ADVERTISEMENT

ಮೈಸೂರು | 6 ತಿಂಗಳಲ್ಲೇ 11,566 ಮಂದಿಗೆ ಮನೋರೋಗ!

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಚಿಕಿತ್ಸೆ

ಎಂ.ಮಹೇಶ
Published 10 ಅಕ್ಟೋಬರ್ 2025, 3:13 IST
Last Updated 10 ಅಕ್ಟೋಬರ್ 2025, 3:13 IST
ಡಾ. ಬೃಂದಾ ಬಿ.
ಡಾ. ಬೃಂದಾ ಬಿ.   

ಮೈಸೂರು: ಜಿಲ್ಲೆಯಲ್ಲಿ ಮನೋರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಪ್ರಸಕ್ತ ಸಾಲಿನಲ್ಲಿ ಕೇವಲ 6 ತಿಂಗಳಲ್ಲೇ (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ) 11,566 ಮಂದಿ ಮನೋರೋಗಿಗಳು ಕಂಡುಬಂದಿದ್ದಾರೆ. 700 ಮಂದಿಗೆ ಆಪ್ತಸಮಾಲೋಚನೆಯ ನೆರವನ್ನು ಆರೋಗ್ಯ ಇಲಾಖೆಯಿಂದ ನೀಡಲಾಗಿದೆ.

ಇದೆಲ್ಲವೂ ಸರ್ಕಾರಿ ಆಸ್ಪತ್ರೆಗಳಲ್ಲಿ ವರದಿಯಾಗಿರುವ ಅಂಕಿ ಅಂಶ. ಇದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ದಾಖಲಾಗಿದೆ. ಮಾನಸಿಕ ಆರೋಗ್ಯದ ಸಮಸ್ಯೆ ಉಳ್ಳವರಿಗೆ ನೆರವಾಗುವ ಕೆಲಸವನ್ನು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ಕಾರ್ಯಕ್ರಮದಲ್ಲಿ ಮಾಡಲಾಗುತ್ತಿದೆ. 

ADVERTISEMENT

2024–25ನೇ ಸಾಲಿನಲ್ಲಿ 30,157 ಮನೋರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಆಗ, 1,031 ಮಂದಿಗೆ ಆ‍ಪ್ತಸಮಾಲೋಚನೆಯ ಸೇವೆ ಒದಗಿಸಲಾಗಿದೆ. ಈ ಮಾಹಿತಿಯನ್ನು ‘ಇ–ಮನಸ್‌’ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತಿದೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಬೃಂದಾ ಬಿ. ‘ಪ್ರಜಾವಾಣಿ‘ಗೆ ತಿಳಿಸಿದರು.

ಮನೋಚೈತನ್ಯ ಕ್ಲಿನಿಕ್‌: 

ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರ ‘ಮನೋಚೈತನ್ಯ ಕ್ಲಿನಿಕ್‌’ ನಡೆಸಲಾಗುತ್ತಿದೆ. ಅಲ್ಲಿಗೆ, ಮನೋರೋಗ ತಜ್ಞರು ಒಳಗೊಂಡ ಜಿಲ್ಲಾ ಮಾನಸಿಕ ಆರೋಗ್ಯ ತಂಡ ಭೇಟಿ ನೀಡಿ ಕ್ಲಿನಿಕ್ ನಡೆಸುತ್ತದೆ. ಅಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಹಾಗೂ ಅಗತ್ಯವಿದ್ದವರಿಗೆ ಆಪ್ತಸಮಾಲೋಚನೆಯ ಬೆಂಬಲವನ್ನು ಕೊಡಲಾಗುತ್ತದೆ. ಅವಶ್ಯವುಳ್ಳವರಿಗೆ ಔಷಧಿಯನ್ನೂ ವಿತರಿಸಲಾಗುತ್ತಿದೆ. ‘ಟೆಲಿ ಸಮಾಲೋಚನೆ’ಯ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. 14416 ಸಹಾಯವಾಣಿ ಮೂಲಕ ‘ಟೆಲಿಮನಸ್‌’ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ನ ತಜ್ಞರೊಂದಿಗೆ ಮಾತನಾಡುವುದಕ್ಕೂ ಅನುವು ಮಾಡಿಕೊಡಲಾಗುತ್ತಿದೆ.

