
ಮೈಸೂರು: ‘ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹಧನ ಹೆಚ್ಚಳಕ್ಕೆ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗುವುದು’ ಎಂದು ಸಚಿವ ಡಾ. ಎಚ್.ಸಿ.ಮಹದೇವಪ್ಪ ಹೇಳಿದರು.
ಇಲ್ಲಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆಯಿಂದ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ಭಾನುವಾರ ನಡೆದ ಜಿಲ್ಲಾಮಟ್ಟದ ಸಿರಿಧಾನ್ಯ ಹಬ್ಬ, ಅರಿವು ಕಾರ್ಯಕ್ರಮ, ಸಿರಿಧಾನ್ಯ ಸಂಸ್ಕರಣೆ, ಮೌಲ್ಯ ಸರಪಣಿ ಕುರಿತು ಉತ್ಪಾದಕರು, ಮಾರುಕಟ್ಟೆದಾರರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ರೈತರು ಸಿರಿಧಾನ್ಯ ಹೆಚ್ಚು ಬೆಳೆಯಲು ಮುಂದಾಗಬೇಕು, ಜನರ ಆರೋಗ್ಯ ರಕ್ಷಣೆಯಲ್ಲಿ ಇದು ಪ್ರಮುಖ ಕೊಡುಗೆ ನೀಡಲಿದೆ. ಈ ಧಾನ್ಯವನ್ನು ಬಳಸಿ ವಿವಿಧ ಉತ್ಪನ್ನಗಳ ತಯಾರಿ ಮೂಲಕ ಉತ್ತಮ ಆಹಾರ ಲಭ್ಯತೆಯನ್ನೂ ಖಾತ್ರಿ ಪಡಿಸಬೇಕು’ ಎಂದು ಮನವಿ ಮಾಡಿದರು.
‘ಕೃಷಿಯಲ್ಲಿ ತೊಡಗಿರುವವರು, ಆಸಕ್ತರು ಯಾವಾಗಲೂ ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಭೂಮಿಯ ಫಲವತ್ತತೆ ಮತ್ತು ಆಹಾರದಲ್ಲಿ ಪೋಷಕಾಂಶ ಉಳಿವಿಗೆ ಇದು ಅಗತ್ಯ’ ಎಂದು ಕಿವಿಮಾತು ಹೇಳಿದರು.
ಸಂವಾದದಲ್ಲಿ ಉದ್ಯಮಿ ಚಂದ್ರಶೇಖರ್, ‘ಸಿರಿಧಾನ್ಯ ಮೌಲ್ಯವರ್ಧನೆ ಹಾಗೂ ತ್ವರಿತ ಸಿದ್ಧ ಆಹಾರಗಳ ತಯಾರಿಕೆ’, ಪ್ರಗತಿಪರ ರೈತ ಮಹಿಳೆ ವಸಂತಮ್ಮ, ‘ಸಿರಿಧಾನ್ಯಗಳ ಮಹತ್ವ ಹಾಗೂ ಮೌಲ್ಯವರ್ಧನೆ ಕುರಿತು ಅನುಭವ ಹಂಚಿಕೆ’, ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ದೀಪಕ್, ‘ಸಿರಿಧಾನ್ಯಗಳ ಮೌಲ್ಯವರ್ಧನೆ’ ಕುರಿತು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕಲ್ಮಳ್ಳಿ ಶಿವಕುಮಾರ್ ಹಾಜರಿದ್ದರು.
ಸಿರಿಧಾನ್ಯ ನಡಿಗೆ: ಕಾರ್ಯಾಗಾರಕ್ಕೂ ಮುನ್ನ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಿಂದ ಹಳೇ ಜಿಲ್ಲಾಧಿಕಾರಿ ಕಚೇರಿವರೆಗೆ ‘ಸಿರಿಧಾನ್ಯ ನಡಿಗೆ’ ಹಮ್ಮಿಕೊಳ್ಳಲಾಗಿತ್ತು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಸಹಾಯ ನಿರ್ದೇಶಕ ಜಯರಾಮ ಅವರು ಪಾರಿವಾಳಗಳನ್ನು ಹಾರಿಬಿಟ್ಟು ಚಾಲನೆ ನೀಡಿದರು.
ನಡಿಗೆಯಲ್ಲಿ ಹಲವರು ‘ಸಿರಿಧಾನ್ಯ ಬಳಕೆ ಆರೋಗ್ಯಕ್ಕೆ ಸಹಕಾರಿ’, ‘ಸಿರಿಧಾನ್ಯ ಬಳಕೆ ರೈತರಿಗೆ ಗಳಿಕೆ’ ಎಂಬ ಸಂದೇಶವುಳ್ಳ ನಾಮ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಸಿರಿಧಾನ್ಯ ಪಾಕಸ್ಪರ್ಧೆಯ ಸಿಹಿ ಖಾದ್ಯ ವಿಭಾಗದಲ್ಲಿ ಲಕ್ಷ್ಮಿದೇವಿ ಕೃಷ್ಣ ಪ್ರಥಮ ಜಯಭಾರತಿ ದ್ವಿತೀಯ ಪ್ರೇಮಕುಮಾರಿ ತೃತೀಯ ಖಾರ ಖಾದ್ಯ ವಿಭಾಗದಲ್ಲಿ ಪ್ರೇಮಲತಾ ಇಂದ್ರಮ್ಮ ಸುಧಾಮಣಿ ಹಾಗೂ ಮರೆತುಹೋದ ಖಾದ್ಯ ವಿಭಾಗದಲ್ಲಿ ಸುಜಾತ ಅರಸ್ ಎನ್.ಉಷಾ ಎಂ.ಕೆ.ಸುಪ್ರಿಯಾ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನವನ್ನು ಹಾಗೂ ₹5 ಸಾವಿರ ₹3 ಸಾವಿರ ₹2 ಸಾವಿರ ನಗದು ಬಹುಮಾನ ಪಡೆದರು. ರಾಜ್ಯಮಟ್ಟದ ಉದಯೋನ್ಮುಖ ಕೃಷಿ ಪ್ರಶಸ್ತಿ ಪಡೆದ ಎಂ.ಚಿಕ್ಕಸ್ವಾಮಿ ಆತ್ಮ ಯೋಜನೆಯಲ್ಲಿ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಎಚ್.ಬಿ.ಜಗದೀಶ್ ವಿಶ್ವನಾಥ್ ಬಿ.ಎ.ಪ್ರಕಾಶ್ ಪಿ.ಪಿ.ಚೆಲುವರಾಜು ಬಿ.ಎಚ್.ವೆಂಕಟೇಶ್ ವೃಷಭೇಂದ್ರ ವಸಂತಕುಮಾರ್ ಕೃಷ್ಣ ಬಸವೇಗೌಡ ಎಚ್.ಎಸ್.ಮಹಾಶೇಷಭಟ್ ಅವರನ್ನು ಅಭಿನಂದಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.