ತಂಬಾಕು ಹರಾಜು ಮಾರುಕಟ್ಟೆ (ಸಾಂದರ್ಭಿಕ ಚಿತ್ರ)
ಪಿರಿಯಾಪಟ್ಟಣ: ‘ತಾಲ್ಲೂಕಿನಲ್ಲಿನ ಕೇಂದ್ರ ತಂಬಾಕು ಮಂಡಳಿಯ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆ ಸಂಖ್ಯೆ 5ರಲ್ಲಿ ರೈತರಿಂದ ಸಂಗ್ರಹಣೆ ಮಾಡಿದ್ದ ₹ 6 ಕೋಟಿಗೂ ಹೆಚ್ಚು ಹಣವನ್ನು ಬ್ಯಾಂಕಿಗೆ ಪಾವತಿಸದೆ ಅವ್ಯವಹಾರ ನಡೆಸಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ತಂಬಾಕು ಬೆಳೆಗಾರ ಗೊರಳ್ಳಿ ಅಶ್ವತ್ಥ್ ಆರೋಪಿಸಿದರು.
ಪಟ್ಟಣದ ಪತ್ರಕರ್ತ ಸಂಘದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರಿಗೆ ತಂಬಾಕು ಮಂಡಳಿ ಮುಂಗಡವಾಗಿ ₹ 49,000 ಮೌಲ್ಯದ ರಸಗೊಬ್ಬರ ವಿತರಿಸುತ್ತಿದ್ದು, ಬಳಿಕ ಸಿಬ್ಬಂದಿಯು ಈ ಹಣವನ್ನು ರೈತರು ತಂಬಾಕು ಮಾರಾಟ ಮಾಡಿದಾಗ ಕಡಿತ ಮಾಡಿಕೊಂಡು ಕೆನರಾ ಬ್ಯಾಂಕಿಗೆ ಪಾವತಿಸಬೇಕಾಗಿತ್ತು, ಆದರೆ ಬ್ಯಾಂಕಿಗೆ ಪಾವತಿಸದೆ ತಮ್ಮ ಇಷ್ಟ ಬಂದ ಜನರ ಖಾತೆಗಳಿಗೆ ವರ್ಗಾಯಿಸಿಕೊಂಡು ಹಣ ಲೂಟಿ ಮಾಡಲಾಗಿದೆ. ಅಧಿಕಾರಿಗಳ ಪ್ರೋತ್ಸಾಹವಿಲ್ಲದೆ ಹಗರಣ ಮಾಡಲು ಸಾಧ್ಯವಿಲ್ಲ’ ಎಂದರು.
‘ತಂಬಾಕು ಮಂಡಳಿಯಲ್ಲಿ ಪ್ರತಿ ವರ್ಷ ಲೆಕ್ಕ ಪರಿಶೋಧನೆ ಮಾಡಿಸುವ ಪದ್ಧತಿ ಇದ್ದು, ಹಗರಣ ಆಗಿರುವಂತಹ ವರ್ಷಗಳಲ್ಲಿ ಯಾವ ಕಾರಣಕ್ಕೆ ಆಡಿಟ್ ಆಗಿಲ್ಲ, ಅಥವಾ ಆಗಿದ್ದರೆ ಏಕೆ ಅಧಿಕಾರಿಗಳು ಈ ವಿಷಯವನ್ನು ಬಹಿರಂಗ ಪಡಿಸಿಲ್ಲ. ರೈತರ ಕೋಟಿಗಟ್ಟಲೇ ಹಣ ವಂಚನೆ ನಡೆದಿದ್ದರೂ ಪೋಲಿಸ್ ಠಾಣೆಗೆ ದೂರು ನೀಡಿ ಕ್ರಿಮಿನಲ್ ಪ್ರಕರಣವನ್ನು ಏಕೆ ದಾಖಲಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಇದುವರೆಗೂ ಏಕೆ ಅಮಾನತು ಮಾಡಿಲ್ಲ’ ಎಂದು ಪ್ರಶ್ನಿಸಿದರು.
‘ಹಣ ವರ್ಗಾವಣೆ ಮಾಡಲು ಒಬ್ಬ ಹೊರಗುತ್ತಿಗೆಯ ನೌಕರನಿಗೆ ಅಧಿಕಾರ ನೀಡಲಾಗಿತ್ತು, ಹಿಂದೆ ಇದ್ದ ತಂಬಾಕು ಮಂಡಳಿ ನಿರ್ದೇಶಕರಿಗೆ ಈ ವಿಷಯದತ್ತ ಯಾಕೆ ಗಮನ ಹರಿಸಲಿಲ್ಲ. ರೈತರ ಹಣ ವಂಚನೆಯ ಸಮಯದಲ್ಲಿದ್ದ ಅಧಿಕಾರಿಗಳ(ರೀಜನಲ್ ಮ್ಯಾನೆಜರ್, ಹರಾಜು ಅಧೀಕ್ಷಕರು, ಮ್ಯಾನೇಜರ್) ವಿರುದ್ಧ ತನಿಖೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಸಾಲ ನೀಡಿದ ಕೆನರಾ ಬ್ಯಾಂಕ್ ಕೂಡ ರೈತರಿಗೆ ರಸಗೊಬ್ಬರ ವಿತರಿಸಲು ಪಡೆದುಕೊಂಡ ಹಣವನ್ನು ಏಕೆ ಹಿಂತಿರುಗಿಸಿಲ್ಲ ಎಂದು ತಂಬಾಕು ಮಂಡಳಿಗೆ ನೊಟೀಸ್ ನೀಡಿಲ್ಲ ಹಾಗೂ ವಿಚಾರವನ್ನು ಗೌಪ್ಯವಾಗಿ ಇಟ್ಟಿದೆ. ಈ ಬಗ್ಗೆಯೂ ಸಹ ಸೂಕ್ತ ತನಿಖೆಯಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.