ಮಾನಸಿಕ ಆರೋಗ್ಯ ಕಾರ್ಯಕ್ರಮದ ಅನುಷ್ಠಾನದಲ್ಲಿ ನೆರವು ಪಡೆಯುವುದಕ್ಕಾಗಿ ಮೈಸೂರಿನ ಎಪಿಡಿ ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಗರದ  ಕೆ.ಆರ್. ಆಸ್ಪತ್ರೆಯಲ್ಲಿ ಮಾನಸಿಕ ರೋಗಿಗಳಿಗೆ ನೆರವಾಗಲೆಂದೇ ಪ್ರತ್ಯೇಕ ವಿಭಾಗವನ್ನು (ನಿಗದಿತ ಕೊಠಡಿಯಲ್ಲಿ) ಆರಂಭಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಆರೋಗ್ಯ ಇಲಾಖೆಯಿಂದ ಆಪ್ತಸಮಾಲೋಚನೆ ಆರೋಗ್ಯ ಕೇಂದ್ರಗಳಲ್ಲಿ ಮನೋಚೈತನ್ಯ ಕ್ಲಿನಿಕ್‌  ಪಿಎಚ್‌ಸಿಗಳಿಗೆ ಭೇಟಿ ನೀಡುವ ತಂಡ

ಯುವಜನರಲ್ಲಿ ಖಿನ್ನತೆ ಹೆಚ್ಚಳ!

ಯುವಕರಲ್ಲಿ ಖಿನ್ನತೆ (ಡಿಪ್ರೆಷನ್) ಹೆಚ್ಚಾಗುತ್ತಿರುವುದನ್ನು ‘ಮನೋಚೈತನ್ಯ ಕ್ಲಿನಿಕ್‌’ನಲ್ಲಿ ಆಪ್ತಸಮಾಲೋಚನೆ ನಡೆಸುವ ವೈದ್ಯರು ಗುರುತಿಸಿದ್ದಾರೆ. ಈ ಕ್ಲಿನಿಕ್‌ನಲ್ಲಿ ದಾಖಲಾಗಿರುವ ಪ್ರಕರಣಗಳ ಪ್ರಕಾರ ಯುವಕ– ಯುವತಿಯರು ಹಲವು ಕಾರಣಗಳಿಂದಾಗಿ ಖಿನ್ನತೆಗೆ ಒಳಗಾಗಿರುವುದು ಹಾಗೂ ಜೀವನದಲ್ಲಿ ಜುಗುಪ್ಸೆ ಅನುಭವಿಸುತ್ತಿರುವುದು ವರದಿಯಾಗಿದೆ. ‘ಶಿಕ್ಷಣಕ್ಕೆ ತಕ್ಕಂತೆ ಕೆಲಸ ಸಿಗದಿರುವುದು ನಿರುದ್ಯೋಗ ಸಮಸ್ಯೆ ‍ಪ್ರೇಮ ವೈಫಲ್ಯ ಮೊದಲಾದ ಕಾರಣಗಳಿಂದ ಬಹಳಷ್ಟು ಯುವಕರಲ್ಲಿ ಖಿನ್ನತೆ ಹೆಚ್ಚಾಗಿರುವುದು ಕಂಡುಬಂದಿದೆ. ದ್ವಿಚಕ್ರವಾಹನ ಸವಾರಿ ಹಾಗೂ ವಾಹನಗಳನ್ನು ಚಲಾಯಿಸುವಾಗ ಹುಚ್ಚು ಸಾಹಸ ಮಾಡಬೇಕು ಘಟ್ಟ ಪ್ರದೇಶಗಳಲ್ಲಿ ವಾಹನಗಳಲ್ಲಿ ಅತ್ಯಂತ ವೇಗವಾಗಿ ಹೋಗಬೇಕು ಎಂಬಿತ್ಯಾದಿ ಮನೋಭಾವ ಜಾಸ್ತಿ ಆಗುತ್ತಿರುವುದು ಕಳವಳ ಮೂಡಿಸುತ್ತಿದೆ. ಮದ್ಯಪಾನ ಧೂಮಪಾನದ ಚಟಕ್ಕೆ ಒಳಗಾಗುವವರ ಪ್ರಮಾಣವೂ ಹೆಚ್ಚಾಗುತ್ತಿದೆ. ಇದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅವರನ್ನು ಆಪ್ತಸಮಾಲೋಚನೆಗೆ ಒಳಪಡಿಸಲಾಗಿದೆ’ ಎಂದು ವೈದ್ಯರು ಮಾಹಿತಿ ನೀಡಿದರು.

