ADVERTISEMENT

ಮೈಸೂರು: ಡೂಪ್ಲಿನ್‌ ಕಾಂಪ್ಲೆಕ್ಸ್ ವರ್ತಕರಿಗೆ ನೋಟಿಸ್; ಕ್ರಮಕ್ಕೆ ಮುಂದಾದ ಎಂಡಿಎ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 4:56 IST
Last Updated 18 ಫೆಬ್ರುವರಿ 2026, 4:56 IST
ಎಂಡಿಎ ಕಚೇರಿ
ಎಂಡಿಎ ಕಚೇರಿ   

ಮೈಸೂರು: ನಗರದ ಹೃದಯಭಾಗದಲ್ಲಿರುವ ‘ಡೂಪ್ಲಿನ್‌ ಕಾಂಪ್ಲೆಕ್ಸ್’ನಲ್ಲಿ ದಶಕಗಳಿಂದ ಬೀಡು ಬಿಟ್ಟಿರುವ ವರ್ತಕರ ವಿರುದ್ಧ ಕಾರ್ಯಾಚರಣೆಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಸಿದ್ಧತೆ ನಡೆಸಿದ್ದು, ಅಲ್ಲಿನ ವರ್ತಕರಿಗೆ ನೋಟಿಸ್ ಜಾರಿಗೆ ಮುಂದಾಗಿದೆ.

ಸಯ್ಯಾಜಿರಾವ್‌ ರಸ್ತೆ, ಡಿ. ದೇವರಾಜ ಅರಸು ರಸ್ತೆಗೆ ಹೊಂದಿಕೊಂಡಂತೆ ಇರುವ ವಾಣಿಜ್ಯ ಸಂಕೀರ್ಣದಲ್ಲಿನ 40ಕ್ಕೂ ಹೆಚ್ಚು ವರ್ತಕರಿಗೆ ನೋಟಿಸ್ ಜಾರಿ ಆಗಲಿದ್ದು, ಮೂರು ತಿಂಗಳ ಒಳಗೆ ಮಳಿಗೆಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗುತ್ತಿದೆ. ಇಲ್ಲವಾದಲ್ಲಿ ತೆರವು ಕಾರ್ಯಾಚರಣೆ ನಡೆಸುವ ಎಚ್ಚರಿಕೆಯನ್ನೂ ಎಂಡಿಎ ಅಧಿಕಾರಿಗಳು ನೀಡಿದ್ದಾರೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರವು ನಾಲ್ಕೈದು ದಶಕಗಳ ಹಿಂದೆ ಈ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿತ್ತು. ಬಹುತೇಕ ಮಳಿಗೆಗಳಲ್ಲಿ ವರ್ತಕರು ವ್ಯಾಪಾರ–ವಹಿವಾಟು ನಡೆಸುತ್ತಿದ್ದಾರೆ. ಮಾಲೀಕತ್ವದ ವಿಚಾರದಲ್ಲಿ ಅಂದಿನ ಮುಡಾ ಹಾಗೂ ವರ್ತಕರ ನಡುವೆ ಗೊಂದಲ ಏರ್ಪಟ್ಟಿತ್ತು. ಮುಡಾ ಕ್ರಮಕ್ಕೆ ಮುಂದಾದಾಗ ವರ್ತಕರು ನ್ಯಾಯಾಲಯದ ಮೆಟ್ಟಿಲು ಏರಿದ್ದರು.

ADVERTISEMENT

2018ರಿಂದ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಎರಡು ತಿಂಗಳ ಹಿಂದೆ ನ್ಯಾಯಾಲಯವು ತೀರ್ಪು ನೀಡಿದೆ. ಇದನ್ನು ಆಧರಿಸಿ ಕ್ರಮಕ್ಕೆ ಎಂಡಿಎ ಮುಂದಾಗಿದೆ.

