ADVERTISEMENT

ಮುರುಘಾ ಶ್ರೀ ವಿರುದ್ಧದ ಕಿರುಕುಳ ಪ್ರಕರಣ: ರಾಷ್ಟ್ರೀಯ ತನಿಖಾ ತಂಡ ರಚನೆಗೆ ಆಗ್ರಹ

ಸಂತ್ರಸ್ತ ಮಕ್ಕಳ ತಾಯಿ ಬಿಡುಗಡೆಗೆ ಪ್ರಗತಿಪರ ಸಂಘಟನೆಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 13:43 IST
Last Updated 15 ನವೆಂಬರ್ 2022, 13:43 IST
ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ‘ದುರ್ಗದ ನೊಂದ ಮಕ್ಕಳೊಂದಿಗೆ ನಾವಿದ್ದೇವೆ’ ಎಂದು ಘೋಷಣೆ ಕೂಗಿದರು
ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ‘ದುರ್ಗದ ನೊಂದ ಮಕ್ಕಳೊಂದಿಗೆ ನಾವಿದ್ದೇವೆ’ ಎಂದು ಘೋಷಣೆ ಕೂಗಿದರು   

ಮೈಸೂರು: ‘ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪೋಕ್ಸೊ ಪ್ರಕರಣ ದಾಖಲಿಸಿರುವ ಸಂತ್ರಸ್ತ ವಿದ್ಯಾರ್ಥಿನಿಯರ ತಾಯಿ‌ಯನ್ನು ಬಿಡುಗಡೆ ಮಾಡಬೇಕು. ನ್ಯಾಯ ಸಮ್ಮತ, ಮುಕ್ತ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗೆ ಗಲ್ಲು ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು’ ಎಂದು ರೈತ, ದಸಂಸ ಸೇರಿದಂತೆ ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಇಲ್ಲಿನ ಒಡನಾಡಿ ಸೇವಾ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಂಘಟನೆಗಳ ಪದಾಧಿಕಾರಿಗಳು ಹಕ್ಕೊತ್ತಾಯಗಳನ್ನು ಮಂಡಿಸಿದರು.

‘ರಾಷ್ಟ್ರಪತಿ, ಪ್ರಧಾನಿ, ಮಾನವ ಹಕ್ಕುಗಳ ಆಯೋಗ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವಿಶೇಷ ಮನವಿ ಸಲ್ಲಿಸಲಾಗುವುದು. ದೇಶದಾದ್ಯಂತ ಪತ್ರ ಚಳವಳಿ ನಡೆಸಲಾಗುವುದು’ ಎಂದರು.

ADVERTISEMENT

‘ನ್ಯಾಯಾಧೀಶರ ನೇತೃತ್ವದಲ್ಲಿ ರಾಷ್ಟ್ರೀಯ ತನಿಖಾ ತಂಡ ರಚಿಸಬೇಕು. ಹೊರ ರಾಜ್ಯದ ಮಹಿಳಾ ಐಪಿಎಸ್ ಅಧಿಕಾರಿಗಳನ್ನು ನೇಮಿಸಬೇಕು. ಆರೋಪಿಯು 70ಕ್ಕೂ ಹೆಚ್ಚು ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದು, ಎಲ್ಲರೂ ಅಭಿವ್ಯಕ್ತಿಸುವ ನಿರ್ಭೀತ ವಾತಾವರಣ ಸೃಷ್ಟಿಸಬೇಕು’ ಎಂದು ಒತ್ತಾಯಿಸಿದರು.

‘ಇನ್ನಿತರ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಅವರನ್ನು ಸಾಕ್ಷಿಗಳನ್ನಾಗಿ ಮಾಡಿದ್ದಾರೆ. ಆದರೆ, ನೊಂದ ಬಾಲಕಿಯರೆಲ್ಲರಿಗೂ ಸರ್ಕಾರದಿಂದ ಪರಿಹಾರ ಒದಗಿಸಲು ಅನುವಾಗುವಂತೆ ಪ್ರತ್ಯೇಕ ಪ್ರಕರಣವನ್ನು ಪೊಲೀಸರಿಂದಲೇ ದಾಖಲಿಸಬೇಕು’ ಎಂದು ಆಗ್ರಹಿಸಿದರು.

‘ಮಕ್ಕಳ ಮೇಲೆ ಅತ್ಯಾಚಾರ ಎಸಗುವಾಗ ಮಾದಕ ದ್ರವ್ಯವನ್ನು ಸೇವಿಸುವಂತೆ ಪ್ರೇರೇಪಿಸಿದ ಕಾರಣದಿಂದ, ಮಕ್ಕಳಿಗೆ ಮಾದಕ ದ್ರವ್ಯವನ್ನು ಒದಗಿಸಿದ ಆರೋಪದ ಮೇಲೆ ಮತ್ತೊಂದು ಪ್ರಕರಣ ದಾಖಲಿಸಿ, ಇದನ್ನೂ ಉನ್ನತ ಮಟ್ಟದ ತನಿಖೆ ನಡೆಸಬೇಕು. ಆರೋಪಿಯ ಪಿತೂರಿ ಮತ್ತು ಹುನ್ನಾರಕ್ಕೆ ಪ್ರತಿ ದಿನ ಸಭೆ ಹಾಗೂ ಸಂಪರ್ಕಕ್ಕೆ ವ್ಯವಸ್ಥೆ ಮಾಡಿಕೊಟ್ಟ ಕಾರಾಗೃಹದ ಸೂ‍ಪರಿಂಟೆಂಡೆಂಟ್ ಅನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

