಾನಸಗಂಗೋತ್ರಿಯಲ್ಲಿ ‘ಪ್ರಾಚ್ಯವಿದ್ಯಾ ಸಂಶೋಧನಾಲಯ’ವು ಬುಧವಾರ ಆಯೋಜಿಸಿದ್ದ 134ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ‘ಮಹೇಂದ್ರ ವಿಜಯಡಿಮ’ ಮತ್ತು ‘ಚಿಂತಾಮಣಿ ವಿಜಯ ಚಂಪೂ’ ಕೃತಿಗಳನ್ನು ‍ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್ ಬಿಡುಗಡೆ ಮಾಡಿದರು. ಪ್ರೊ.ಸಿ.ಪಾರ್ವತಿ, ಎ.ದೇವರಾಜು, ಪ್ರೊ.ಡಿ.ಪಿ.ಮಧುಸೂದನಾಚಾರ್ಯ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ 
ಮೈಸೂರಿನ ಮಾನಸಗಂಗೋತ್ರಿಯಲ್ಲಿ ‘ಪ್ರಾಚ್ಯವಿದ್ಯಾ ಸಂಶೋಧನಾಲಯ’ವು ಬುಧವಾರ ಆಯೋಜಿಸಿದ್ದ 134ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ‘ಮಹೇಂದ್ರ ವಿಜಯಡಿಮ’ ಮತ್ತು ‘ಚಿಂತಾಮಣಿ ವಿಜಯ ಚಂಪೂ’ ಕೃತಿಗಳನ್ನು ‍ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್ ಬಿಡುಗಡೆ ಮಾಡಿದರು. ಪ್ರೊ.ಸಿ.ಪಾರ್ವತಿ, ಎ.ದೇವರಾಜು, ಪ್ರೊ.ಡಿ.ಪಿ.ಮಧುಸೂದನಾಚಾರ್ಯ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ    

ಮೈಸೂರು: ‘ಅರಮನೆಯಲ್ಲಿನ ಪುರಾತತ್ವ ಗ್ರಂಥಾಲಯದಲ್ಲಿ 15 ಸಾವಿರಕ್ಕೂ ಹೆಚ್ಚು ಹಸ್ತ‍ಪ್ರತಿ ಹಾಗೂ ಪುಸ್ತಕಗಳಿದ್ದು, ಅವುಗಳನ್ನು ಸಂರಕ್ಷಿಸುವ ಹಾಗೂ ದಾಖಲೀಕರಿಸುವ ಕೆಲಸವನ್ನು ಪ್ರಾಚ್ಯ ವಿದ್ಯಾ ಸಂಶೋಧನಾಲಯವು ಮಾಡಲಿದೆ’ ಎಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು ತಿಳಿಸಿದರು. 

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ‘ಪ್ರಾಚ್ಯವಿದ್ಯಾ ಸಂಶೋಧನಾಲಯ’ವು 134ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಬುಧವಾರ ‘ಭವಭೂತಿಯ ಉತ್ತರರಾಮ ಚರಿತೆಯ ವಿಶೇಷ’ ವಿಚಾರ ಸಂಕಿರಣದಲ್ಲಿ ‘ಮಹೇಂದ್ರ ವಿಜಯಡಿಮ’ ಮತ್ತು ‘ಚಿಂತಾಮಣಿ ವಿಜಯ ಚಂಪೂ’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. 

‘ಈಗಾಗಲೇ ನಿರ್ದೇಶಕರಿಗೆ ಇಲಾಖೆಯು ಕೋರಿದ್ದು, ಒಆರ್‌ಐನಲ್ಲಿ ನಡೆಯುತ್ತಿರುವ ದಾಖಲೀಕರಣ ಕಾರ್ಯ ಮುಗಿದ ನಂತರ ಅರಮನೆ ಗ್ರಂಥಾಲಯದ ಗ್ರಂಥಗಳ ಸ್ಕ್ಯಾನಿಂಗ್ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ. ಡಿಜಿಟಲೀಕರಣ ಮಾಡಿ ಜಾಲತಾಣದಲ್ಲಿ ಸುಲಭವಾಗಿ ಸಿಗುವಂತೆ ಮಾಡಲಾಗುವುದು’ ಎಂದರು. 

