ADVERTISEMENT

ಕಾಯಕ ಸಮಾಜಗಳ ಒಕ್ಕೂಟದ ಸಭೆ‌: ಮಹೇಶ್‌ಚಂದ್ರ ಗುರು ಮಾತಿಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 8:26 IST
Last Updated 23 ಜನವರಿ 2023, 8:26 IST
   

ಮೈಸೂರು: ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಸೋಮವಾರ ನಡೆದ ‘ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ’ದ ರಾಜ್ಯ ಪ್ರತಿನಿಧಿಗಳ ಅಧಿವೇಶನದಲ್ಲಿ ಲೇಖಕ ಮಹೇಶ್‌ ಚಂದ್ರಗುರು ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಗಾಣಿಗ ಸಮಾಜದ ಮುಖಂಡರು, ಭಾಷಣ ನಿಲ್ಲಿಸುವಂತೆ ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಟೀಕೆಗೆ ಆಕ್ಷೇಪ ವ್ಯಕ್ತಪಡಿಸಿದ ಚಾಮರಾಜನಗರದ ಗಾಣಿಗ ಸಮಾಜದ ಮುಖಂಡರಾದ ಜಯರಾಮಶೆಟ್ಟಿ ಹಾಗೂ ಅಂಕಶೆಟ್ಟಿ, ‘ಸಮಾಜದ ಶ್ರೇಯೋಭಿವೃದ್ಧಿ ಬಗ್ಗೆ ಮಾತನಾಡಿ, ಪ್ರಧಾನಿ ಮೋದಿ ಬಗ್ಗೆ ಟೀಕೆ ಮಾಡುವುದೇಕೆ’ ಎಂದು ಹರಿಹಾಯ್ದರು.

‘ಸ್ವಾತಂತ್ರ್ಯ ಬಂದು 7‌5 ವರ್ಷಗಳಾದರೂ ಸಮಾಜದ ಅಭಿವೃದ್ಧಿ ಎಲ್ಲಿ ಆಗಿದೆ. ಈಗ ನೆಹರೂ ಆಡಳಿತ ಬೇಕು ಎಂಬುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ADVERTISEMENT

ಮಹೇಶ್‌ ಚಂದ್ರ ಗುರು ಮಾತನಾಡಿದ್ದೇನು?:

‘ಜಾಗತೀಕರಣ ಉಳ್ಳವರಿಗೆ ಮಾತ್ರವೇ ಅನುಕೂಲ ಮಾಡಿಕೊಟ್ಟಿದೆ. ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಸರ್ಕಾರಕ್ಕೆ ಮತಗಳು ಬೇಕಿದೆಯೇ ಹೊರತು ಅಭಿವೃದ್ಧಿ ಬೇಕಿಲ್ಲ. ಸರ್ಕಾರವನ್ನು ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಗಳ ನಿಯಂತ್ರಣದಲ್ಲಿದೆ. ಹೀಗಾಗಿಯೇ ಶೂದ್ರರು, ದಲಿತರು ಯಥಾಸ್ಥಿತಿಯಲ್ಲಿಯೇ ಇದ್ದಾರೆ. ಹೀಗಾಗಿಯೇ ಜಾತಿ ವಿನಾಶವಾಗಿಲ್ಲ’ ಎಂದು ಲೇಖಕ ಮಹೇಶ್‌ಚಂದ್ರಗುರು ಹೇಳಿದರು.

‘ಕರ್ಮಯೋಗವನ್ನೇ ನಂಬಿರುವ ಕಾಯಕ ಸಮಾಜ ಕರ್ನಾಟಕದ ಆರ್ಥಿಕತೆಯ ಬೆನ್ನೆಲುಬಾಗಿದೆ. ಅವರ ಕೊಡುಗೆಯನ್ನು ಗುರುತಿಸಿ ಅವರನ್ನು ಮೇಲೆತ್ತಲು ಆಳುವವರಿಗೆ ಕಣ್ಣುಗಳೇ ಇಲ್ಲವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಅಸಮಾನತೆಯನ್ನು ಬಿತ್ತುವ ಜಾತಿ ಮೂಲದಿಂದ ಬಂದ ವೃತ್ತಿಗಳನ್ನು ಏಕೆ ಕಾಯಕ ಸಮಾಜಗಳು ಮಾಡಬೇಕು. ಸಾಮಾಜಿಕ ಪರಿವರ್ತನೆಯಾಗಬೇಕೆಂದರೆ ಕೂಡಲೇ ಆ ವೃತ್ತಿಗಳನ್ನು ತೊರೆಯಿರಿ’ ಎಂದು ಸಲಹೆ ನೀಡಿದರು.

‘ನರೇಂದ್ರ ಮೋದಿ ಅವರು ಖಾಸಗೀಕರಣದಿಂದ ದಲಿತರು, ಶ್ರಮಿಕರು ಹಾಗೂ ಅಸಹಾಯಕರನ್ನು ಕೊಲ್ಲುತ್ತಿದ್ದಾರೆ. ನಮಗೆ ಬೇಕಿರುವುದು ನೆಹರೂ ಅಂಥ ನಾಯಕತ್ವ. ಅವರು ಎಲ್ಲ ವಲಯಗಳನ್ನೂ ರಾಷ್ಟ್ರೀಕರಣ ಮಾಡಿ ಸಮಾಜಗಳಿಗೆ ನೆರವಾದರು. ಉದ್ಯೋಗ ಸೃಷ್ಟಿಸಿದರು. ಆದರೆ, ಮೋದಿ ಅವರು ಬಂಡವಾಳಶಾಹಿಗಳಿಗೆ ಮಾರಾಟಮಾಡಿ ವ್ಯವಸ್ಥೆಯನ್ನು ರಾಕ್ಷಸೀಕರಣ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ 20 ಅಂಶಗಳ ಕಾರ್ಯಕ್ರಮ, ಉಳುವವನಿಗೆ ಭೂಮಿಯ ಒಡೆಯ ಮಾಡಿದರೆ, ಬಿಜೆಪಿ ಎಲ್ಲವನ್ನೂ ಮಾರುತ್ತಿದೆ. ₹ 6 ಸಾವಿರ ನೀಡಿ ‍ಪ್ರತಿ ಮತ ಖರೀದಿಸುತ್ತೇನೆಂದು ಬೆಳಗಾವಿಯ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ’ ಎಂದರು.

ಮಹೇಶ್‌ ಚಂದ್ರಗುರು ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಜಯರಾಮಶೆಟ್ಟಿ, ಅಂಕಶೆಟ್ಟಿ ಹಾಗೂ ಇತರ ಮುಖಂಡರು ‘ರಾಜಕೀಯ ಮಾತನಾಡಬೇಡಿ’ ಎಂದರು. ಅದಕ್ಕೆ ಉತ್ತರಿಸಿದ ಮಹೇಶ್‌ ಚಂದ್ರಗುರು, ‘ತಾತ್ವಿಕ ವಿರೋಧವಷ್ಟೇ ಮಾಡಿ? ಗಲಾಟೆ ಮಾಡುವುದೇಕೆ. ಮೋದಿ ಅವರ ಗುಲಾಮರಾ’ ಎನ್ನುತ್ತಿದ್ದಂತೆ ವೇದಿಕೆಗೆ ಪ್ರವೇಶಿಸಿದ ಮುಖಂಡರು ವಾಗ್ವಾದಕ್ಕಿಳಿದು ಕ್ಷಮೆಗೆ ಆಗ್ರಹಿಸಿದರು.

ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಮುಖಂಡರನ್ನು ಸಮಾಧಾನಿಸಿ ಮನವೊಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.