
ಮೈಸೂರು: ಬೆಂಗಳೂರಿನ ರಾಜಾಜಿನಗರದ ಕೌಶಿಕ್ ಡೇರಿ ಫಾರಂನ ಪೃಥ್ವಿ ಬರೋಬ್ಬರಿ 58.7 ಲೀಟರ್ ಹಾಲು ಕರೆಯುವ ಮೂಲಕ ಇಲ್ಲಿನ ಜೆ.ಕೆ. ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು.
55.25 ಲೀಟರ್ ಹಾಲು ಕರೆದ ಮೈಸೂರಿನ ಕೆ.ಜಿ.ಕೊಪ್ಪಲಿನ ಚೌಡೇಶ್ವರಿ ಡೇರಿಯ ದಿನೇಶ್ ಗೌಡ ದ್ವಿತೀಯ ಬಹುಮಾನ ಪಡೆದರು. ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಕಗ್ಗಲೀಪುರದ ತನುಶ್ ಡೇರಿ ಫಾರಂನ ರಾಮಚಂದ್ರರೆಡ್ಡಿ ಒಡೆತನದ ಹಸು 52.4 ಲೀಟರ್ ಹಾಲು ನೀಡಿ ತೃತೀಯ ಬಹುಮಾನ ಪಡೆಯಿತು. 51 ಲೀಟರ್ ಕರೆದ ಪಡುವಾರಹಳ್ಳಿ ಹರೀಶ್ ನಾಲ್ಕನೇ ಮತ್ತು 51 ಲೀಟರ್ ಕರೆದ ಮೈಸೂರಿನ ಪುರುಷೋತ್ತಮ್ ಐದನೇ ಬಹುಮಾನ ಪಡೆದರು.
ಮೈಸೂರು ನಗರ ಗೋಪಾಲಕರ ಸಂಘ ಮತ್ತು ಪಶು ಸಂಗೋಪನಾ ಇಲಾಖೆ ಸಹಯೋಗದಲ್ಲಿ ಸಂಘದ 20ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ಎರಡು ದಿನಗಳ ಕಾಲ ನಡೆದ ಈ ಸ್ಪರ್ಧೆಯು ಎಲ್ಲರ ಗಮನ ಸೆಳೆಯಿತು. ಬೆಳಿಗ್ಗೆ 6.30ಕ್ಕೆ ಹಾಗೂ ಸಂಜೆ 5.30ಕ್ಕೆ ಮಾಲೀಕರು ತಮ್ಮ ಹಸುವಿನಿಂದ ಹಾಲು ಕರೆಯುವ ಸ್ಪರ್ಧೆ ಇದಾಗಿದ್ದು, ಎರಡು ದಿನವೂ ಕರೆದ ಹಾಲಿನ ಆಧಾರದ ಮೇಲೆ ವಿಜೇತರನ್ನು ಘೋಷಿಸಲಾಯಿತು.
ಪ್ರಥಮ ಬಹುಮಾನ ಪಡೆದ ಹಸುವಿಗೆ ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು ₹1.5 ಲಕ್ಷ ಬಹುಮಾನ ನೀಡಿದರೆ, ತೊಣಚಿಕೊಪ್ಪಲಿನ ಯ.ಜವರಯ್ಯ, ನಗರಪಾಲಿಕೆ ಮಾಜಿ ಸದಸ್ಯ ಜೆ.ಗೋಪಿ ಮತ್ತು ಮಂಡ್ಯದ ಹೊಂಬಾಳೆ ಫಾರ್ಮ್‌ನ ಮನು ದ್ವಿತೀಯ ಬಹುಮಾನವಾಗಿ ₹1 ಲಕ್ಷ ಮತ್ತು ತೃತೀಯ ಬಹುಮಾನವಾಗಿ ಕೋಲಾರದ ವೆಂಕಟೇಶ್ ಮತ್ತು ಸುಬ್ರಹ್ಮಣ್ಯ ₹75 ಸಾವಿರ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳ 18 ಮಂದಿ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ವಿಜೇತರಿಗೆ ಶಾಸಕ ಕೆ.ಹರೀಶ್ ಗೌಡ ಬಹುಮಾನ ವಿತರಿಸಿದರು. ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಕಾಂಗ್ರೆಸ್ ಮುಖಂಡರಾದ ಎಂ.ಕೆ. ಸೋಮಶೇಖರ್, ಎಚ್.ವಿ.ರಾಜೀವ್, ಮಾಜಿ ಮೇಯರ್ ಅನಂತು, ಗೋಪಾಲಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಜಯದೇವ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ. ನಾಗರಾಜು, ಡಾ. ಎಂ.ಸಿ.ಪೂರ್ಣಾನಂದ, ಪಂಜಾಬ್‌ನ ಲಕ್ವೀರ್ ಸಿಂಗ್ , ಡಾ.ರೇಖಾ ಅರುಣ್, ನಗರಪಾಲಿಕೆ ಮಾಜಿ ಸದಸ್ಯ ಜೆ.ಗೋಪಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.