ADVERTISEMENT

‘ಸಾವಿರಾರು ವರ್ಷಗಳಷ್ಟು ಹಳೆಯದಾದ ಹಸ್ತಪ್ರತಿಗಳ ಸಂರಕ್ಷಣೆ ಮಾಡುವುದು ಸುಲಭವಲ್ಲ. ಒಆರ್‌ಐನ ಸಾವಿರಾರು ಸಂಶೋಧಕರು, ವಿದ್ಯಾರ್ಥಿಗಳು ಕಳೆದ ಒಂದೂವರೆ ಶತಮಾನದಲ್ಲಿ ನಾಡಿನ ಉದ್ದಗಲಕ್ಕೂ ಸಂಚರಿಸಿ, ಜನರಿಂದ ಹಸ್ತಪ್ರತಿ ಸಂಗ್ರಹಿಸಿ ಜ್ಞಾನ ಭಂಡಾರವನ್ನೇ ಸೃಷ್ಟಿಸಿದ್ದಾರೆ. ಅದನ್ನು ಸಂರಕ್ಷಿಸಿ, ದಾಖಲೀಕರಿಸಿ ಮತ್ತೆ ಜನರಿಗೆ ನೀಡುವ ಕೆಲಸವನ್ನು ಸಂಸ್ಥೆಯು ಮಾಡುತ್ತಿದೆ’ ಎಂದು ಶ್ಲಾಘಿಸಿದರು. 

‘ಅಮೋಘವಾದ ಗ್ರಂಥಗಳನ್ನು ಅಧ್ಯಯನ ಮಾಡುವುದರಿಂದ ವೃದ್ಧಿಯಾಗುವ ಜ್ಞಾನದ ಬೆಲೆಯನ್ನು ನಾವು ಕಟ್ಟಲಾಗದು. ಸಂಸ್ಥೆಯ ಅಡಿಯಲ್ಲಿ ಕೆಲಸ ಮಾಡುತ್ತಿರುವುದೇ ಸಿಬ್ಬಂದಿಯ ಪುಣ್ಯ. ಹಸ್ತಪ್ರತಿಗಳನ್ನು ಸಂರಕ್ಷಿಸಿ, ಪ್ರಕಟಿಸುವ, ಅನುವಾದಿಸುವ ಕೆಲಸವನ್ನು ಸಂಸ್ಥೆಯು ಮಾಡುತ್ತಿದೆ. ಅದಕ್ಕೆ ಇಲಾಖೆಯು ನೆರವಾಗಲಿದೆ’ ಎಂದು ಭರವಸೆ ನೀಡಿದರು. 

‘10ನೇ ಚಾಮರಾಜ ಒಡೆಯರ್‌ ಅವರ ದೂರದೃಷ್ಟಿಯ ಫಲವಾಗಿ ಒಆರ್‌ಐ ಸ್ಥಾಪನೆಯಾಯಿತು. ದೇಶದ ಪರಂಪರೆ ಹಾಗೂ ಸಂಸ್ಕೃತಿಯ ರಕ್ಷಣೆ ಕೆಲಸವನ್ನು ಸಂಸ್ಥೆಯು ಮಾಡಿದೆ. ಭೂಮಿಯ ಮೇಲಿನ ಯಾವುದೇ ವಿಷಯ ಕುರಿತಾದ ಪುಸ್ತಕಗಳು ಇಲ್ಲಿ ಸಿಗುತ್ತವೆ. ಕೌಟಿಲ್ಯನ ಅರ್ಥಶಾಸ್ತ್ರ ಸೇರಿದಂತೆ 70 ಸಾವಿರಕ್ಕೂ ಹೆಚ್ಚು ಹಸ್ತಪ್ರತಿಗಳಿವೆ ಎಂಬುದನ್ನು ಕೇಳಿದರೆ ರೋಮಾಂಚನವಾಗುತ್ತದೆ’ ಎಂದರು.  

ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್, ಸಂಸ್ಥೆಯ ನಿರ್ದೇಶಕ ಪ್ರೊ.ಡಿ.ಪಿ.ಮಧುಸೂದನಾಚಾರ್ಯ, ಉಪನಿರ್ದೇಶಕಿ ಪ್ರೊ.ಸಿ.ಪಾರ್ವತಿ ಪಾಲ್ಗೊಂಡಿದ್ದರು. 

‘ದುರಸ್ತಿಗೆ ₹ 20 ಲಕ್ಷ ನೆರವು’
‘ಅಮೂಲ್ಯ ಹಸ್ತಪ್ರತಿಗಳ ಭಂಡಾರ ಹೊಂದಿರುವ ಸುಂದರ ಕಟ್ಟಡದ ಒಆರ್‌ಐನ ಕೆಲಭಾಗ ಸೋರುತ್ತಿದ್ದು ಅದರ ದುರಸ್ತಿಗೆ ಇಲಾಖೆಯಿಂದ ₹ 10 ಲಕ್ಷ ನೀಡಲಾಗುವುದು’ ಎಂದು ಎ.ದೇವರಾಜು ತಿಳಿಸಿದರು.  ‘ಮೈಸೂರು ವಿಶ್ವವಿದ್ಯಾಲಯವೂ ₹ 10 ಲಕ್ಷ ನೀಡಲಿದ್ದು ₹ 20 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಯಾವುದೇ ಪಾರಂಪರಿಕ ಕಟ್ಟಡ ಉಳಿಯಬೇಕೆಂದರೆ ಸಾರ್ವಜನಿಕರು ಕೈ ಜೋಡಿಸಬೇಕು’ ಎಂದೂ ಕೋರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.