ಅಮಾಯಕ ಪೋಷಕರ ಮೇಲೆ ಪ್ರಕರಣ ದಾಖಲಿಸುವುದು ಅಸಹನೀಯವಾದುದು ಎಂದು ಸಭೆ ಆಕ್ರೋಶ ವ್ಯಕ್ತಪಡಿಸಿತು. ‘ಕಾನೂನು ತಿರುಚುತ್ತಿರುವವರ ಮೇಲೆ ಪ್ರಕರಣ ದಾಖಲಿಸಬೇಕು’ ಎಂದು ಕೋರಿತು.

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಸಂಘದ ಪ್ರೊ.ವನಜಾ, ವಿವಿಧ ಸಂಘಟನೆಗಳ ಪ್ರೊ.ಪಿ.ಎನ್.ಶ್ರೀದೇವಿ, ಲತಾ ಕೆ. ಬಿದ್ದಪ್ಪ, ಸರಸ್ವತಿ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ನೇತ್ರಾವತಿ, ಮಂಡಕಳ್ಳಿ ಮಹೇಶ, ವಿಜಯೇಂದ್ರ, ನಿವೃತ್ತ ಕುಲಪತಿ ಪ್ರೊ.ಸಬೀಹಾ ಭೂಮಿಗೌಡ, ಬಿಎಸ್ಪಿ ರಾಜ್ಯ ಘಟಕದ ಕಾರ್ಯದರ್ಶಿ ಪುರುಷೋತ್ತಮ, ಪ್ರೊ.ಕಾಳಚನ್ನೇಗೌಡ, ಹೊಸಕೋಟೆ ಬಸವರಾಜು, ದಸಂಸ ಮುಖಂಡ ಆಲಗೂಡು ಶಿವಕುಮಾರ್, ಸ್ವರಾಜ್‌ ಇಂಡಿಯಾ ನಗರ ಘಟಕದ ಅಧ್ಯಕ್ಷ ಉಗ್ರನರಸಿಂಹೇಗೌಡ, ಒಡನಾಡಿ ಸಂಸ್ಥಾಪಕ ಸ್ಟ್ಯಾನ್ಲಿ, ನಿರ್ದೇಶಕ ಪರಶುರಾಂ ಇದ್ದರು.

ಇತರ ಹಕ್ಕೊತ್ತಾಯಗಳು...

* ಮುರುಘಾ ಮಠದ ಆಶ್ರಯದಲ್ಲಿದ್ದ ಮಕ್ಕಳ ರಕ್ಷಣೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿಯ ಮೇಲೆ ಪ್ರಕರಣ ದಾಖಲಿಸಬೇಕು.

* ಮಠದಲ್ಲಿದ್ದ ಮಕ್ಕಳನ್ನು ಸೂಕ್ತ ತನಿಖೆಗೆ ಒಳಪಡಿಸದೆ, ಆರೋಪಿಗೆ ಅನುಕೂಲ ಆಗುವಂತೆ ರಾತ್ರೋರಾತ್ರಿ ಬೇರೆ ಜಿಲ್ಲೆಗೆ ರವಾನಿಸಿದ್ದನ್ನು ಕ್ರೌರ್ಯ ಎಂದೇ ಭಾವಿಸಿ ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಡಿಸಿಪಿಯು ಮೇಲೆ ದೂರು ದಾಖಲಿಸಬೇಕು.

* ಪ್ರಕರಣವನ್ನು ರಾಷ್ಟ್ರೀಯ ದುರಂತವೆಂದು ಪರಿಗಣಿಸಿ, ನೊಂದ ಎಲ್ಲರಿಗೂ ಪರಿಹಾರ ಕಲ್ಪಿಸಬೇಕು. ಸಮಾಜದಲ್ಲಿ ಮೂಡಿರುವ ಭಯ ಹೋಗಲಾಡಿಸಲು ವಿಶೇಷ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು.

* ಮಕ್ಕಳಿಗಾದ ದೌರ್ಜನ್ಯ ಹಾಗೂ ಗೌಪ್ಯತೆ ಕಾಪಾಡಲು ಸಹಾಯವಾಣಿ ಆರಂಭಿಸಬೇಕು.

* ಗರ್ಭಪಾತ ಮಾಡಿಸಿದ್ದು ಹಾಗೂ ಗರ್ಭಕೋಶ ತೆಗೆಸಿದ ಪ್ರಕರಣ, ನಿರಂತರವಾಗಿ ಅತ್ಯಾಚಾರಕ್ಕೆ ಕಾರಣವಾದ ಎಲ್ಲ ಅಧಿಕಾರಿಗಳನ್ನೂ ಸಮಗ್ರ ತನಿಖೆಗೆ ಒಳಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.