ನಿರಾಶ್ರಿತರಲ್ಲಿ ಸಮಸ್ಯೆಯುಳ್ಳವರಿಗೆ...

ನಿರಾಶ್ರಿತರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಕಂಡುಬಂದವರಿಗೆ ನೆರವಾಗಲೆಂದೇ ಜಿಲ್ಲಾಸ್ಪತ್ರೆಯಲ್ಲಿ 20 ಹಾಸಿಗೆ ಹಾಗೂ ಕೆ.ಆರ್‌. ಆಸ್ಪತ್ರೆಯಲ್ಲಿ 30 ಹಾಸಿಗೆಯನ್ನು ಮೀಸಲಿಡುವ ಕಾರ್ಯಕ್ರಮವನ್ನು ಈ ವರ್ಷ ಅನುಷ್ಠಾನಕ್ಕೆ ತರಲಾಗುತ್ತಿದೆ. ‘ಇದರ ನಿರ್ವಹಣೆಯನ್ನು ಸರ್ಕಾರೇತರ ಸ್ವಯಂಸೇವಾ ಸಂಸ್ಥೆ (ಎನ್‌ಜಿಒ)ಗೆ ವಹಿಸುವುದಕ್ಕೆ ಯೋಜಿಸಲಾಗಿದೆ. ರೋಗಿಗಳಿಗೆ ಮೂರು ತಿಂಗಳವರೆಗೆ ಚಿಕಿತ್ಸೆ ನೀಡಲಾಗುವುದು. ಔಷಧಿ ಊಟ ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗುವುದು. ನಂತರವೂ ಅವರನ್ನು ಫಾಲೋಅಪ್‌ ಮಾಡಲಾಗುವುದು. ಗುಣಮುಖವಾದವರನ್ನು ಅವರವರ ಮನೆಗೆ (ಇದ್ದಲ್ಲಿ) ಕಳುಹಿಸಿಕೊಡಲಾಗುವುದು. ಅಂಥವರಿಗೆ ಅಗತ್ಯವಾಗುವ ಔಷಧಿಗಳು ಹಾಗೂ ಆಪ್ತಸಮಾಲೋಚನೆಯನ್ನು ಜೀವನಪರ್ಯಂತ ಒದಗಿಸಲಾಗುವುದು’ ಎಂದು ಡಾ.ಬೃಂದಾ ಮಾಹಿತಿ ನೀಡಿದರು. ಇಬ್ಬರು ಆಪ್ತಸಮಾಲೋಚಕರನ್ನು ಗೌರವ ಸಂಭಾವನೆ ಮೇಲೆ ನಿಯೋಜಿಸಿಕೊಂಡಿದ್ದು ಅವರು ಪ್ರತಿ ವರ್ಷವೂ 12 ಭೇಟಿಗಳನ್ನು ಕೊಳೆಗೇರಿಗಳು ಸರ್ಕಾರಿ ಕಾಲೇಜು ಶಾಲೆ ಮೊದಲಾದ ಕಡೆಗಳಿಗೆ ಕೊಡುತ್ತಾರೆ. ಅಗತ್ಯವುಳ್ಳವರಿಗೆ ಆಪ್ತಸಮಾಲೋಚನೆ ನೀಡುತ್ತಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.