‘ಸಾರ್ವಜನಿಕ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ. ಹೀಗಾಗಿ ವರ್ತಕರಿಗೆ ನೋಟಿಸ್ ನೀಡಲಾಗುತ್ತಿದೆ. ಹಂತಹಂತವಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ’ ಎಂದು ಎಂಡಿಎ ಆಯುಕ್ತ ಕೆ.ಆರ್. ರಕ್ಷಿತ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮೂರು ದಶಕಗಳ ವಿವಾದ:

ಮುಡಾಗೆ ಸೇರಿದ್ದ ವಾಣಿಜ್ಯ ಸಂಕೀರ್ಣದ ಮಳಿಗೆಗಳನ್ನು ಬಾಡಿಗೆ ರೂಪದಲ್ಲಿ ನೀಡಲಾಗಿತ್ತು. 1998– 1999ನೇ ಸಾಲಿನಲ್ಲಿ ಬಾಡಿಗೆ ಹೆಚ್ಚಿಸುವ ಸಂದರ್ಭದಲ್ಲಿ ಮುಡಾದ ಅಂದಿನ ಎಂಜಿನಿಯರ್‌ ಒಬ್ಬರು ಆಯುಕ್ತರ ಗಮನಕ್ಕೆ ತಾರದೆಯೇ ವರ್ತಕರ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ.

ಈ ಒಪ್ಪಂದವನ್ನು ಮುಂದಿಟ್ಟುಕೊಂಡು ತಾವು ಮುಡಾದಿಂದಲೇ ಮಳಿಗೆ ಖರೀದಿಸಿ, ಕಂದಾಯ ಪಾವತಿಸುತ್ತಿರುವುದಾಗಿ ವರ್ತಕರು ವಾದಿಸಿದ್ದರು. ಬಾಡಿಗೆ ಪಾವತಿಸಲಿಲ್ಲ ಎಂಬ ಕಾರಣಕ್ಕೆ ಮಳಿಗೆಗಳಲ್ಲಿನ ವ್ಯಾಪಾರಿಗಳ ತೆರವಿಗೆ ಮುಡಾ ಮುಂದಾದಾಗ ವರ್ತಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.

‘ಮಳಿಗೆಗಳ ಕರಾರು ಅಧಿಕಾರ ಎಂಜಿನಿಯರ್‌ಗಳಿಗೆ ಇರುವುದಿಲ್ಲ. ಅಂದಿನ ಎಂಜಿನಿಯರ್‌ ಒಬ್ಬರು ಆಯುಕ್ತರ ಗಮನಕ್ಕೆ ತಾರದೆಯೇ ಮಾಡಿದ ಒಪ್ಪಂದಕ್ಕೆ ಮಾನ್ಯತೆ ಇಲ್ಲ. ಮೇಲಾಗಿ ಆ ಮಳಿಗೆಗಳನ್ನು ಬಾಡಿಗೆ ಉದ್ದೇಶಕ್ಕೆ ಮಾತ್ರ ನೀಡಲಾಗಿತ್ತು. ಹೀಗಾಗಿ ಬಾಡಿಗೆ ಪಾವತಿಸದೇ ಇದ್ದಾಗ ಕ್ರಮ ಕೈಗೊಳ್ಳುವ ಅಧಿಕಾರ ಪ್ರಾಧಿಕಾರಕ್ಕೆ ಇದೆ. ಇದನ್ನೇ ನ್ಯಾಯಾಲಯದ ಗಮನಕ್ಕೆ ತಂದಿದ್ದು, ನ್ಯಾಯಾಲಯವು ಪ್ರಾಧಿಕಾರದ ಪರವಾಗಿ ನಿಂತಿದೆ’ ಎನ್ನುತ್ತಾರೆ ಅಧಿಕಾರಿಗಳು.

ನ್ಯಾಯಾಲಯದ ತೀರ್ಪು ಆಧರಿಸಿ ಕ್ರಮಕ್ಕೆ ಎಂಡಿಎ ಮುಂದಾಗಿದ್ದು ಸಂಬಂಧಿಸಿದ ವರ್ತಕರಿಗೆ ನೋಟಿಸ್ ನೀಡುತ್ತಿದ್ದೇವೆ. ಎಲ್ಲ ಮಳಿಗೆಗಳನ್ನು ಪ್ರಾಧಿಕಾರದ ವಶಕ್ಕೆ ಪಡೆಯಲಾಗುವುದು
ಕೆ.ಆರ್. ರಕ್ಷಿತ್‌ ಎಂಡಿಎ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.