ಮೈಸೂರು: ‘ರಾಜ್ಯದಲ್ಲಿನ ರೈಲ್ವೆ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಒಟ್ಟು ₹39ಸಾವಿರ ಕೋಟಿ ಮೊತ್ತದ 13 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ಇಲ್ಲಿನ ರೈಲ್ವೆ ಡಿಆರ್‌ಎಂ ಕಚೇರಿಯಲ್ಲಿ ಭಾನುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಪತ್ರಕರ್ತರ ಜೊತೆ ಅವರು ಮಾತನಾಡಿದರು.
‘ರಾಯದುರ್ಗ–ತುಮಕೂರು, ತುಮಕೂರು–ದಾವಣಗೆರೆ, ಕುಡಚಿ–ಗದಗ–ವಾಡಿ ಸೇರಿದಂತೆ 11 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇನ್ನೂ 2 ಕಾಮಗಾರಿಗಳು ಆರಂಭ ಆಗಬೇಕಿದೆ. ತುಮಕೂರಿನಲ್ಲಿ ವಿಕಸಿನ ಭಾರತ ಯೋಜನೆ ಅಡಿ ಗ್ರೀನ್‌ಫೀಲ್ಡ್ ಕಾರಿಡಾರ್ ನಿರ್ಮಾಣ ಆಗಲಿದೆ’ ಎಂದು ಮಾಹಿತಿ ನೀಡಿದರು.
ಸರಕು ಸಾಗಣೆಗೆ ಒತ್ತು:
‘ಎಲ್ಲೆಲ್ಲಿ ಬೃಹತ್ ಕೈಗಾರಿಕೆಗಳು ಇವೆಯೋ ಅಲ್ಲೆಲ್ಲ ರೈಲು ಹಳಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಕಾರ್ಖಾನೆಗಳು ರಸ್ತೆ ಮಾರ್ಗದಲ್ಲಿ ಉತ್ಪನ್ನ ಸಾಗಣೆಗೆ ಒಟ್ಟು ವೆಚ್ಚದ ಶೇ 13ರಷ್ಟು ವ್ಯಯಿಸಿದರೆ, ರೈಲಿನಲ್ಲಿ ಸಾಗಣೆಯಿಂದ ಈ ವೆಚ್ಚವು ಶೇ 6–7ಕ್ಕೆ ತಗ್ಗಲಿದೆ’ ಎಂದರು.
‘ಚಾಮರಾಜನಗರ–ಹೆಜ್ಜಾಲ, ಮೈಸೂರು–ಕುಶಾಲನಗರ ರೈಲ್ವೆ ಯೋಜನೆಗಳನ್ನು ಕೈಬಿಡುವಂತೆ ರಾಜ್ಯ ಸರ್ಕಾರ ಪತ್ರ ಬರೆದಿತ್ತು. ಈ ಯೋಜನೆಗಳನ್ನು ಮುಂದುವರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದೇನೆ. ಚಾಮರಾಜನಗರ ಸಂಸದ ಸುನೀಲ್ ಬೋಸ್ ಸ್ಪಂದಿಸಬೇಕಿದೆ’ ಎಂದು ಹೇಳಿದರು.
‘ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಯಾದಗಿರಿಯಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪಿಸಿದ್ದರು. ಇದಕ್ಕೆ ನರೇಂದ್ರ ಮೋದಿ ಸರ್ಕಾರ ₹200 ಕೋಟಿ ಅನುದಾನ ನೀಡಿದ್ದು, ದೊಡ್ಡ ಮಟ್ಟದಲ್ಲಿ ಉತ್ಪಾದನೆ ಆರಂಭ ಆಗಲಿದೆ’ ಎಂದು ತಿಳಿಸಿದರು.
‘ಕಾಮಗಾರಿ ತ್ವರಿತವಾಗಿ ಮುಗಿಸಿ’
ಮೈಸೂರು: ಮೈಸೂರು ವಿಭಾಗದಲ್ಲಿ ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಗುಣಮಟ್ಟಕ್ಕೂ ಆದ್ಯತೆ ನೀಡಬೇಕು ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಸೂಚಿಸಿದರು. ರೈಲ್ವೆ ಡಿಆರ್‌ಎಂ ಕಚೇರಿಯಲ್ಲಿ ಭಾನುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ನಾನು ಮೂರು ತಿಂಗಳಲ್ಲಿ ಹಿಂದಿ ಕಲಿತು ಮಾತನಾಡುತ್ತಿದ್ದೇನೆ. ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದಿರುವ ಅಧಿಕಾರಿಗಳು ಕನ್ನಡ ಕಲಿತು ಅದರಲ್ಲೇ ವ್ಯವಹರಿಸಬೇಕು’ ಎಂದು ಕಿವಿಮಾತು ಹೇಳಿದರು. ಡಿಆರ್‌ಎಂ ಮುದಿತ್ ಮಿತ್ತಲ್ ರೈಲ್ವೆ ಕಾಮಗಾರಿಗಳ ಕುರಿತು ವಿವರಿಸಿದರು. ‘ನಗರ ರೈಲು ನಿಲ್ದಾಣದಲ್ಲಿ ₹ 439 ಕೋಟಿ ವೆಚ್ಚದಲ್ಲಿ ಐದು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣ ಮಾಡಲಾಗುತ್ತಿದೆ. ಇದರೊಟ್ಟಿಗೆ ಸಿಬ್ಬಂದಿ ವಸತಿಗೃಹ ಕಾಮಗಾರಿ ಪ್ರಗತಿಯಲ್ಲಿದೆ. ನಾಗನಹಳ್ಳಿ ಯಾರ್ಡ್‌ಗಾಗಿ 8 ಎಕರೆ 29 ಗುಂಟೆ ಗುರುತಿಸಲಾಗಿದ್ದು ಭೂಸ್ವಾಧೀನದ ಸಮಸ್ಯೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.