ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದಾದ್ಯಂತ ಪಾಲಿಕೆ ನೌಕರರು ಹಾಗೂ ಪೌರ ಕಾರ್ಮಿಕರು ಸಾಮೂಹಿಕ ರಜೆ ಹಾಕಿ ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಮೈಸೂರಿನಲ್ಲೂ ಪೌರ ಕಾರ್ಮಿಕರು ಪ್ರತಿಭಟಿಸಿದರು.
ಮಹಾನಗರಪಾಲಿಕೆ ಮುಂಭಾಗ ಜಮಾಯಿಸಿದ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಕಾರಣದಿಂದ ಕಸ ವಿಲೇವಾರಿಯೂ ಸ್ಥಗಿತಗೊಂಡಿತು.
‘7ನೇ ವೇತನ ಆಯೋಗದ ಪರಿಷ್ಕೃತ ವೇತನ ಪಾವತಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನ ಆರ್ಥಿಕ ಇಲಾಖೆ ಬಿಡುಗಡೆಗೊಳಿಸಬೇಕು. ವೇತನಾನುದಾನಕ್ಕೆ ಶೇ. 85 ರಿಂದ 95 ರಷ್ಟನ್ನು ಮಾತ್ರ ಬಿಡುಗಡೆಗೊಳಿಸಿ, ಉಳಿದುದನ್ನು ಪಾಲಿಕೆ ಕ್ರೋಢೀಕರಿಸಿದ ಸಂಪನ್ಮೂಲದಲ್ಲಿ ಭರಿಸಬೇಕೆಂದು ಪೌರಾಡಳಿತ ಇಲಾಖೆ ನಿರ್ದೇಶನ ಹೊರಡಿಸಿದೆ. ಇದು ಸರಿಯಲ್ಲ. ಒಂದು ವೇಳೆ ನಾಗರಿಕರು ಆಸ್ತಿ ತೆರಿಗೆ ಪಾವತಿಸದಿದ್ದರೆ ವೇತನ ನೀಡಲು ಸಾಧ್ಯವಾಗದು. ಈ ನಿಯಮ ರದ್ದಾಗಬೇಕು’ ಎಂದು ಒತ್ತಾಯಿಸಿದರು.
‘ಆರೋಗ್ಯ ಸಂಜೀವಿನಿ ಕಾರ್ಯಕ್ರಮವನ್ನು ಪೌರ ಕಾರ್ಮಿಕರಿಗೂ ಅನುಷ್ಠಾನಗೊಳಿಸಬೇಕು, ಕೆಜಿಐಡಿ, ಜಿಪಿಎಫ್ ಮೊದಲಾದ ಸೌಲಭ್ಯ ನೀಡಬೇಕು. ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ಮಾಡಬೇಕು. ಮುಂಬಡ್ತಿ ನೀಡಬೇಕು. ಇಲಾಖೆಯ ಮುಖ್ಯ ಕಾರ್ಯದರ್ಶಿ ಗಮನಕ್ಕೆ ಈ ವಿಚಾರಗಳನ್ನು ತಂದರೂ ಸ್ಪಂದನೆ ದೊರೆತಿಲ್ಲ. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಶಾಸಕ ಟಿ.ಎಸ್.ಶ್ರೀವತ್ಸ ಭೇಟಿ ನೀಡಿ, ‘ಪೌರ ಕಾರ್ಮಿಕರ ಬೇಡಿಕೆಗಳನ್ನು ಈ ಕೂಡಲೇ ಸರ್ಕಾರ ಬಗೆಹರಿಸಬೇಕು. ನಾನು ಇವರ ಹೋರಾಟದ ಪರವಾಗಿರುತ್ತೇನೆ’ ಎಂದು ಘೋಷಿಸಿದರು.
ಪೌರಕಾರ್ಮಿಕರ ಮಹಾಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಆರ್.ರಾಚಯ್ಯ, ಮಾಜಿ ಉಪಾಧ್ಯಕ್ಷ ಎನ್. ಅರುಣ್ ಕುಮಾರ್, ಜಿ. ಮಂಜುನಾಥ್, ಎಂ. ರಾಜೀವ್, ಎಲ್‌ಐಸಿ ಮುರುಗೇಶ್, ಮೋಹನ್ ಕುಮಾರ್ ಭಾಗವಹಿಸಿದ್ದರು.
- ಕೆಲಸಕ್ಕೆ ರಜೆ ಹಾಕಿದ ನೌಕರರು
65 ವಾರ್ಡಿನ ಸಾವಿರಕ್ಕೂ ಹೆಚ್ಚು ನೌಕರರು ಕೆಲಸಕ್ಕೆ ತೆರಳದಿದ್ದ ಕಾರಣ ಮುಷ್ಕರದ ಮೊದಲ ದಿನ ಕಸ ನಿರ್ವಹಣೆಯಾಗದೇ ಜನರಿಗೆ ತೊಂದರೆಯಾಯಿತು. ನಿತ್ಯ ಬೆಳಿಗ್ಗೆ ಮೈಸೂರನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದ ಕೈಗಳು ಕಾಣಿಸಲಿಲ್ಲ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಿದ ಕಾರಣ ಪಾಲಿಕೆ ಕಚೇರಿಯಲ್ಲೂ ನೌಕರರು ಇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.